Advertisement

FMR ರದ್ದು: ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ

10:41 PM Feb 08, 2024 | Team Udayavani |

ಭಾರತ ಮತ್ತು ಮ್ಯಾನ್ಮಾರ್‌ ದೇಶಗಳ ಗಡಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತಾಗಿನ ಒಪ್ಪಂದ(ಎಫ್ಎಂಆರ್‌)ವನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ. ಇದರೊಂದಿಗೆ 5 ವರ್ಷಗಳಿಂದ ಜಾರಿಯಲ್ಲಿದ್ದ ಉಭಯ ದೇಶಗಳ ನಡುವಣ ಗಡಿಯ ಸಮೀಪದ 16 ಕಿ.ಮೀ. ವ್ಯಾಪ್ತಿಯಲ್ಲಿ ಜನರು ಯಾವುದೇ ದಾಖಲೆಗಳಿಲ್ಲದೆ ಪರಸ್ಪರ ಪ್ರದೇಶಗಳಲ್ಲಿ ಮುಕ್ತವಾಗಿ ಸಂಚರಿಸಲು ಇದ್ದ ಅನುಮತಿಯನ್ನು ಹಿಂಪಡೆದಿದೆ. ತನ್ಮೂಲಕ ಕೇಂದ್ರ ಸರಕಾರ, ಮ್ಯಾನ್ಮಾರ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕಿಂತಲೂ ದೇಶದ ಆಂತರಿಕ ಭದ್ರತೆ ತನ್ನ ಮೊದಲ ಆದ್ಯತೆ ಎಂಬುದನ್ನು ಮತ್ತೂಮ್ಮೆ ಸಾರಿ ಹೇಳಿದೆ.

Advertisement

ದೇಶದ ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಉಗ್ರಗಾಮಿ ಸಂಘಟನೆಗಳು ಎಫ್ಎಂಆರ್‌ ಒಪ್ಪಂದದ ದುರ್ಲಾಭ ಪಡೆದುಕೊಳ್ಳುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ ಅಕ್ರಮ ವಲಸೆ, ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿತ್ತು. ಇನ್ನು ಮಣಿಪುರದಲ್ಲಿ ಕಳೆದೊಂದು ವರ್ಷದಿಂದೀಚೆಗೆ ಪದೇಪದೆ ಹಿಂಸಾಚಾರ ಮರುಕಳಿಸುತ್ತಿರುವು ದರಿಂದ ಎಫ್ಎಂಆರ್‌ ಒಪ್ಪಂದದ ರದ್ದತಿಗೆ ಈಶಾನ್ಯ ರಾಜ್ಯಗಳ ಬಹುಸಂಖ್ಯಾಕ ಸಮುದಾಯಗಳಿಂದ ಬಲವಾದ ಆಗ್ರಹಗಳು ಕೇಳಿಬರಲಾರಂಭಿಸಿದ್ದವು.

ಇದನ್ನು ಪರಿಗಣಿಸಿ ಮಣಿಪುರ ಸರಕಾರ ಈ ಸಂಬಂಧ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿತ್ತು. ಕೇಂದ್ರದ ಗೃಹ ಸಚಿವಾಲಯ ಪರಿಸ್ಥಿತಿಯ ಸೂಕ್ಷ್ಮ ಅವಲೋಕನ ನಡೆಸಿ, ಮ್ಯಾನ್ಮಾರ್‌ನೊಂದಿಗಿನ ಎಫ್ಎಂಆರ್‌ ಒಪ್ಪಂದ ರದ್ದುಗೊಳಿಸಿರುವುದು ಸಮಂಜಸ ನಿರ್ಧಾರವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಮ್ಯಾನ್ಮಾರ್‌ನ ಅಕ್ರಮ ವಲಸಿಗರ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಇಂಥ ನಿರ್ಧಾರದ ಅಗತ್ಯವಿತ್ತು.

ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮತ್ತು ಭಾರತ ಮತ್ತು ಮ್ಯಾನ್ಮಾರ್‌ ನಡುವಣ ಸಂಬಂಧ ಸುಧಾರಣೆಯ ದೃಷ್ಟಿಯಿಂದ ಕೇಂದ್ರ ಸರಕಾರ 2018ರಲ್ಲಿ ತನ್ನ “ಆಕ್ಟ್ ಈಸ್ಟ್‌ ನೀತಿ’ಯಡಿ ಈ ಒಪ್ಪಂದವನ್ನು ಮಾಡಿಕೊಂಡಿತ್ತು. ಆರಂಭದಲ್ಲಿ ಈ ಒಪ್ಪಂದದಿಂದಾಗಿ ಗಡಿ ಪ್ರದೇಶದ ಜನರ ನಡುವೆ ಸಾಮರಸ್ಯ ಮೂಡಿ, ವ್ಯವಹಾ ರಗಳು ಕುದುರಿದ್ದವು. ಕಾಲಕ್ರಮೇಣ ಬುಡಕಟ್ಟು ಸಮುದಾಯಗಳಿಗೆ ಸೇರಿದ ಉಗ್ರಗಾಮಿ ಸಂಘಟನೆಗಳು ತಮ್ಮ ಅಪರಾಧಿ ಮತ್ತು ದೇಶದ್ರೋಹಿ ಚಟುವ ಟಿಕೆಗಳಿಗೆ ಈ ಒಪ್ಪಂದವನ್ನು ದುರುಪಯೋಗಪಡಿಸಿಕೊಳ್ಳಲಾರಂಭಿಸಿದವು. ಈ ಬೆಳವಣಿಗೆ ಗಳಿಂದಾಗಿ ಈ ರಾಜ್ಯಗಳಲ್ಲಿ ಬಹುಸಂಖ್ಯಾಕ ಸಮುದಾಯಗಳ ಅಸ್ತಿತ್ವಕ್ಕೆ ಸಂಚಕಾರ ಬಂದೊದಗತೊಡಗಿತು. ಈ ಸಮುದಾಯಗಳು, ಬುಡಕಟ್ಟು ಸಮುದಾಯ ಗಳಿಂದ ಶೋಷಣೆ, ದೌರ್ಜನ್ಯ ಎದುರಿಸುವಂತಾಯಿತು. ಈಶಾನ್ಯ ರಾಜ್ಯಗಳು ಅದರಲ್ಲೂ ಮುಖ್ಯವಾಗಿ ಮಣಿಪುರದಲ್ಲಿ ಬಹುಸಂಖ್ಯಾಕ ಮತ್ತು ಬುಡಕಟ್ಟು ಸಮುದಾಯಗಳ ನಡುವೆ ಪದೇಪದೆ ಜನಾಂಗೀಯ ಕಲಹಗಳು ಭುಗಿಲೇಳಲಾರಂಭಿಸಿ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಾರಂಭಿಸಿತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಮ್ಯಾನ್ಮಾರ್‌ನೊಂದಿಗಿನ ಎಫ್ಎಂಆರ್‌ ಒಪ್ಪಂದವನ್ನು ರದ್ದುಗೊಳಿಸಿದ್ದೇ ಅಲ್ಲದೆ ಬಾಂಗ್ಲಾದೇಶದ ಗಡಿಯ ಮಾದರಿಯಲ್ಲಿ ಮ್ಯಾನ್ಮಾರ್‌ನೊಂದಿಗಿನ 1,643 ಕಿ.ಮೀ. ಗಡಿಯುದ್ದಕ್ಕೂ ಮುಳ್ಳು ತಂತಿ ಬೇಲಿಯನ್ನು ನಿರ್ಮಿಸುವುದಾಗಿ ಘೋಷಿಸಿದೆ. ಜತೆಯಲ್ಲಿ ಈ ಭಾಗದ ಗಡಿ ಯುದ್ದಕ್ಕೂ ಕಣ್ಗಾವಲು ಇರಿಸಲು ಸುವ್ಯವಸ್ಥಿತವಾದ ಗಸ್ತು ಟ್ರ್ಯಾಕ್‌ ನಿರ್ಮಿ ಸುವುದಾಗಿ ಹೇಳಿದೆ. ಈ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಸಮುದಾಯಗಳ ನಡುವೆ ಸೃಷ್ಟಿಯಾಗಿದ್ದ ಜನಸಂಖ್ಯಾ ಅಸಮತೋಲನದ ಭೀತಿ ದೂರವಾದಂತಾಗಿ­ದೆಯಲ್ಲದೆ ಈ ರಾಜ್ಯಗಳ ಸಮಗ್ರತೆಯನ್ನು ರಕ್ಷಿಸಿದಂತಾಗಿದೆ. ಈ ಹಿಂದೆ ಸದುದ್ದೇಶದಿಂದ ಕೇಂದ್ರ ಸರಕಾರ ಮ್ಯಾನ್ಮಾರ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ದೇಶದ ಸಮ ಗ್ರತೆಗೆ ಧಕ್ಕೆಯಾಗುತ್ತಿರುವುದನ್ನು ಕೊನೆಗೂ ಮನಗಂಡ ಕೇಂದ್ರ ಸರಕಾರ ಒಪ್ಪಂದವನ್ನು ರದ್ದುಗೊಳಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next