ದರ್ಶನ್ ಈಗ “ಗಂಡುಗಲಿ ಮದಕರಿನಾಯಕ’ ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ “ಕುರುಕ್ಷೇತ್ರ’ ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ. ಅದೇ ವೇದಿಕೆಯಲ್ಲಿ ಮುನಿರತ್ನ ಮತ್ತೂಂದು ಬಿಗ್ ಬಜೆಟ್ ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಅದು ಮೇಜರ್ ಅಭಿನಂದನ್ ವರ್ಧಮಾನ್ ಅವರ ಜೀವನ ಆಧರಿಸಿದ ಚಿತ್ರ ಮಾಡಲು ಮುನಿರತ್ನ ಉತ್ಸಾಹದಲ್ಲಿದ್ದಾರೆ. ಆ ಚಿತ್ರದಲ್ಲಿ ದರ್ಶನ್ ಅವರು ಅಭಿನಂದನ್ ಪಾತ್ರ ನಿರ್ವಹಿಲಿದ್ದಾರಂತೆ!
ಹೌದು, “ಕುರುಕ್ಷೇತ್ರ’ ಚಿತ್ರದ ಶತದಿನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂಬರೀಷ್ ಪುತ್ರ ಅಭಿಷೇಕ್ ಅವರು ವೇದಿಕೆಯಲ್ಲಿ ತಮ್ಮೊಳಗಿನ ಆಸೆಯೊಂದನ್ನು ಹೊರಹಾಕಿದರು. ಆ ಆಸೆ, “ದರ್ಶನ್ ಜೊತೆ ತಾವೊಂದು ಸಿನಿಮಾ ಮಾಡಬೇಕು’ ಎಂಬುದೇ ಆ ಆಸೆ. ಅಭಿಷೇಕ್ ಮಾತಿಗೆ ಪ್ರತಿಕ್ರಿಯಿಸಿದ ಮುನಿರತ್ನ, “ಅಭಿಷೇಕ್ ಅವರ ಕೋರಿಕೆಯನ್ನು ಖಂಡಿತ ಈಡೇರಿಸುತ್ತೇನೆ. ಇದೇ ವರ್ಷದಲ್ಲಿ ಚಿತ್ರವೊಂದನ್ನು ಪ್ರಾರಂಭಿಸುತ್ತೇನೆ. ದರ್ಶನ್ ಜೊತೆ ಈಗಷ್ಟೇ ಮಾತಾಡಿದ್ದೇನೆ. ಅವರು ಎಲ್ಲ ಬಗೆಯ ಪಾತ್ರಗಳನ್ನೂ ಮಾಡಿದ್ದಾರೆ.
ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರನ್ನು ಒಬ್ಬ ಮೇಜರ್ ಪಾತ್ರದಲ್ಲಿ ನೋಡಬೇಕು ಎಂಬುದು ನನ್ನ ಆಸೆ ಕೂಡ. ಯುದ್ಧ ಭೂಮಿಯಲ್ಲಿ ಒಬ್ಬ ಸೈನಿಕನಾಗಿ ಅವರನ್ನು ನೋಡಬೇಕು ಎನಿಸುತ್ತಿದೆ. ಆ ಸೈನಿಕನ ಪಾತ್ರ ಯಾವುದು ಎಂದರೆ, ಕಳೆದ ವರ್ಷ ಪಾಕ್ ಉಗ್ರರ ಪುಲ್ವಾಮಾ ದಾಳಿಗೆ ತಕ್ಕ ಉತ್ತರ ನೀಡಿದ ಮೇಜರ್ ಅಭಿನಂದನ್ ಪಾತ್ರ. ದರ್ಶನ್ ಜೊತೆ ಅಭಿಷೇಕ್ ಕೂಡ ಇರುತ್ತಾರೆ’ ಎನ್ನುವ ಮೂಲಕ ನಿರ್ಮಾಪಕ ಮುನಿರತ್ನ ಹೀಗೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ದರ್ಶನ್ ಮೌನ!: ವೇದಿಕೆಯಲ್ಲಿ ಮುನಿರತ್ನ ಅವರು ಈ ವಿಷಯ ಪ್ರಕಟಿಸಿದ ನಂತರ, ಮಾತಿಗಿಳಿದ ದರ್ಶನ್, ಮುನಿರತ್ನ ಅವರು ಪ್ರಕಟಿಸಿದ ಮೇಜರ್ ಅಭಿನಂದನ್ ಚಿತ್ರದ ಬಗ್ಗೆ ಮಾತನಾಡುತ್ತಾರೆ ಎಂಬ ಕಲ್ಪನೆ ಎಲ್ಲರಲ್ಲೂ ಇತ್ತು. ಆದರೆ, ಆ ಚಿತ್ರದ ಬಗ್ಗೆ ದರ್ಶನ್ ಮಾತಾಡಲಿಲ್ಲ. ಸಾಮಾನ್ಯವಾಗಿ ಒಂದು ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಬೇರೆ ಚಿತ್ರದ ವಿಷಯವನ್ನು ಮಾತನಾಡುವುದಿಲ್ಲ.
ಆ ಕಾರಣಕ್ಕಾಗಿಯೇ “ಮೇಜರ್ ಅಭಿನಂದನ್’ ಸಿನಿಮಾ ಬಗ್ಗೆ ಅವರು ಮಾತನಾಡಲಿಲ್ಲವೋ ಅಥವಾ ಈ ಚಿತ್ರದ ಬಗ್ಗೆ ಅವರ ನಿರ್ಧಾರ ಸ್ಪಷ್ಟವಾಗಿದೆಯೋ ಇಲ್ಲವೋ ಎಂಬ ಸಣ್ಣ ಅನುಮಾನ ಮೂಡುವುದು ಸಹಜ. ಇದಕ್ಕೆ ಮುಂದಿನ ದಿನಗಳಲ್ಲಿ ಅವರೇ ಉತ್ತರ ನೀಡಬೇಕು. ಇನ್ನು, ಈ ಸಿನಿಮಾಕ್ಕೆ ಯಾರು ನಿರ್ದೇಶನ ಮಾಡಲಿದ್ದಾರೆ? ಬೇರೆ ಕಲಾವಿದರು ಯಾರೆಲ್ಲ ಇರಲಿದ್ದಾರೆ? ಇತ್ಯಾದಿ ಮಾಹಿತಿ ಕೂಡ ಇಲ್ಲ.
ಇದು ಮುನಿರತ್ನ ಅವರ ಆಸೆ. ಅದ್ದೂರಿ ಸಿನಿಮಾಗಳನ್ನು ನಿರ್ಮಿಸುವಲ್ಲಿ ಸೈ ಎನಿಸಿಕೊಂಡಿರುವ ಮುನಿರತ್ನ, ಈ ಹಿಂದೆ “ಕುರುಕ್ಷೇತ್ರ’ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ… ಸಿಟಿಯಲ್ಲಿ ನಡೆಯುತ್ತಿರುವಾಗಲೇ “ಚಾಣಾಕ್ಯ ಚಂದ್ರಗುಪ್ತ’ ಚಿತ್ರ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಆ ಚಿತ್ರದಲ್ಲಿ ಸುದೀಪ್, ಉಪೇಂದ್ರ ಮತ್ತು ಪುನೀತ್ ಇರುತ್ತಾರೆ ಎಂಬುದಾಗಿಯೂ ಹೇಳಿಕೊಂಡಿದ್ದರು. ಆದರೆ ಸುಮಾರು ಎರಡು ವರ್ಷ ಕಳೆದರೂ “ಚಾಣಾಕ್ಯ ಚಂದ್ರಗುಪ್ತ’ ಚಿತ್ರದ ಸುದ್ದಿ ಇಲ್ಲ. ಆ ಸಿನಿಮಾ ಬಗ್ಗೆಯೂ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು.
ಈಗ ಅಂಥದ್ದೇ ಮತ್ತೂಂದು ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಆದರೆ, ಇದಕ್ಕೆಲ್ಲಾ ಸರಿಯಾದ ಉತ್ತರ ಸಿಗೋದು ಯಾವಾಗ ಎಂಬುದನ್ನು ಕಾದು ನೋಡಬೇಕು. ಅಂದಹಾಗೆ, “ಕುರುಕ್ಷೇತ್ರ’ ಚಿತ್ರ ಶತದಿನ ಕಂಡ ಹಿನ್ನೆಲೆಯಲ್ಲಿ ಶಿವರಾತ್ರಿಯಂದು ಸಂಭ್ರಮ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಭೈರತಿ ಬಸವರಾಜು ಸೇರಿದಂತೆ ರಾಜಕೀಯ ರಂಗದ ಹಲವು ಗಣ್ಯರು, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು, ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಿದ್ದರು.