Advertisement

ಪಾಕಿಸ್ಥಾನದ ಮಾಜಿ ಲೆಗ್‌ಸ್ಪಿನ್ನರ್‌ ಅಬ್ದುಲ್‌ ಖಾದಿರ್‌ ನಿಧನ

12:21 AM Sep 08, 2019 | Sriram |

ಲಾಹೋರ್‌: ಪಾಕಿಸ್ಥಾನದ ಲೆಜೆಂಡ್ರಿ ಸ್ಪಿನ್ನರ್‌ ಅಬ್ದುಲ್‌ ಖಾದಿರ್‌ ತೀವ್ರ ಹೃದಯಾಘಾತದಿಂದ ಶುಕ್ರವಾರ ತಡರಾತ್ರಿ ನಿಧನರಾದರು. 1970-80ರ ದಶಕದಲ್ಲಿ ತಮ್ಮ ಲೆಗ್‌ಸ್ಪಿನ್‌ ಮೋಡಿ ಯಿಂದ ವಿಶ್ವದ ಖ್ಯಾತ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸಿದ ಛಾತಿ ಖಾದಿರ್‌ ಅವರದಾಗಿತ್ತು.

Advertisement

ಸೆ. 15ಕ್ಕೆ 64ನೇ ವರ್ಷಕ್ಕೆ ಕಾಲಿಡಲಿದ್ದ ಅಬ್ದುಲ್‌ ಖಾದಿರ್‌, ಈ ಸಂಭ್ರಮದ ಕ್ಷಣಗಣನೆಯಲ್ಲಿರು ವಾಗಲೇ ಇಹಲೋಕದ ಇನ್ನಿಂಗ್ಸ್‌ ಮುಗಿಸಿದ್ದಾರೆ. “ನನ್ನ ತಂದೆಗೆ ಹೃದಯ ಸಂಬಂಧಿ ಯಾವುದೇ ಸಮಸ್ಯೆ ಇರಲಿಲ್ಲ. ರಾತ್ರಿ ಊಟದ ವೇಳೆ ದಿಢೀರನೇ ಎದೆನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲೇ ಕೊನೆಯುಸಿರೆಳೆದರು…’ ಎಂಬುದಾಗಿ ಪುತ್ರ ಸುಲೈಮಾನ್‌ ಮಾಧ್ಯಮಗಳಿಗೆ ತಿಳಿಸಿದರು.

ಅಬ್ದುಲ್‌ ಖಾದಿರ್‌ ನಿಧನಕ್ಕೆ ಅವರ ಸಮಕಾ ಲೀನ ಕ್ರಿಕೆಟಿಗ, ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌, ಸಚಿನ್‌ ತೆಂಡುಲ್ಕರ್‌ ಸಹಿತ ಕ್ರಿಕೆಟಿನ ಗಣ್ಯರೆಲ್ಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

368 ಅಂತಾರಾಷ್ಟ್ರೀಯ ವಿಕೆಟ್‌
1977ರಲ್ಲಿ ಇಂಗ್ಲೆಂಡ್‌ ವಿರುದ್ಧ ಲಾಹೋರ್‌ನಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ ಖಾದಿರ್‌, 1990ರಲ್ಲಿ ವಿಂಡೀಸ್‌ ವಿರುದ್ಧ ಇಲ್ಲಿಯೇ ಕೊನೆಯ ಟೆಸ್ಟ್‌ ಆಡಿದ್ದರು. 67 ಟೆಸ್ಟ್‌ಗಳಲ್ಲಿ 236 ವಿಕೆಟ್‌ ಉರುಳಿಸಿದ್ದು ಇವರ ಸಾಧನೆ. ಇಂಗ್ಲೆಂಡ್‌ ಎದುರು 1987ರಲ್ಲಿ ಲಾಹೋರ್‌ ಅಂಗಳದಲ್ಲೇ ಖಾದಿರ್‌ 56ಕ್ಕೆ 9 ವಿಕೆಟ್‌ ಉಡಾಯಿಸಿದ್ದು ಇಂದಿಗೂ ಪಾಕ್‌ ಇನ್ನಿಂಗ್ಸ್‌ ಒಂದರ ದಾಖಲೆಯಾಗಿ ಉಳಿದಿದೆ.

104 ಏಕದಿನಗಳಲ್ಲಿ 132 ವಿಕೆಟ್‌ ಉರುಳಿಸಿದ ಅಬ್ದುಲ್‌ ಖಾದಿರ್‌, ಪಾಕಿಸ್ಥಾನದ 1983 ಮತ್ತು 1987ರ ವಿಶ್ವಕಪ್‌ ತಂಡದ ಪ್ರಮುಖ ಬೌಲಿಂಗ್‌ ಅಸ್ತ್ರವಾಗಿದ್ದರು. ಡ್ಯಾನ್ಸಿಂಗ್‌ ಶೈಲಿಯ ರನ್‌-ಅಪ್‌ ಖಾದಿರ್‌ ಅವರ ಬೌಲಿಂಗ್‌ ಆಕರ್ಷಣೆಯಾಗಿತ್ತು.

Advertisement

ಖಾದಿರ್‌ ಅವರ 4 ಮಂದಿ ಮಕ್ಕಳಾದ ರೆಹಮಾನ್‌, ಇಮ್ರಾನ್‌, ಸುಲೈಮಾನ್‌ ಮತ್ತು ಉಸ್ಮಾನ್‌ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದಾರೆ. ಕಿರಿಯ ಮಗ ಉಸ್ಮಾನ್‌ ಲೆಗ್‌ಸ್ಪಿನ್ನರ್‌ ಆಗಿದ್ದು, ಕಳೆದ ಬಿಗ್‌ ಬಾಶ್‌ ಲೀಗ್‌ನಲ್ಲಿ ಆಡಿದ್ದರು.

ಖಾದಿರ್‌ಗೆ ಬಿಸಿ ಮುಟ್ಟಿಸಿದ್ದ 16ರ ಸಚಿನ್‌!
ಅಬ್ದುಲ್‌ ಖಾದಿರ್‌ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾಗ ಅವರಿಗೆ ಬಿಸಿ ಮುಟ್ಟಿಸಿದ ಹೆಗ್ಗಳಿಕೆ ಪುಟಾಣಿ ತೆಂಡುಲ್ಕರ್‌ಗೆ ಸಲ್ಲುತ್ತದೆ. ಪ್ರದರ್ಶನ ಪಂದ್ಯವೊಂದರಲ್ಲಿ ಖಾದಿರ್‌ ಎಸೆತಗಳಿಗೆ ಸತತ ಸಿಕ್ಸರ್‌ ಬಾರಿಸುವ ಮೂಲಕ ಸಚಿನ್‌ ವಿಶ್ವದ ಎಲ್ಲ ಬೌಲರ್‌ಗಳಿಗೂ ಎಚ್ಚರಿಕೆಯೊಂದನ್ನು ರವಾನಿಸಿದ್ದರು. ಅಂದಹಾಗೆ, ಸಚಿನ್‌ಗೆ ಆಗ ಕೇವಲ 16 ವರ್ಷವಷ್ಟೇ!

1989ರ ಪಾಕ್‌ ಪ್ರವಾಸದ ವೇಳೆ ಪೇಶಾವರ ಏಕದಿನ ಪಂದ್ಯ ಮಳೆಯಿಂದ ರದ್ದುಗೊಂಡಾಗ ಏರ್ಪಟ್ಟ ಪ್ರದರ್ಶನ ಪಂದ್ಯ ಅದಾಗಿತ್ತು. ಅದರಲ್ಲಿ ಸಚಿನ್‌ ಕೇವಲ 18 ಎಸೆತಗಳಿಂದ 53 ರನ್‌ ಸಿಡಿಸಿದ್ದರು. ಖಾದಿರ್‌ ಅವರ ಒಂದೇ ಓವರಿನಲ್ಲಿ 4 ಸಿಕ್ಸರ್‌ ಸಹಿತ 28 ರನ್‌ ಬಾರಿಸುವ ಮೂಲಕ ಅಬ್ಬರಿಸಿದ್ದರು (6, 4, 0, 6, 6, 6). ಬಳಿಕ ಮುಷ್ತಾಕ್‌ ಅಹ್ಮದ್‌ ಓವರಿನಲ್ಲೂ 4 ಸಿಕ್ಸರ್‌ ಬಿದ್ದಿತ್ತು.

ಅಂದು ಶ್ರೀಕಾಂತ್‌ಗೆ ಎಸೆದ ಮೊದಲ ಓವರನ್ನು ಖಾದಿರ್‌ ಮೇಡನ್‌ ಮಾಡಿದ್ದರು. ಆಗ ಸಚಿನ್‌ ಬಳಿ ಹೋದ ಖಾದಿರ್‌, “ಇದೇನೂ ಅಂತಾರಾಷ್ಟ್ರೀಯ ಪಂದ್ಯವಲ್ಲ. ನನ್ನ ಮುಂದಿನ ಓವರಿನಲ್ಲಿ ನೀವು ಸಿಕ್ಸರ್‌ಗೆ ಪ್ರಯತ್ನಿಸಬಹುದು. ಇದರಲ್ಲಿ ಯಶಸ್ವಿಯಾದರೆ ನೀವು ದೊಡ್ಡ ಸ್ಟಾರ್‌ ಆಗಲಿದ್ದೀರಿ’ ಎಂದು ಹೇಳಿದ್ದರು. ಆಗ ಇದಕ್ಕೆ ಸಚಿನ್‌ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮುಂದಿನ ಓವರಿನಲ್ಲಿ ಬ್ಯಾಟಿನಿಂದಲೇ ಜವಾಬಿತ್ತರು!

ಖಾದಿರ್‌ ಆ ಕಾಲದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದರು. ಅವರ ಬೌಲಿಂಗ್‌ ಎದುರಿಸಿದ್ದನ್ನು ಮರೆತಿಲ್ಲ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು…
– ಸಚಿನ್‌ ತೆಂಡುಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next