Advertisement

ಅಭಿನಂದನ್‌ ಬಿಡುಗಡೆ ರಾಜತಾಂತ್ರಿಕ ಗೆಲುವು: ಶೋಭಾ

12:30 AM Mar 02, 2019 | Team Udayavani |

ಉಡುಪಿ: ಪಾಕಿಸ್ಥಾನದ ಭಯೋತ್ಪಾದಕ ಚಟುವಟಿಕೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬಹಿರಂಗ ಪಡಿಸುವಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಷ್ಟ್ರಗಳು ಇಂದು ಭಾರತ ಪರ ನಿಂತಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Advertisement

ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ವಿದೇಶ ಯಾತ್ರೆಯನ್ನು ಕಾಂಗ್ರೆಸ್‌ ಗೇಲಿ ಮಾಡಿತ್ತು. ಆದರೆ ಪ್ರಧಾನಿ ಮೋದಿ ಅವರು ವಿದೇಶಗಳಿಗೆ ಭೇಟಿ ನೀಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ಥಾನವು ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ‌ ದೇಶ ಎಂಬುದನ್ನು ಸಾಬೀತು ಮಾಡಿದೆ. ಪಾಕಿಸ್ಥಾನವು ಅಭಿನಂದನ್‌ ಅವರನ್ನು ಬಿಡುಗಡೆ ಮಾಡಿರುವುದು ರಾಜತಾಂತ್ರಿಕ ಗೆಲುವಿಗೆ ಸಾಕ್ಷಿ ಯಾಗಿದೆ ಎಂದು ಹೇಳಿದರು. 

ತಪ್ಪಾಗಿ ಅರ್ಥೈಸಲಾಗಿದೆ
ಬಿ.ಎಸ್‌. ಯಡಿಯೂರಪ್ಪ ಅವರು ಪಾಕಿಸ್ಥಾನದ ಜತೆಗಿನ ಕದನದಿಂದ 22 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ಗೂ ಇದಕ್ಕೂ ಸಂಬಂಧವಿಲ್ಲ. ಎಲ್ಲ ಸಂದರ್ಭದಲ್ಲೂ ಅವರು 22 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಅದನ್ನೇ ಹೇಳಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.

ಪರಿಹಾರ ನೀಡಲಿ
ಸುವರ್ಣ ತ್ರಿಭುಜ ನಾಪತ್ತೆಯಾಗಿ 2 ತಿಂಗಳಾದರೂ ಕುರುಹು ಲಭಿಸದೇ ಇರುವುದರಿಂದ ರಾಜ್ಯ ಸರಕಾರ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡಬೇಕು. ನೌಕಾದಳದ ಢಿಕ್ಕಿಯಾಗಿರುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದರು. 

ಓಲೈಕೆ ರಾಜಕಾರಣ
ಎಚ್‌.ಡಿ. ದೇವೇಗೌಡ ಪ್ರಧಾನಿಯಾಗಿದ್ದ ಸಂದರ್ಭ ಕಾಶ್ಮೀರ ಬಿಕ್ಕಟ್ಟು ಹೆಚ್ಚಾಗಿರಲಿಲ್ಲ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ, ದೇವೇಗೌಡ ಅವರು ಕೆಲವು ತಿಂಗಳು ಮಾತ್ರ ಪ್ರಧಾನಿಯಾಗಿದ್ದರು. ಇಲ್ಲಿಯ ವರೆಗಿನ ಪ್ರಧಾನಿಗಳು ಗಡಿ ಭಾಗದ ಭಯೋತ್ಪದನೆ ಚಟುವಟಿಕೆ ಬಗ್ಗೆ ಕ್ರಮ ಕೈಗೊಳ್ಳದೆ ನಿಷ್ಕ್ರಿಯರಾಗಿದ್ದರು. ಆದರೆ ಪ್ರಧಾನಿ ಮೋದಿ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಕುಮಾರಸ್ವಾಮಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಪುಲ್ವಾಮಾ ಘಟನೆಯನ್ನು ಸಹಿಸಿಕೊಂಡು ಸುಮ್ಮನಿರಬೇಕಿತ್ತೇ ಎಂದು ಪ್ರಶ್ನಿಸಿದರು. 

Advertisement

ಎಂಪಿ ಖಾತೆಯಿಂದ 15 ಲ. ರೂ. ಕಳವು
ಒಂದೂವರೆ ವರ್ಷದಿಂದ ನನ್ನ ಬ್ಯಾಂಕ್‌ ಖಾತೆಯಲ್ಲಿ ಜಮೆಯಾಗಿದ್ದ 15.62 ಲ.ರೂ. ಹಣವನ್ನು ಆನ್‌ಲೈನ್‌ ಮೂಲಕ ಲಪಟಾಯಿಸಲಾಗಿದೆ. ಈ ಬಗ್ಗೆ ದಿಲ್ಲಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಆತನಿಂದ 25 ಸಾವಿರ ರೂ. ಮರುಪಾವತಿಯಾಗಿದೆ. ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ನಗದು ವ್ಯವಹಾರ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಪ್ರಧಾನಿ ಕ್ಯಾಶ್‌ಲೆಸ್‌ ಪಾವತಿಗೆ ಆದ್ಯತೆ ನೀಡಿದ್ದಾರೆ. ಡಿಜಿಟಲ್‌ ಇಂಡಿಯಾ ಯಶಸ್ವಿಯಾಗುತ್ತದೆ. ಎಂದು ಶೋಭಾ ಕರಂದ್ಲಾಜೆ  ಹೇಳಿದರು. 

ಪಕ್ಷದ ತೀರ್ಮಾನಕ್ಕೆ ಬದ್ಧ
ಮತ್ತೂಮ್ಮೆ ಲೋಕಸಭಾ ಚುನಾವಣೆ ಸ್ಪರ್ಧಿಸುವ ಬಗ್ಗೆ ತೀರ್ಮಾನವಾಗಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಸ್ಪರ್ಧಿಸಬೇಕೇ ಬೇಡವೇ ಎಂಬುದನ್ನು ಹೈಕಮಾಂಡ್‌ ತೀರ್ಮಾನಿಸಲಿದೆ.
– ಶೋಭಾ ಕರದ್ಲಾಂಜೆ,ಉಡುಪಿ-ಚಿಕ್ಕಮಗಳೂರು ಸಂಸದರು.

Advertisement

Udayavani is now on Telegram. Click here to join our channel and stay updated with the latest news.

Next