Advertisement
ಮಡಿಕೇರಿಯಿಂದ 7ರಿಂದ 8 ಕಿ.ಮೀ. ದೂರ ಸಾಗಿದರೆ ಪ್ರಕೃತಿಯ ಚಂದವನ್ನು ಸವಿಯುವ ಜತೆಗೆ ಧರೆಗೆ ಇಳಿಯುವ ನೀರಿನ ಸಪ್ಪಳಕ್ಕೆ ಕಿವಿಯಾಗಬಹುದು. ಮಳೆಗಾಲದ ಅವಧಿಯಲ್ಲಿ ಅದೊಂದು ಅದ್ಭುತ ಅನುಭವ. ಅಬ್ಟಾ! ಎಂಬ ಉದ್ಗಾರ ನಮ್ಮ ಬಾಯಿಯಿಂದ ತಾನಾಗಿಯೇ ಹೊಮ್ಮುತ್ತದೆ. ಅಷ್ಟು ಸೊಗಸಾಗಿದೆ ಅಬ್ಬಿ ಜಲಪಾತ.
Related Articles
Advertisement
ಅಬ್ಬಿ ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೇಸಗೆಯಲ್ಲಿ ಮಾತ್ರ ಇದು ಸೊರಗುತ್ತದೆ. ಮಳೆಗಾಲದಲ್ಲಿ ರುದ್ರ ರಮಣೀಯವಾಗುತ್ತದೆ. ವಯ್ನಾರದಿಂದ ಧುಮುಕುವ ಜಲಧಾರೆ ನೋಡುಗರ ಕಣ್ಮನವನ್ನು ತಣಿಸುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಿದರೆ ಮೈಮರೆಯುವ ಪ್ರಕೃತಿ ಸೌಂದರ್ಯದ ಆರಾಧಕರಾಗಿ ಸಮಯ ಕಳೆಯಬಹುದು.
ಸುಮಾರು 70 ಅಡಿ ಎತ್ತರದಿಂದ ಧುಮುಕುವ ಈ ಜಲಪಾತದ ನೀರು ಮುಂದೆ ಕಾವೇರಿ ನದಿಯನ್ನು ಸೇರುತ್ತದೆ. ಇದು ಪ್ರವಾಸಿ ತಾಣವಾಗಿಯೂ ಹೆಸರಾಗಿದೆ. ವಿಶಾಲವಾದ ಜಾಗ ಪಾರ್ಕಿಂಗ್‌ಗೆ ಲಭ್ಯವಿದೆ. ಇಲ್ಲಿ ಸಿಗುವ ಆಹಾರದ ಗುಣಮಟ್ಟವೂ ಉತ್ತಮವಾಗಿದೆ. ಬೆಳಗ್ಗೆ 8ರಿಂದ ಸಂಜೆ 5.30ರ ತನಕ ಜಲಪಾತ ವೀಕ್ಷಣೆಗೆ ಅವಕಾಶವಿದೆ. ಜಲಪಾತದ ಮುಂಭಾಗದಲ್ಲಿ ಒಂದು ತೂಗುಸೇತುವೆ ಇದ್ದು, ಅಲ್ಲಿಂದ ಜಲಪಾತದ ಸೌಂದರ್ಯವನ್ನು ಮನದಣಿಯೆ ಸವಿಯಬಹುದು.
ಅಬ್ಬಿ ಫಾಲ್ಸ್ ಮಂಗಳೂರಿನಿಂದ 144 ಕಿ.ಮೀ. ದೂರದಲ್ಲಿದೆ. ಮಡಿಕೇರಿಯಿಂದ ಕೇವಲ 8 ಕಿ.ಮೀ. ಅಂತರ. ಮಡಿಕೇರಿಯಿಂದ ಆಟೋಗಳು ಸಿಗುತ್ತವೆ. ಪ್ರವೇಶದ್ವಾರದಿಂದ ಸುಮಾರು 200 ಅಡಿ ದೂರಕ್ಕೆ ಕಾಫಿ ತೋಟಗಳ ನಡುವೆ ಕೆಳಗಿಳಿದು ಸಾಗಬೇಕು. ವೃದ್ಧರಿಗೆ ಇದು ಸ್ವಲ್ಪ ಕಷ್ಟದ ದಾರಿ. ವಾಹನಗಳ ನಿಲುಗಡೆಗೆ 30 ರೂ., ಪ್ರವೇಶಕ್ಕೆ 15 ರೂ. ಶುಲ್ಕ ವಿಧಿಸಲಾಗುತ್ತದೆ.
ರೂಟ್ ಮ್ಯಾಪ್- ಮಂಗಳೂರಿನಿಂದ ಮಡಿಕೇರಿಗೆ 137.8 ಕಿ.ಮೀ.
- ಪುತ್ತೂರಿನಿಂದ ಮಡಿಕೇರಿ 87.1 ಕಿ.ಮೀ.
- ಮಡಿಕೇರಿಯಿಂದ ಅಬ್ಬಿಗೆ ಕೇವಲ 8 ಕಿ.ಮೀ. ಆಟೋ ಮಾಡಿಕೊಂಡು ಹೋಗಬಹುದು - ಸಾಯಿನಂದಾ ಚಿಟ್ಪಾಡಿ, ಪುತ್ತೂರು