Advertisement

ಅಭಿನವ್‌ ಮುಕುಂದ್‌ ಸ್ಥಾನಕ್ಕೆ ಕರ್ನಾಟಕದ ಆರ್‌. ಸಮರ್ಥ್

02:50 AM Jul 12, 2017 | Team Udayavani |

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ “ಎ’ ತಂಡದಲ್ಲಿ ಅಭಿನವ್‌ ಮುಕುಂದ್‌ ಬದಲು ಕರ್ನಾಟಕದ ರವಿಕುಮಾರ್‌ ಸಮರ್ಥ್ ಆಯ್ಕೆಯಾಗಿದ್ದಾರೆ. ಕರ್ನಾಟಕದವರೇ ಆದ ಕರುಣ್‌ ನಾಯರ್‌ ನಾಯಕತ್ವದ ಈ ತಂಡ ದಕ್ಷಿಣ ಆಫ್ರಿಕಾದಲ್ಲಿ 2 ಪಂದ್ಯಗಳ ಚತುರ್ದಿನ ಕ್ರಿಕೆಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

Advertisement

ಮೊದಲು ಪ್ರಕಟಿಸಲಾದ ಭಾರತ “ಎ’ ತಂಡದಲ್ಲಿ ತಮಿಳುನಾಡಿನ ಆರಂಭಕಾರ ಅಭಿನವ್‌ ಮುಕುಂದ್‌ ಅವರಿಗೆ ಅವಕಾಶ ಲಭಿಸಿತ್ತು. ಆದರೆ ಅವರು ಭಾರತದ ಟೆಸ್ಟ್‌ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ “ಎ’ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲಾಯಿತು.

ವಿಪರ್ಯಾಸವೆಂದರೆ, ಟೆಸ್ಟ್‌ ತಂಡದಲ್ಲಿದ್ದ ಕರುಣ್‌ ನಾಯರ್‌ ಅವರನ್ನು ಭಾರತ “ಎ’ ತಂಡದ ನಾಯಕನನ್ನಾಗಿ ಗಟ್ಟಿಗೊಳಿಸಿ ಅವರನ್ನು ಶ್ರೀಲಂಕಾ ಪ್ರವಾಸದಿಂದ ಕೈಬಿಟ್ಟದ್ದು! ಈ ಜಾಗಕ್ಕೆ ರೋಹಿತ್‌ ಶರ್ಮ ಮರಳಿದ್ದಾರೆ. 
ಆರ್‌. ಸಮರ್ಥ್ ಕರ್ನಾಟಕದ ಭರವಸೆಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದು, ಕಳೆದ ರಣಜಿ ಋತುವಿನಲ್ಲಿ 702 ರನ್‌ ಬಾರಿಸಿದ ಸಾಧನೆಗೈದಿದ್ದಾರೆ. “ಎ’ ತಂಡಕ್ಕೆ ಇವರ ಸೇರ್ಪಡೆಯನ್ನು ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ ರಾವ್‌ ಖಚಿತಪಡಿಸಿದ್ದಾರೆ. ಈ ಕುರಿತು ಬಿಸಿಸಿಐಯಿಂದ ತಮಗೆ ಮಾಹಿತಿ ಬಂದಿದ್ದಾಗಿ ಹೇಳಿದ್ದಾರೆ.

ಚತುರ್ದಿನ ಸರಣಿ ಆ. 12ರಿಂದ ಆರಂಭವಾಗಲಿದೆ. ಬಳಿಕ ಆಸ್ಟ್ರೇಲಿಯ “ಎ’ ತಂಡವನ್ನೊಳಗೊಂಡ ತ್ರಿಕೋನ ಸರಣಿಯೊಂದು ನಡೆಯಬೇಕಿತ್ತಾದರೂ ಇದೀಗ ತೂಗುಯ್ನಾಲೆಯಲ್ಲಿದೆ. 
ವೇತನ ವಿಚಾರದಲ್ಲಿ ಆಸ್ಟ್ರೇಲಿಯದ ಕ್ರಿಕೆಟಿಗರು ಬಂಡೆದ್ದಿದ್ದು, ಸದ್ಯ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next