ಸಂಗೀತ ನಿರ್ದೇಶಕ ಅಭಿಮನ್‌ರಾಯ್ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಹೌದು, ಇದೇ ಮೊದಲ ಸಲ ಅವರೇ ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ “ವಿಂಡೊ’ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ, ಈ ಚಿತ್ರದ ಪ್ರಮೋಶನಲ್ ಸಾಂಗ್‌ಗೆ ಲಹರಿ ಆಡಿಯೋ
ಸಂಸ್ಥೆಯ ಲಹರಿ ವೇಲು ಅವರು ಧ್ವನಿಯಾಗಿದ್ದಾರೆ.
“ಹೆಂಡತಿ ಡೇ ಶಿಪ್ಟು, ಗಂಡ ನೈಟ್ ಶಿಪ್ಟು, ಗಂಡ ಡೇ ಶಿಪ್ಟು, ಹೆಂಡತಿ ನೈಟ್ ಶಿಪ್ಟು, ಮಕ್ಕಳು ಮಾತ್ರ
ಸಿಕ್ಕೋರ್ ಕೈಲಿ ಶಿಪ್ಟೋ, ಶಿಪ್ಟು, ಅಪ್ಪ, ಅಮ್ಮ ಅನಾಥಾಶ್ರಮಕ್ಕೆ ಶಿಪ್ಟೋ, ಶಿಪ್ಟು…’ ಎಂಬ ಹಾಡು ಡಿದ್ದಾರೆ. ಈ ಹಾಡಿನ ಟೀಸರ್ ಮಂಗಳವಾರ ಬಿಡುಗಡೆಯಾಗಿದ್ದು, ಶುಕ್ರವಾರ, ಪೂರ್ಣ ಹಾಡು ಲಹರಿ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.
ಅಂದಹಾಗೆ, ಸಂಗೀತ ನಿರ್ದೇಶಕ ಅಭಿಮನ್‌ರಾಯ್‌ಗೆ ಇದು ಮೊದಲ ನಿರ್ದೇಶನದ ಚಿತ್ರ. ಆ ಕುರಿತು ಹೇಳುವ ಅಭಿಮನ್‌ರಾಯ್, “ಸದ್ಯಕ್ಕೆ ಸಿನಿಮಾ ಮುಗಿದಿದ್ದು, ಬಿಡುಗಡೆಯ ಹಾದಿಯಲ್ಲಿದೆ. ಕಥೆ ಬಗ್ಗೆ ಹೇಳುವುದಾದರೆ, ಈಗಿನ ಸಾಫ್ಟ್ವೇರ್ ಮಂದಿಯ ಕಥೆ ಇಲ್ಲಿದೆ. ಅವರ ಲೈಫ್ಸ್ಟೈಲ್‌ನಿಂದ ಮಕ್ಕಳಿಗೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಎಂಬುದು ಹೈಲೈಟ್. ಅದರ ಹೊರತಾಗಿಯೂ ಇಲ್ಲಿ ಸಾಫ್ಟ್ವೇರ್ ಕಲ್ಚರ್ ಬಂದಾಗ, ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿವೆ. ಇದರಿಂದ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಅದರಿಂದ ಎಂತಹ ಅನಾಹುತಗಳು ನಡೆಯುತ್ತವೆ ಎಂಬುದು ಸಾರಾಂಶ’ ಎನ್ನುತ್ತಾರೆ ಅಭಿಮನ್‌ರಾಯ್. ಚಿತ್ರದಲ್ಲಿ ಸೋನು ತೇಜಸ್ ರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಶೇಷವೆಂದರೆ, ಮೂರು ವರ್ಷ, ಒಂಭತ್ತು ವರ್ಷ ಹಾಗೂ ಹನ್ನೆರೆಡು ವರ್ಷದ ರಿಯಲ್ ಪಾತ್ರ ನಿರ್ವಹಿಸಿದ್ದಾನೆ.
ನೈಜವಾಗಿಯೇ ಚಿತ್ರ ಮೂಡಿಬರಬೇಕು. ಎಲ್ಲೆಡೆ ಸಲ್ಲಬೇಕು ಎಂಬ ಕಾರಣಕ್ಕೆ ಆಯಾ ವರ್ಷಗಳಿರುವಾಗಲೇ ಚಿತ್ರವನ್ನು ಆಗಾಗ ಚಿತ್ರೀಕರಿಸಿದ್ದಾರಂತೆ ಅಭಿಮನ್ ರಾಯ್. ಇನ್ನು, ರವಿ ಶಿರೂರು ಹಾಗೂ ಸ್ನೇಹಾ ನಾಯರ್ ಅವರು ಅಪ್ಪ,ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಒಂದಷ್ಟು ಹೊಸ ಪ್ರತಿಭೆಗಳು ಚಿತ್ರದಲ್ಲಿವೆ ಎನ್ನುವ ಅಭಿಮನ್‌ರಾಯ್, ಅಶೋಕ್ ಮತ್ತು ಸೋಮಶೇಖರ್ ನಿರ್ಮಾಣ ಮಾಡಿದರೆ, ಶರಣು ಗೌಡ ಪಾಟೀಲ್ ಮತ್ತು ವಿಜಯ್‌ಕುಮಾರ್ ಎಸ್.ಜಿ. ಅವರು ಸಹ ನಿರ್ಮಾ ಪಕರಾಗಿದ್ದಾರೆ. ಧನುಷ್ ಚಿತ್ರಕ್ಕೆ ಛಾಯಾಗ್ರಹಣವಿದೆ. ಬೆಂಗಳೂರು, ಮಂಗಳೂರು, ಕೋಲಾರ ಮತ್ತು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.