ಮೂಲ್ಕಿ: ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ ಕ್ಷೇತ್ರದ ಜನ ನನ್ನನ್ನು ಇಪ್ಪತ್ತು ವರ್ಷಗಳ ಕಾಲ ಶಾಸಕನಾಗಿ ಗೌರವದಿಂದ ಕಂಡಿದ್ದಾರೆ. ಈ ಋಣವನ್ನು ತೀರಿಸಲು ನಮ್ಮ ಪಕ್ಷದ ಸರಕಾರ ಇರುವುದರಿಂದ ಕೆಲಸ ಮಾಡುವೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದರು.
ಅವರು ಮೂಲ್ಕಿಯಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದರು. ಮೂಲ್ಕಿ ನಗರ ಪಂಚಾಯತ್‌ನಲ್ಲಿ ಕಳೆದ ಐದು ವರ್ಷ ಬಿಜೆಪಿ ಆಡಳಿತವಿದ್ದರೂ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ ನಾನು ಕೋಟ್ಯಂತರ ಮೌಲ್ಯದ ಕಾಮಗಾರಿಗಳನ್ನು ಸರಕಾರದ ಮೂಲಕ ನಡೆಸುವಲ್ಲಿ ಯಶಸ್ವಿಯಾಗಿದ್ದೇನೆ.
ಈ ಬಾರಿ ಚುನಾವಣೆಯಲ್ಲಿ ಜನರು ಕಾಂಗ್ರೆಸ್ -ಜೆಡಿಎಸ್ ಮೆತ್ರಿ ಆಡಳಿತವನ್ನು ಬಯಸಿದ್ದಾರೆ. ಬಹುಮತ ನಮ್ಮ ಪಾಲಿಗೆ ಬರುವ ವಿಶ್ವಾಸವಿದೆ ಎಂದರು.
ನಾನು ಶಾಸಕನಾಗಿರುವ ಅವಧಿಯಲ್ಲಿ ಮೂಲ್ಕಿಗೆ ಕುಡಿಯುವ ನೀರಿನ ಯೋಜನೆಯನ್ನು 16 ಕೋಟಿ ರೂ. ವೆಚ್ಚದಿಂದ ಆರಂಭಿಸಿ ಈಗ ಕಾಮಗಾರಿ ಪ್ರಗತಿಯಲ್ಲಿದೆ. ಹೆದ್ದಾರಿಯ ಅಭಿವೃದ್ಧಿ ಕೆಲಸದಿಂದ ಮೂಲ್ಕಿ ಬಸ್ ನಿಲ್ದಾಣ ಪುನರ್ ನಿರ್ಮಾಣ ಮಾಡಬೇಕಾದ ಅಗತ್ಯ ಇರುವುದರಿಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದ ರ್ಭದಲ್ಲಿ 3 ಕೋಟಿ ರೂ. ಮೊತ್ತವನ್ನು ತಂದು ನಗರ ಪಂಚಾಯತ್‌ಗೆ ಅನುದಾನವನ್ನು ಖಾತೆಯಲ್ಲಿ ಹಾಕಲಾಗಿದೆ. 10 ಕೋಟಿ ರೂ.ವೆಚ್ಚದಲ್ಲಿ ಮೂಲ್ಕಿ ತಾಲೂಕಿಗೆ ಮಿನಿ ವಿಧಾನ ಸೌಧ ನಿರ್ಮಾಣ ಕಾರ್ಯ ಪ್ರಸ್ತಾವನೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ತಯಾರಾಗಿದೆ ಎಂದು ತಿಳಿಸಿದರು.
ಮುಂದೆ ಮಂಗಳೂರಿನ ನೀರನ್ನು ನಂಬಿ ಯೋಜನೆ ಹಾಕಿಕೊಳ್ಳಲು ಸಾಧ್ಯವಿಲ್ಲ. ಮೂಲ್ಕಿಯ ಸುತ್ತಲಿನ ಎರಡು ನದಿಗಳನ್ನು ಬಳಸಿ ವೆಂಟೆಡ್ ಡ್ಯಾಮ್ ನಿರ್ಮಿಸಿ ಸಿಹಿ ನೀರನ್ನು ನದಿ ಸಂಪರ್ಕದಿಂದ ಪಡೆದು ಮುಂದಿನ 25 ವರ್ಷಗಳ ತನಕ ನೀರಿಗೆ ಬರವಿಲ್ಲ ಎಂಬುವ ಹಂತದ ಹೊಸ ಯೋಜನೆಗೆ ಸರಕಾರದ ಮೂಲಕ ಪ್ರಯತ್ನ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆ.ಪಿ.ಸಿ.ಸಿ. ಸದಸ್ಯ ಎಚ್. ವಸಂತ್ ಬೆರ್ನಾಡ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಬಿ.ಎಂ. ಆಸೀಫ್, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ನವೀನ್ ಪುತ್ರನ್ ಉಪಸ್ಥಿತರಿದ್ದರು.