Advertisement

ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ ಇರ್ಕಿಗದ್ದೆ ಅಬ್ಬೆ ಜಲಪಾತ

02:01 PM Apr 27, 2018 | Harsha Rao |

ಅಬ್ಬಿ ಜಲಪಾತ ಕೇಳಿದ್ದೇವೆ ಆದರೆ ಈ ಇರ್ಕಿಗದ್ದೆ ಅಬ್ಬೆ ಜಲಪಾತ ಯಾವುದು ಎಂದು ಕೆಲವರು ತಲೆಕೆಡಿಸಿಕೊಳ್ಳಬಹುದು ಇನ್ನು ಕೆಲವರು ತಿಳಿದಿರಲೂಬಹುದು., ಇತ್ತೀಚಿನ ದಿನಗಳಲ್ಲಿ ಈ ಜಲಪಾತ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವುದು ಇದಕ್ಕೆ ಸಾಕ್ಷಿ, ಯಾಕೆಂದರೆ ಈ ಜಲಪಾತ ಸುದ್ದಿ ಮಾಡಲು ಶುರು ಮಾಡಿದ್ದೇ ಇತ್ತೀಚೀನ ಕೆಲವು ವರುಷಗಳಿಂದ, ಹೆಚ್ಚಿನ ಚಾರಣ ಪ್ರಿಯರು ಈ ಜಲಪಾತದ ಸವಿ ಅನುಭವವನ್ನು ಆನಂದಿಸಿರಬಹುದು ಅಂದಹಾಗೆ ಈ ಜಲಪಾತ ಇರುವುದು ಪಶ್ಚಿಮ ಘಟ್ಟದ ತಪ್ಪಲಿನ  ಕುಂದಾಪುರ ತಾಲೂಕಿನ ಹೊಸಂಗಡಿಯಲ್ಲಿ. ಹೊಸಂಗಡಿಯಿಂದ ತೊಂಬಟ್ಟು ಮಾರ್ಗದಲ್ಲಿ ಇರ್ಕಿಗದ್ದೆ ಪ್ರದೇಶದಲ್ಲಿ ಸಂಚರಿಸಿದರೆ ಈ ಮನಮೋಹಕ ಅಬ್ಬೆ ಜಲಪಾತ ಮೈದುಂಬಿ ಹರಿಯುತ್ತಿದೆ. ಬಂಡೆಕಲ್ಲುಗಳ ಮೇಲೆ ಜಾರಿಕೊಂಡು ಹಂತ ಹಂತವಾಗಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ಈ ಜಲಪಾತ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಕಂಡುಕೊಳ್ಳುತ್ತಿದೆ.

Advertisement

ಈ ಪ್ರದೇಶದ ಜನರ ಕಿವಿಗೂ ಸದ್ದು ಮಾಡದೇ ಹರಿದಿರುವುದು ವಿಶೇಷ. ತಮ್ಮ ಪರಿಸರದಲ್ಲಿ ಹಸಿರು ಕಾನನದ ನಡುವೆ ಶಾಂತವಾಗಿ ಹರಿಯುತ್ತಿದೆ ಅಬ್ಬೆ ಜಲಪಾತ. ಈ ಜಲಪಾತ ಸೃಷ್ಟಿಯಾಗಲು ಪ್ರಮುಖ ಕಾರಣ ಇಲ್ಲಿನ ವಾರಾಹಿ ನದಿ. ಘಟ್ಟ ಪ್ರದೇಶದಲ್ಲಿ ಮಳೆಯ ನೀರು ಹರಿದು ಹೊಸಂಗಡಿಯಲ್ಲಿ ವಾರಾಹಿ ನದಿಯನ್ನು ಸೇರುತ್ತದೆ ಈ ನದಿ ಕೆಲವೊಂದು ಕವಲುಗಳಾಗಿ ಹರಿಯುತ್ತಿದೆ ಅದರಲ್ಲಿ ಒಂದು ಕವಲು ಇರ್ಕಿಗದ್ದೆ ಅಬ್ಬೆ ಜಲಪಾತವಾಗಿ ಹರಿಯುತ್ತಿದೆ.

ಜನಾಕರ್ಷಣೆ :

ಅಗಲವಾದ ಬಂಡೆಕಲ್ಲಿನಲ್ಲಿ ಸರಾಗವಾಗಿ ಹರಿಯುವ ನೀರು ಹಲವಾರು ಕವಲುಗಳಿಂದ ಹರಿಯುವುದರಿಂದ ಪ್ರಮುಖ ಆಕರ್ಷಣೆಯಾಗಿದೆ. ಹೊಸಂಗಡಿಯ ದಾಸಿಕಾನು ಎಂಬಲ್ಲಿ ವಾರಾಹಿ ನದಿಗೆ ಸೇತುವೆ ನಿರ್ಮಾಣ ಕಾರ್ಯ ಆದಂದಿನಿಂದ ಈ ಜಲಪಾತ ಜನರನ್ನು ಆಕರ್ಷಿಸಲು ಪ್ರಾರಂಭಿಸಿದೆ. ಇದಕ್ಕೂ ಮೊದಲು ಇಲ್ಲಿ ಯಾವುದೇ ಮಾರ್ಗಗಳಿಲ್ಲದೆ ಈ ಪ್ರದೇಶದಲ್ಲಿ ಜಲಪಾತ ಇದೆ ಎಂಬುದು ತಿಳಿದಿರಲಿಲ್ಲ. ಜಲಪಾತದ ಸಂಧಿಯವರೆಗೆ ವಾಹನ ಚಲಿಸುವುದರಿಂದ ಪ್ರಯಾಸ ಕಡಿಮೆ ಹಾಗಾಗಿ ಹೆಚ್ಚು ಜನಾಕರ್ಷಣೆಯಾಗಿದೆ.

ಅಪಾಯವು ಕಡಿಮೆ :

Advertisement

ಈ ಜಲಪಾತವು ಹೆಚ್ಚು ಅಳವಿಲ್ಲದೆ ಬಂಡೆ ಕಲ್ಲಿನ ಮೇಲೆ ಸರಾಗವಾಗಿ ಹರಿಯುತ್ತಿರುವುದರಿಂದ ಇಲ್ಲಿ ಯಾವುದೇ ಅಪಾಯ ಸಂಭವಿಸುವ ಲಕ್ಷಣಗಳು ಕಡಿಮೆ. ಅಲ್ಲದೆ ಅಗಲವಾದ ಬಂಡೆ ಕಲ್ಲಿನ ಹಾಸಿನ ಮೇಲೆ ಶಾಂತವಾಗಿ ಹಂತ ಹಂತವಾಗಿ ಹರಿಯುವುದನ್ನು ನೋಡುವುದೇ ಮನಸ್ಸಿಗೆ ಮುದ ನೀಡುವ ಅನುಭವ, ಇತ್ತೀಚಿಗೆ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ  ಪ್ರವಾಸಿಗರು ಭೇಟಿ ನೀಡುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿದ. ರಜಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದು ಈ ಜಲಪಾತದ ಆಕರ್ಷಣೆಯಾಗಿದೆ.

ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಜಲಪಾತದ ಸೌಂದರ್ಯ ಇಮ್ಮಡಿಗೊಳಿಸುತ್ತದೆ. ಹಸಿರು ವನ್ಯರಾಶಿಯ ನಡುವೆ ಸ್ವಚ್ಛಂದವಾಗಿ ಹರಿಯುವ ಜಲಪಾತ ಕಣ್ಣಿಗೆ ಮುದ ನೀಡುತ್ತದೆ.

ದಟ್ಟ ಅರಣ್ಯದ ನಡುವೆ ಮುಂಜಾನೆಯ ಸವಿಯನ್ನು ಸವಿಯುತ್ತಾ, ಚುಮು ಚುಮು ಚಳಿಯಲ್ಲಿ ಈ ಜಲಪಾತಕ್ಕೆ ಭೇಟಿ ನೀಡಿದರೆ ಇದರ ಅನುಭವವೇ ಬೇರೆ.  

ದಾರಿ ಹೇಗೆ :

ಇರ್ಕಿಗದ್ದೆ ಅಬ್ಬೆ ಜಲಪಾತಕ್ಕೆ ಬರುವವರು ಕುಂದಾಪುರದ ಹೊಸಂಗಡಿಯಿಂದ ಬಾಗೆಮನೆ ಮಾರ್ಗವಾಗಿ ಚಲಿಸಿ ಬಾಗೆಮನೆಯಿಂದ ಬಲಕ್ಕೆ ತಿರುಗಿ ಮೂರು ಕಿಲೋಮೀಟರ್ ಸಂಚರಿಸಿದರೆ ಜಲಪಾತ ಕಾಣಸಿಗುತ್ತದೆ.

ಅಮಾಸೆಬೈಲು ಮಾರ್ಗವಾಗಿ ಬರುವವರು ಮಚ್ಚಟ್ಟು ತೊಂಬಟ್ಟು ಮಾರ್ಗವಾಗಿ ಕಬ್ಬಿನಾಲೆ ಮೂಲಕ ಸಂಪರ್ಕಿಸಬಹುದು.  

ಸ್ವಚ್ಛತೆಯನ್ನು ಕಾಪಾಡಿ :

ಈ ಜಲಪಾತ ಇತ್ತೀಚೆಗಷ್ಟೇ ಜನಪ್ರಿಯತೆ ಪಡೆದಿದ್ದರು ಇಲ್ಲಿಗೆ ಬರುವ ಪ್ರವಾಸಿಗರು ತಾವು ತಂದಿರುವ ತಿಂಡಿ ತಿನಿಸುಗಳ ತ್ಯಾಜ್ಯವನ್ನು ಜಲಪಾತದ ಎಕ್ಕೆಲೆಗಳಲ್ಲಿ ಎಸೆದಿರುವುದು ಕಂಡುಬರುತ್ತಿದೆ. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಜಲಪಾತ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ, ಹಾಗಾಗಬಾರದು ಎಂಬುದೇ ನಮ್ಮೆಲ್ಲರ ಆಶಯ…

Advertisement

Udayavani is now on Telegram. Click here to join our channel and stay updated with the latest news.

Next