ಹೊನ್ನಾವರ: ಉತ್ತರಕನ್ನಡ ಜಿಲ್ಲೆ 10,24,679 ಹೆಕ್ಟೇರ್ ವಿಸ್ತಾರವಾಗಿದ್ದು, 8,15,202 ಹೆಕ್ಟೇರ್ ಭೂಮಿ ಸರ್ಕಾರ ಅಂದರೆ ಅರಣ್ಯ ಇಲಾಖೆ ಅಧೀನದಲ್ಲಿದೆ. ಉಳಿದ 2,09,477 ಹೆಕ್ಟೇರ್ ಕಂದಾಯ ಭೂಮಿ ಮಾತ್ರ ಜನರಿಗೆ ಸೇರಿದ್ದು. ತಲಾ 2ಗುಂಟೆ ಮಾತ್ರ ರೈತ ಭೂ ಮಾಲಿಕರ ಪಾಲಿಗೆ ಬರುತ್ತದೆ. ಸರ್ಕಾರಿ ಯೋಜನೆಗಳ ವೈಪರೀತ್ಯ, ಕಾರ್ಯಾಂಗ, ಶಾಸಕಾಂಗಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ನಿಸರ್ಗದಲ್ಲಿ ನಿತ್ಯ ಸ್ಥಿತ್ಯಂತರವಾಗುತ್ತಿದೆ. ಇದರ ಪರಿಣಾಮ ಅಂಗೈ ಅಗಲದ ಕಂದಾಯ ಭೂಮಿ ಇರುವ ಜಿಲ್ಲೆಯ ಬಡವರ ಮೇಲಾಗುತ್ತಿದೆ.
ಸರ್ಕಾರ ಬೊಕ್ಕಸ ತುಂಬಿಸಿಕೊಳ್ಳಲು ಪ್ರತಿವರ್ಷವೂ ಅರಣ್ಯ ಸಂಪತ್ತನ್ನು ಕಟಾವು ಮಾಡಲು ಗುತ್ತಿಗೆ ನೀಡುತ್ತಿತ್ತು. ಇದರಿಂದ ಗುತ್ತಿಗೆದಾರರು, ಬಹುಪಾಲು ಅಧಿಕಾರಿಗಳು ಶ್ರೀಮಂತರಾದರು. ಅರಣ್ಯ ನಾಶವಾಗುತ್ತ ಬಂದಂತೆ ಅರಣ್ಯ ಕಾರ್ಮಿಕರ ಸಹಕಾರಿ ಸಂಘದ ಹೆಸರಿನಲ್ಲಿ ಇನ್ನಷ್ಟು ಲೂಟಿ ನಡೆಯಿತು. ನಿಂತ, ಸತ್ತ ಮರಗಳನ್ನು ಮಾತ್ರ ಕಡಿದರು. ಅರಣ್ಯ ಶೇ. 80ರಿಂದ 40ಕ್ಕಿಳಿಯಿತು. ನಂತರ ಸರ್ಕಾರ ಎಚ್ಚೆತ್ತು ಗಿಡನೆಡಲು ಹಣ ಚೆಲ್ಲತೊಡಗಿತು. ಶೇ. 25ರಷ್ಟು ಗಿಡ ಬೆಳೆಯಲೇ ಇಲ್ಲ. ನಂತರ ಬಂದ ಅರಣ್ಯ ಕಾನೂನು ರೈತರು ತರಗೆಲೆಯನ್ನು ತರೆದಂತೆ ಮಾಡಿದೆ. ಪ್ಲಾಂಟೇಶನ್, ಟೀಕ್, ಫಾರೆಸ್ಟ್ ಇಂಡಸ್ಟ್ರೀ, ಕ್ಯಾಶ್ಯೂ ಡೆವಲಪಮೆಂಟ್ ಹೀಗೆ ಹಲವು ನಿಗಮಗಳನ್ನು ಮಾಡಿ ಹೊಸಹುದ್ದೆ ಸೃಷ್ಠಿಸಿ, ಅರಣ್ಯ ಸಂಪತ್ತನ್ನು ಖಾಲಿ ಮಾಡುತ್ತ ಬಂದಿದ್ದು ಈಗ ಅರಣ್ಯ ಆದಾಯ ಇಲಾಖೆಯ ಸಂಬಳಕ್ಕೆ ಸಾಲುತ್ತಿಲ್ಲ. ಆದರೂ ಗಿಡಗಳಿಲ್ಲದಿದ್ದರೂ ಇಲಾಖೆ ಭೂ ಒಡೆತನ ಹೊಂದಿದೆ. ಕೇಳಿದರೆ ರಸ್ತೆ, ಶಾಲೆ, ಆಸ್ಪತ್ರೆಗೂ ಭೂಮಿ ಸಿಕ್ಕುವುದಿಲ್ಲ. ಅರಣ್ಯಕ್ಕೆ ಪರ್ಯಾಯವಾಗಿ ಕೈಗಾರಿಕೆಯನ್ನು ಕೊಡದ ಕಾರಣ ಅಗಾಧ ಪ್ರಮಾಣದ ಅರಣ್ಯ ಅತಿಕ್ರಮಣವಾಗಿದ್ದು 60,000 ಜನ ಅರಣ್ಯ ಭೂಮಿ ಅಭೋಗದ ಹಕ್ಕಿಗಾಗಿ ಕಾದಿದ್ದಾರೆ. ಸರ್ಕಾರ ತ್ರಿಶಂಕು ಸ್ಥಿತಿಯಲ್ಲಿ ಜನರನ್ನು ಇಟ್ಟಿದೆ.
ಈ ಪರಿಸ್ಥಿತಿಯಲ್ಲಿ ನೌಕಾನೆಲೆ, ಕೊಂಕಣ ರೇಲ್ವೆ, ಕೈಗಾ, ಶರಾವತಿ ಟೇಲರೀಸ್, ಮೊದಲಾದ ಯೋಜನೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಜಿಲ್ಲೆಯ ಭೂಮಿ, ಜಲ್ಲಿ, ಕಲ್ಲು, ಮಣ್ಣು, ಮರಳು ಬಳಕೆಯಾಗಿದೆ, ಭೂ ಸ್ಥಿತ್ಯಂತರವಾಗಿದೆ. ಚತುಷ್ಪಥಕ್ಕಾಗಿ ಇನ್ನಷ್ಟು ಭೂ ಬಳಕೆಯಾಗಿದೆ. ಈ ಯೋಜನೆಗಳ ಲಾಭ ರಾಜ್ಯ, ಕೇಂದ್ರ ಬೊಕ್ಕಸಕ್ಕೆ ಹರಿದು ಹೋಗುತ್ತಿದೆ. ಶೇ. 10ರಷ್ಟು ಉದ್ಯೋಗವೂ ಜಿಲ್ಲೆಗೆ ಸಿಗಲಿಲ್ಲ. ವಿದ್ಯಾವಂತ ಜನ ಅನ್ನ ಅರಸಿಕೊಂಡು ಜಿಲ್ಲೆ ಬಿಟ್ಟವರು ಹೆಚ್ಚು. ಜಿಲ್ಲೆ ವೃದ್ಧಾಶ್ರಮದಂತಾಗಿದೆ. ಈಗ ಹರಿಯುವ ನೀರಿಗೂ ಯೋಜನೆಗಳಿಂದಾಗಿ ದಿಗ್ಬಂಧನವಾಗಿದೆ. ರೈಲು ಮತ್ತು ಚತುಷ್ಪಥ ಎರಡೂ ಬದಿಯ ಗದ್ದೆ ಬರಡಾಗಿದೆ. ಮಳೆಗಾಲದ ನೀರು ನಿಂತು ಬೆಳೆ ಕೊಳೆಯುತ್ತದೆ. ಈ ಭೂಮಿ ಖರೀದಿಸಿ ಮಣ್ಣು ತುಂಬಲಾಗಿದೆ. ಆದ್ದರಿಂದ ಮಳೆ ಬಂದೊಡನೆ ತೋಟ, ಮನೆ, ನುಗ್ಗುವ ನೀರು ಧರೆಯನ್ನು ಉರುಳಿಸಿ, ಕಟ್ಟಡದ ಗೋಡೆಗೆ ಅಪ್ಪಳಿಸುವ ಕಲ್ಲು ಕಟ್ಟಡ ಒಡೆದು ನುಗ್ಗಿದೆ. ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಜಿಲ್ಲೆಯಲ್ಲಿ 10ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಇರುವ ರೈತರ ಸಂಖ್ಯೆ ಕೇವಲ 405. 2-4 ಹೆಕ್ಟೇರ್ ಇರುವ ಮಧ್ಯಮ ವರ್ಗದ ರೈತರ ಸಂಖ್ಯೆ 15,254. 1-2 ಹೆಕ್ಟೇರ್ ಭೂಮಿ ಇರುವ ಸಣ್ಣ ರೈತರ ಸಂಖ್ಯೆ 26,587. ಅತಿಸಣ್ಣ 1-ಕಡಿಮೆ ಹೆಕ್ಟೇರ್ ಭೂಮಿ ಇರುವ ರೈತರು 94,161. ಒಟ್ಟೂ 42,246 ಇದರ ಎರಡು ಪಟ್ಟು 94,161 ಅತಿಸಣ್ಣ ರೈತರಿದ್ದಾರೆ. ಇವರಿಗೆ ಧ್ವನಿಯೇ ಇಲ್ಲ. ಕಡಿಮೆ ಹಿಡುವಳಿ ಲಾಭದಾಯಕ ಅಲ್ಲ ಎಂದು ಗೊತ್ತಿದ್ದೂ ಅನಿವಾರ್ಯವಾಗಿ ಭೂಮಿ ನಂಬಿಕೊಂಡಿದ್ದಾರೆ. ಸರ್ಕಾರದ ಕೆಲಸಗಳು ಜಿಲ್ಲೆಯ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ. 13 ಲಕ್ಷ ಜನಸಂಖ್ಯೆಯಲ್ಲಿ 2,78,338 ಜನಕ್ಕೆ ಮಾತ್ರ ಭೂಮಿ ಇದೆ. ಉಳಿದವರು ಅತಿಕ್ರಮಣದಾರರು ಮತ್ತು ಕೂಲಿ ಕಾರ್ಮಿಕರು. ನೌಕರಸ್ಥರ ಸಂಖ್ಯೆ ಲಕ್ಷ ಮೀರುವುದಿಲ್ಲ. ಇವರ ಹಿತಾಸಕ್ತಿಗೆ ಯಾವ ಮಹತ್ವದ ಕೊಡುಗೆಯನ್ನೂ ನೀಡದ ಸರ್ಕಾರ ನೌಕಾನೆಲೆ ವಿಸ್ತರಣೆ, ವಿಮಾನ ನಿಲ್ದಾಣ ನಿರ್ಮಾಣದಂತಹ ಯೋಜನೆಯನ್ನು ಹೇರುತ್ತಿದೆ. ಇದು ವಾಸ್ತವಿಕ ಸಂಗತಿ.
ರೈತರಿಗೆ ಭೂ ಸುಧಾರಣಾ ಕಾಯ್ದೆಯ ಒಡೆತನ ಬಂದಿದ್ದರೂ ಸರ್ಕಾರಿ ಒಡೆಯನ ಕಾಟ ತಪ್ಪಿಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಪ್ರವಾಹ, ಭೂಕುಸಿತ, ಮನೆ, ಮಠಗಳಿಗೆ ಹಾನಿ ಇದು ವಾರ್ಷಿಕ ಕಾರ್ಯಕ್ರಮವಾಗಿದೆ. ಪ್ರತಿವರ್ಷ ಹೀಗೆ ಆದರೆ ಸುಧಾರಿಸಿಕೊಳ್ಳುವುದು ಹೇಗೆ?
•ಜೀಯು, ಹೊನ್ನಾವರ