ಅಂಬರೀಶ್ ನಿಧನದ ವೇಳೆ ಸುಮಲತಾ ಅವರು ಅಳುತ್ತಿದ್ದರೆ, ಅಭಿಷೇಕ್ ಕಣ್ಣೀರು ಸುರಿಸದೇ ಧೈರ್ಯ ತೋರಿದ್ದರು. ಇದು ಸಿಎಂ ಕುಮಾರಸ್ವಾಮಿಗೂ ಅಚ್ಚರಿ ಕಂಡು ನೇರವಾಗಿ ಅಭಿಯನ್ನು ಪ್ರಶ್ನಿಸಿದ್ದಾರೆ. ಆಗ ಆಭಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಆ ಘಟನೆಯನ್ನು ಸಿಎಂ ಎಚ್‌ಡಿಕೆ, ವಿವರಿಸಿದ್ದು ಹೀಗೆ, “ಅಂಬರೀಶ್ ಪುತ್ರ ಅಭಿಷೇಕ್ ಅವರ ಧೈರ್ಯ ಮೆಚ್ಚಲೇಬೇಕು.
ಆಸ್ಪತ್ರೆಗೆ ಭೇಟಿ ಕೊಟ್ಟಾಗ, ಕಣ್ಣಲ್ಲಿ ಒಂದಿಷ್ಟೂ ನೀರು ತುಂಬಿಕೊಳ್ಳದೆ ಮೌನವಾಗಿದ್ದ. ಆ ಬಗ್ಗೆ ವಿಚಾರಿಸಿದಾಗ, “ಅಂಕಲ್ ನಾನು ದುಃಖ ಪಟ್ಟರೆ, ತಾಯಿ ಮುಂದೆ ನೋವು ತೋಡಿಕೊಂಡರೆ, ಅವರಿಗೆ ಆಘಾತ ಆಗುತ್ತೆ. ಹಾಗಾಗಿ, ನಾನು ಎಷ್ಟೇ ನೋವಾದರೂ, ಅಳು ಬಂದರೂ ತೋರಿಸಿಕೊಳ್ಳಲಾಗುತ್ತಿಲ್ಲ’ ಎಂದು ಹೇಳಿದಾಗ, ಎಲ್ಲೋ ಒಂದು ಕಡೆ ನನಗನ್ನಿಸಿದ್ದು, ಅಭಿ ಎಲ್ಲೂ ನೋವನ್ನು ತೋರಿಸಿಕೊಳ್ಳಲಿಲ್ಲ.
ಆ ನೋವನ್ನು ಅದುಮಿಟ್ಟುಕೊಂಡೇ, ದುಃಖೀಸುತ್ತಿದ್ದಾನೆ. ಅದೆಲ್ಲವೂ ಅಂಬರೀಶ್ ಅವರಿಂದ ಬಂದ ಗುಣ. ತಂದೆಯ ಗುಣವನ್ನೇ ಅಭಿ ಅಳವಡಿಸಿಕೊಂಡಿದ್ದಾನೆ. ಯಾವುದೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸಬೇಕು ಎಂಬುದನ್ನು ಕಲಿತಿದ್ದಾನೆ. ಅಂಬರೀಶ್ ಅವರ ಹೆಸರನ್ನು ಅವರ ಪುತ್ರ ಅಭಿಷೇಕ್ ಉಳಿಸುತ್ತಾನೆ. ಮುಂದಿನ ದಿನಗಳಲ್ಲಿ ಅಭಿಷೇಕ್ ಮೂಲಕ ನಾವು ಅಂಬರೀಶ್ ಅವರನ್ನು ಕಾಣುತ್ತೇವೆ’ ಎಂದರು.
ಅಂಬಿ ಜೊತೆ ಮಗನ ಸಿನಿಮಾ ಮಾಡುವ ಆಸೆ ಇತ್ತು: ಸಿಎಂ ಎಚ್‌ಡಿಕೆ ಅವರಿಗೆ ಅಂಬರೀಶ್ ಅವರನ್ನು ಹಾಕಿಕೊಂಡು ಪುತ್ರ ನಿಖೀಲ್‌ಗೊಂದು ಸಿನಿಮಾ ಮಾಡುವ ಆಸೆ ಇತ್ತಂತೆ. ಆ ಬಗ್ಗೆಯೂ ಹೇಳಿಕೊಂಡರು. “ನನಗೊಂದು ಆಸೆ ಇತ್ತು. ನನ್ನ ಮಗನ ಜೊತೆ ಅಂಬರೀಶ್ ಅವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು ಎಂಬುದೇ ಆ ಆಸೆ. ನನಗೆ ಡಾ.ರಾಜಕುಮಾರ್ ಮೇಲೆ ಅಪಾರ ಗೌರವ. ಹಾಗೆ ಅಂಬರೀಶ್ ಜೊತೆಗೆ ಅಪಾರ ಸ್ನೇಹವೂ ಇತ್ತು. ಅಂಬರೀಶ್ ಅವರ ಮೂರು ಚಿತ್ರಗಳನ್ನು ಸತತವಾಗಿ ಹಂಚಿಕೆ ಮಾಡಿದ್ದೇನೆ.
ಆ ಮೂಲಕ ಯಶಸ್ವಿಯಾಗಿದ್ದೂ ಹೌದು. ನಾನು ನನ್ನ ಪುತ್ರನ ಜೊತೆಗೆ ಅಂಬರೀಶ್ ಅವರಿಗೊಂದು ಸಿನಿಮಾ ಮಾಡಬೇಕು ಅಂತಾನೇ, ತೆಲುಗಿನ “ರೆಬೆಲ್’ ಚಿತ್ರದ ಹಕ್ಕು ಖರೀದಿಸಿದ್ದೆ. ಆ ಕನ್ನಡ ಚಿತ್ರದಲ್ಲಿ ಅಂಬರೀಶ್ ಅವರು ಪಾತ್ರ ಮಾಡಬೇಕು ಅಂತಾನೇ ರೈಟ್ಸ್ ತಂದಿದ್ದೆ. ಆದರೆ, ರಾಜಕೀಯ ಒತ್ತಡಗಳಿಂದಾಗಿ, ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇದೆ. ಕಲಾವಿದರ ಅಂತ್ಯಕ್ರಿಯೆ ನೋಡಿದಾಗ, ಬೇರೆ ರಾಜ್ಯಗಳಲ್ಲಿ ಕಲಾವಿದರುಗಳಿಗೆ ಇಷ್ಟೊಂದು ಗೌರವ ಸಿಕ್ಕಿರಲಿಕ್ಕಿಲ್ಲ.
ಬಹುಶಃ ಕನ್ನಡಿಗರು ಮತ್ತು ಇಲ್ಲಿನ ಸರ್ಕಾರಗಳು ಆ ರೀತಿಯ ಗೌರವ ಕೊಡುತ್ತಿರುವುದು ದೇಶಕ್ಕೆ ಮಾದರಿ. ಯಾರೋ ಒಬ್ಬರು, ಕಂಠೀರವ ಸ್ಟುಡಿಯೋದಲ್ಲಿ ಕಲಾವಿದರ ಅಂತ್ಯಕ್ರಿಯೆ ಮಾಡಿರುವುದಕ್ಕೆ ನ್ಯಾಯಾಲಯ ಮೆಟ್ಟಿಲು ಏರಿದ್ದಾರೆ. ಕಲಾವಿದರ ಸಿನಿಮಾಗಳ ಮೂಲಕ ಸರ್ಕಾರಕ್ಕೆ ಹಲವು ರೀತಿಯಲ್ಲಿ ತೆರಿಗೆ ರೂಪದಲ್ಲಿ ಹಣ ಬರುತ್ತಿದೆ. ಹೀಗಾಗಿ, ಕಲಾವಿದರಿಗೆ ಸರ್ಕಾರ ಕೊಡುವ ಗೌರವ ಇದು. ಇದರಲ್ಲಿ ಸಣ್ಣತನ ಇರಬಾರದು’ ಎಂದರು.