Advertisement

NEP ರದ್ದು: ಪುನರ್‌ ಪರಿಶೀಲಿಸದಿದ್ದರೆ ಜನಾಂದೋಲನ

12:05 AM Aug 16, 2023 | Team Udayavani |

ಬೆಂಗಳೂರು: ಮಕ್ಕಳ ಭವಿಷ್ಯವನ್ನು ಕಡೆಗಣಿಸಿ ಕೇವಲ ರಾಜಕಾರಣಕ್ಕಾಗಿ ಎನ್‌ಇಪಿ ರದ್ದು ಮಾಡುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

Advertisement

ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ಕಾಲಘಟ್ಟಕ್ಕೆ ಅನುಗುಣವಾಗಿ ನೂತನ ಶಿಕ್ಷಣ ನೀತಿಯನ್ನು (ಎನ್‌ಇಪಿ) ರೂಪಿಸಲಾಗಿದೆ. ಎನ್‌ಇಪಿ ಕರಡಿಗೆ ಸಿದ್ದರಾಮಯ್ಯನವರ 2013-18ರ ಅವಧಿಯ ಸರಕಾರ ಒಪ್ಪಿಗೆ ಕೊಟ್ಟಿತ್ತು. ಅದರ ನೇತೃತ್ವವನ್ನು ಕಸ್ತೂರಿ ರಂಗನ್‌ ಅವರು ವಹಿಸಿದ್ದರು. ಕರ್ನಾಟಕದ ಶಿಕ್ಷಣ ನೀತಿ ರಚಿಸಿದ್ದ ಕಸ್ತೂರಿ ರಂಗನ್‌ ಅವರೇ ಇಡೀ ದೇಶದ ಎನ್‌ಇಪಿ ಮಾಡಿದ್ದಾರೆ ಎಂದು ವಿವರಿಸಿದರು. ಇದು ಮಕ್ಕಳ ಭವಿಷ್ಯದ ಬಗ್ಗೆ ಚೆಲ್ಲಾಟ ಎಂದು ಆಕ್ಷೇಪಿಸಿದರು.

ದೊಡ್ಡ ಹಿನ್ನಡೆ ಆಗಲಿದೆ
ಇಡೀ ದೇಶದಲ್ಲಿ ಇರುವ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಇಲ್ಲದಿದ್ದರೆ ನಮ್ಮ ಮಕ್ಕಳು ಪೈಪೋಟಿ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಹಳ ದೊಡ್ಡ ಹಿನ್ನಡೆ ಆಗಲಿದೆ. ಸಿದ್ದರಾಮಯ್ಯನವರು ರಾಜಕೀಯ ಕಾಮಾಲೆ ಕಣ್ಣಿನಿಂದ ನೋಡದೆ ಮಕ್ಕಳ ಉಜ್ವಲ ಭವಿಷ್ಯವನ್ನು ನೋಡಬೇಕು. ಈ ವಿಚಾರವನ್ನು ಪುನರ್‌ ವಿಮರ್ಶೆ ಮಾಡಬೇಕು. ಇಲ್ಲವಾದರೆ ಪಾಲಕರು, ಶಿಕ್ಷಣ ಸಂಸ್ಥೆಗಳ ಜತೆಗೂಡಿ ಬಿಜೆಪಿ ದೊಡ್ಡ ಆಂದೋಲನ ಮಾಡುವುದು ಅನಿವಾರ್ಯವಾಗಲಿದೆ ಎಂದರು.

ತನಿಖೆ ಹೆಸರಿನಲ್ಲಿ ಚೌಕಾಸಿ ವ್ಯಾಪಾರ
ಸಿದ್ದರಾಮಯ್ಯನವರು ನಮ್ಮ ಅಧಿಕಾರ ಅವಧಿಯ ಕಾಮಗಾರಿಗಳ ತನಿಖೆ ಮಾಡುವುದಾಗಿ ಹೇಳಿ ಮೂರು ತಿಂಗಳಾಗಿದೆ. ಹಲವು ವರದಿಗಳು ಬಂದಿದ್ದು, ಅದರಲ್ಲಿ ಏನೂ ಇಲ್ಲವೆಂದು ಗೊತ್ತಾಗಿ ಮರು ತನಿಖೆ ಮಾಡುತ್ತಿದ್ಧಾರೆ. ರಾಜಕೀಯ ಪ್ರೇರಿತ ತನಿಖೆಗಳು ನಡೆಯುತ್ತಿವೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಲಿ. ತನಿಖೆ ಹೆಸರಿನಲ್ಲಿ ತಿಂಗಳುಗಟ್ಟಲೆ ಚೌಕಾಸಿ ವ್ಯಾಪಾರ ಮಾಡಲು ಉಪಯೋಗ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಎನ್‌ಇಪಿ; ಬಿಜೆಪಿ ರಾಜ್ಯಗಳಲ್ಲಿ ಮೊದಲು ಜಾರಿ ಆಗಲಿ
ಬೆಂಗಳೂರು: ಎನ್‌ಇಪಿ ಮೊದಲು ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಜಾರಿಗೆ ತರಲಿ. ಕರ್ನಾಟಕದ ಮೇಲೆಯೇ ಯಾಕೆ ಕಣ್ಣು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೇಲಿನ ದ್ವೇಷದಿಂದ ಎನ್‌ಇಪಿ ರದ್ದು ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ್‌, ಮಧ್ಯಪ್ರದೇಶ, ಹರ್ಯಾಣ ಇದೆಲ್ಲ ಏಕೆ ಎನ್‌ಇಪಿ ಜಾರಿಗೆ ತಂದಿಲ್ಲ? ಮೊದಲು ಅಲ್ಲಿ ಜಾರಿ ಮಾಡಲಿ. ಅವರಿಗೆ ಕರ್ನಾಟಕದ ಮೇಲೆ ಏಕೆ ಕಣ್ಣು? ಎಂದು ಕೇಳಿದರು.

Advertisement

ನಾಗ್ಪುರ ಎಜುಕೇಷನ್‌ ಪಾಲಿಸಿ
ಎನ್‌ಇಪಿ ಅಂದರೆ ನಾಗ್ಪುರ ಎಜುಕೇಷನ್‌ ಪಾಲಿಸಿ. ಅದು ನಮಗೆ ಬೇಕಾಗಿಲ್ಲ. ನಮ್ಮ ಮಕ್ಕಳ ಭವಿಷ್ಯದ ಜತೆ ಆಟವಾಡಲು ಬಿಡುವುದಿಲ್ಲ. ಇಷ್ಟು ದಿನ ನಮ್ಮ ರಾಜ್ಯದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇತ್ತು. ಇಲ್ಲಿ ಓದಿರುವವರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ನಮ್ಮ ಶಿಕ್ಷಣ ನೀತಿ ಬಗ್ಗೆ ನಮಗೆ ಹೆಮ್ಮೆ ಇದೆ. ಎನ್‌ಇಪಿ ರದ್ದು ಮಾಡುವುದಾಗಿ ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ರಾಜ್ಯ ಪಟ್ಟಿಯಲ್ಲಿ ಬರುವ ವಿಷಯದ ಬಗ್ಗೆ ಅವರಿಗೆ ಚಿಂತೆ ಬೇಡ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next