Advertisement

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

10:50 PM Oct 17, 2021 | Team Udayavani |

ಮೈಸೂರು: ಕೋವಿಡ್‌ ಆತಂಕದ ನಡುವೆಯೂ ಯಶಸ್ವಿಯಾಗಿ ಜಂಬೂ ಸವಾರಿಯಲ್ಲಿ ಪಾಲ್ಗೊಂಡ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ ಮರಳಿದವು.

Advertisement

ದಸರಾ ಮಹೋತ್ಸವ ಅಂಗವಾಗಿ ವಿವಿಧ ಆನೆ ಶಿಬಿರಗಳಿಂದ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಸೆ.13ರಂದು 8 ಆನೆಗಳು ಮೈಸೂರಿಗೆ ಆಗಮಿಸಿದ್ದವು. ಅವು ಒಂದು ತಿಂಗಳಿನಿಂದ ಅರಮನೆ ಆವರಣದಲ್ಲಿ ವಿಶೇಷ ಆರೈಕೆಯಲ್ಲಿದ್ದು, ನಿತ್ಯ ತಾಲೀಮು ನಡೆಸಿ, ಶುಕ್ರವಾರ ನಡೆದ ಜಂಬೂ ಸವಾರಿಯಲ್ಲಿ ಪಾಲ್ಗೊಂಡು ದಸರಾ ಮಹೋತ್ಸವವನ್ನು ಯಶಸ್ವಿಗೊಳಿ ಸಿದ್ದವು. ಬಳಿಕ ಶನಿವಾರ ಪೂರ್ಣದಿನ ವಿಶ್ರಾಂತಿಯಲ್ಲಿದ್ದ ಆನೆಗಳಿಗೆ ರವಿವಾರ ಬೆಳಗ್ಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ರವಿವಾರ ಮಧ್ಯಾಹ್ನ 1.30ಕ್ಕೆ ಅರಮನೆ ಆವರಣದಿಂದ ವಿಶೇಷ ಟ್ರಕ್‌ ಮೂಲಕ ಮತ್ತಿಗೋಡು ಆನೆ ಶಿಬಿರಕ್ಕೆ ಅಭಿಮನ್ಯು ಮತ್ತು ಗೋಪಾಲಸ್ವಾಮಿ ತೆರಳಿದವು. ಅಶ್ವತ್ಥಾಮನನ್ನು ದೊಡ್ಡ ಹರವೆ ಆನೆ ಶಿಬಿರಕ್ಕೆ ರವಾನಿಸಲಾಯಿತು. ವಿಕ್ರಮ, ಧನಂಜಯ, ಕಾವೇರಿ ಆನೆಗಳನ್ನು ದುಬಾರೆ ಶಿಬಿರಕ್ಕೆ ಕಳುಹಿಸಿದರೆ, ಚೈತ್ರಾ, ಲಕ್ಷ್ಮೀ ಆನೆಗಳನ್ನು ಬಂಡೀಪುರದ ರಾಂಪುರ ಶಿಬಿರಕ್ಕೆ ರವಾನಿಸಲಾಯಿತು. 8 ಆನೆಗಳ ಮಾವುತ ಮತ್ತು ಕಾವಾಡಿಗಳು ಸಹಿಕ 50 ಮಂದಿಗೆ ಅರಮನೆ ಆಡಳಿತ ಮಂಡಳಿ ವತಿಯಿಂದ ತಲಾ 10 ಸಾವಿರ ರೂ. ನೀಡಿ ಅಭಿನಂದಿಸಲಾಯಿತು.

ಇದನ್ನೂ ಓದಿ:ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ಲಾರಿ ಏರಲು ಅಶ್ವತ್ಥಾಮ ಹಿಂದೇಟು
ಇದೇ ಮೊದಲ ಬಾರಿಗೆ ದಸರಾಕ್ಕೆ ಆಗಮಿಸಿದ್ದ ದೊಡ್ಡಹರವೆ ಶಿಬಿರದ ಅಶ್ವತ್ಥಾಮ ಆನೆಯು ಲಾರಿ ಏರಲು ಹಿಂದೇಟು ಹಾಕಿತು. ಎಲ್ಲ ಆನೆಗಳೂ ವಾಹನ ಏರಿದರೂ ಅಶ್ವತ್ಥಾಮ 40 ನಿಮಿಷಕ್ಕೂ ಹೆಚ್ಚು ಕಾಲ ಲಾರಿ ಏರದೆ ರಚ್ಚೆ ಹಿಡಿದು, ನೆಲದಲ್ಲಿ ಉರುಳಾಡಿತು. ಈ ವೇಳೆ ಪಕ್ಕದಲ್ಲೇ ಇದ್ದ ಗೋಪಾಲಸ್ವಾಮಿ ಮತ್ತು ಧನಂಜಯ ಆನೆಗಳ ಮೂಲಕ ಲಾರಿ ಏರಿಸುವ ಪ್ರಯತ್ನವೂ ಕೈಗೂಡಲಿಲ್ಲ. 30 ನಿಮಿಷದ ಬಳಿಕ ಕೂಬಿಂಗ್‌ ಸ್ಪೆಷಲಿಸ್ಟ್‌ ಅಭಿಮನ್ಯು ಆಗಮಿಸಿ, ಇತರ ಆನೆಗಳ ಸಹಾಯದಲ್ಲಿ ಅಶ್ವತ್ಥಾಮನನ್ನು ಲಾರಿ ಏರಿಸಲು ಪ್ರಯತ್ನಿಸಿದ. ಸುಲಭದಲ್ಲಿ ಅಶ್ವತ್ಥಾಮ ಜಗ್ಗಲಿಲ್ಲ. ಬಳಿಕ ಕೋಪಗೊಂಡ ಅಭಿಮನ್ಯು, ತನ್ನ ದಂತಗಳಿಂದ ಜೋರಾಗಿ ಗುದ್ದಿದ ಬಳಿಕ ಅಶ್ವತ್ಥಾಮ ಲಾರಿ ಏರಿದ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next