ಬೆಂಗಳೂರು: ಬಸ್‌ಗಾಗಿ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿರುವ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯ ಜಾಲಹಳ್ಳಿ ಕ್ರಾಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 8ರಂದು ಈ ಘಟನೆ ನಡೆದಿದ್ದು, ಅಪಹರಣಕಾರರಿಂದ ತಪ್ಪಿಸಿಕೊಂಡ ವಿದ್ಯಾರ್ಥಿನಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಈ ದೂರಿನ ಆಧಾರದ ಮೇಲೆ ಅಪಹರಣ ಘಟನೆ ನಡೆದ ಸ್ಥಳದ ಆಧಾರದ ಮೇಲೆ ಲಷ್ಕರ್ ಠಾಣೆ ಪೊಲೀಸರು, ಪ್ರಕರಣವನ್ನು ಪೀಣ್ಯ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
ದೂರಿನಲ್ಲಿ ಏನಿದೆ?: ನಾನು ತುಮಕೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡು ತ್ತಿದ್ದು, ಕಳೆದ ತಿಂಗಳು ಯಲಹಂಕದಲ್ಲಿರುವ ಮಾವನ ಮನೆಗೆ ಬಂದಿದ್ದೆ. ಜೂ.8ರಂದು ಬೆಳಗ್ಗೆ ತುಮಕೂರಿನ ಕಾಲೇಜಿಗೆ ತೆರಳಲು ಯಲಹಂಕದ ಮಾವನ ಮನೆಯಿಂದ ಎನ್‌ಇಎಸ್ ಬಸ್ ನಿಲ್ದಾಣಕ್ಕೆ ದ್ವಿಚಕ್ರ ವಾಹನದಲ್ಲಿ ಡ್ರಾಪ್ ಪಡೆದಿದ್ದೆ. ಅಲ್ಲಿಂದ ಬಸ್‌ನಲ್ಲಿ ಜಾಲಹಳ್ಳಿ ಕ್ರಾಸ್‌ಗೆ ಬಂದು ತುಮಕೂರಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದೆ. ಆಗ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಕೆಲವರು, ತನಗೆ ಪ್ರಜ್ಞೆ ತಪ್ಪಿಸುವ ಔಷಧ ನೀಡಿದರು.
ಈ ವೇಳೆ ತನ್ನ ಬಳಿ ಇಬ್ಬರು ಯುವತಿಯರು ಬಂದರು. ಒಬ್ಬಳು ನನ್ನ ಕೈ ಹಿಡಿದುಕೊಂಡರೆ, ಮತ್ತೂಬ್ಬಳು ನನ್ನ ಮುಖಕ್ಕೆ ಮಾಸ್ಕ್ ಹಾಕಿದಳು. ಅಷ್ಟರಲ್ಲಿ ನನಗೆ ಪ್ರಜ್ಞೆ ತಪ್ಪಿತು. ಬಳಿಕ ನಾನು ಎಚ್ಚರಗೊಂಡಾಗ ಕಾರಿನ ಮಧ್ಯದ ಸೀಟಿನಲ್ಲಿ ಕುಳಿತ್ತಿದ್ದೆ. ಆ ಕಾರಿನಲ್ಲಿ 18-19 ವರ್ಷದ ಇಬ್ಬರು ಹುಡುಗಿಯರು ಹಾಗೂ 29-30 ವರ್ಷದ ನಾಲ್ವರು ಯುವಕರು ಇದ್ದರು. ನಂತರ ಅವರು ಟೀ ಕುಡಿಯಲು ಕಾರನ್ನು ನಿಲ್ಲಿಸಿ ಹೋದರು. ಆಗ ನಾನು ಕಾರಿನ ಡೋರ್ ತೆರೆದು ತಪ್ಪಿಸಿಕೊಂಡು ಸ್ವಲ್ಪ ದೂರು ಓಡಿದೆ. ಅದನ್ನು ಗಮನಿಸಿದ ಆರು ಮಂದಿ ನನ್ನನ್ನು ಸ್ವಲ್ಪ ದೂರ ಹಿಂಬಾಲಿಸಿದರು. ಬಳಿಕ ನಾನು ಜೋರಾಗಿ ಓಡಿ ಹೋದೆ. ಬಳಿಕ ಸ್ಥಳೀಯರಿಗೆ ಇದು ಯಾವ ಊರು ಎಂದಾಗ, ಮೈಸೂರು ಎಂದರು. ನಂತರ ವಿಳಾಸ ಕೇಳಿಕೊಂಡು ಮೈಸೂರು ಬಸ್ ನಿಲ್ದಾಣಕ್ಕೆ ಬಂದು, ಬಳಿಕ ವ್ಯಕ್ತಿಯೊಬ್ಬರ ಮೊಬೈಲ್ ಪಡೆದು ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದೆ. ಬಳಿಕ ನಮ್ಮ ಕುಟುಂಬದವರು ಮೈಸೂರಿಗೆ ಬಂದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ವಿದ್ಯಾರ್ಥಿನಿಯಿಂದ ಗೊಂದಲ ಹೇಳಿಕೆ: ದೂರಿನ ಸಂಬಂಧ ವಿದ್ಯಾರ್ಥಿನಿಯನ್ನು ಕರೆಸಿ ವಿಚಾರಣೆ ನಡೆಸಿದಾಗ, ಘಟನೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಪ್ರಶ್ನೆಗಳನ್ನು ಕೇಳಿದರೆ ಗಾಬರಿಗೊಂಡು ಅಳುತ್ತಿದ್ದಾಳೆ. ಅದರಿಂದ ಆಕೆಯ ವಿಚಾರಣೆಯೇ ದೊಡ್ಡ ಸವಾಲಾಗಿದೆ. ಈ ಮಧ್ಯೆ ವಿದ್ಯಾರ್ಥಿನಿ ನೀಡಿದ ದೂರಿನ ಮಾಹಿತಿ ಮೇರೆಗೆ ಜಾಲಹಳ್ಳಿ ಕ್ರಾಸ್ ಸಮೀಪದ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದು, ಅದರಲ್ಲಿ ವಿದ್ಯಾರ್ಥಿನಿ ಹಾಗೂ ಅಪಹರಣಕಾರರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮತ್ತೂಂದೆಡೆ ವಿದ್ಯಾರ್ಥಿನಿ ಕೂಡ ಸರಿಯಾದ ಮಾಹಿತಿ ನೀಡದಿರುವುದರಿಂದ ದೂರಿನ ಬಗ್ಗೆಯೇ ಅನುಮಾನ ಮೂಡಿದೆ. ಆದರೆ, ವಿದ್ಯಾರ್ಥಿನಿಯ ಮೊಬೈಲ್ ನೆಟ್‌ವರ್ಕ್ ಹಾಗೂ ಸಿಡಿಆರ್ ಆಧರಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.