ಉಡುಪಿ: ನಾಲ್ಕು ತಿಂಗಳುಗಳ ಹಿಂದೆ ಉಡುಪಿಯಲ್ಲಿ ಆರಂಭಗೊಂಡ ‘ಅಬ್ಬಕ್ಕ ಪಡೆ’ ನಗರದಲ್ಲಿ ಮಹಿಳೆಯರಲ್ಲಿ ಭದ್ರತೆಯ ಭಾವನೆ ಮೂಡಿಸುವಲ್ಲಿ ಆರಂಭಿಕ ಯಶಸ್ಸು ಗಳಿಸಿದೆ. ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿನಿಯರಲ್ಲಿ ಒಂದಷ್ಟು ನೆಮ್ಮದಿ ತರಿಸಿದೆ.
2 ಬಾರಿ ನಿಗಾ
ಶಾಲಾ ಕಾಲೇಜುಗಳಿಗೆ ಸತತವಾಗಿ ರೌಂಡ್ಸ್ ಮಾಡುತ್ತಿರುವ ಅಬ್ಬಕ್ಕ ಪಡೆ ವಿದ್ಯಾರ್ಥಿನಿ ಯರಿಗೆ ರಸ್ತೆ ಬದಿ ಅಥವಾ ಇತರೆಡೆ ತೊಂದರೆ ಗಳಾಗುತ್ತಿವೆಯೇ ಎಂಬುದನ್ನು ಗಮನಿಸುತ್ತಿದೆ. ಬೀದಿಯಲ್ಲಿ ಕಿರುಕುಳ ನೀಡುವುದಕ್ಕೆಂದು ನಿಂತಿರಬಹುದಾದ ಯುವಕರ ಮೇಲೆ ನಿಗಾ ವಹಿಸುತ್ತಿದೆ. ಶಾಲಾ ಕಾಲೇಜು ಆರಂಭವಾಗುವ ಸಮಯ ಹಾಗೂ ಮುಕ್ತಾಯದ ಸಮಯ ಒಂದಿಲ್ಲ ಒಂದು ದಿನ ಅಬ್ಬಕ್ಕ ಪಡೆ ಇರುತ್ತದೆ.
ಸಂತೆಕಟ್ಟೆ-ಮಣಿಪಾಲ
ಪ್ರಸ್ತುತ ಸಂತೆಕಟ್ಟೆಯಿಂದ ಮಣಿಪಾಲದವರೆಗೆ ಅಬ್ಬಕ್ಕ ಪಡೆ ನಿಗಾ ವಹಿಸುತ್ತಿದೆ. ಅಗತ್ಯ ಬಿದ್ದಾಗ ಬ್ರಹ್ಮಾವರ ಕಡೆಗೆ ಹೋಗಿದ್ದೂ ಉಂಟು. ವಿದ್ಯಾರ್ಥಿನಿಯರು ಅವರಾಗಿಯೇ ದೂರು ಕೊಡುವುದು ಕಡಿಮೆ. ಆದರೆ ನಾವೇ ನಿರಂತರವಾಗಿ ನಿಗಾ ವಹಿಸುತ್ತಿರುತ್ತೇವೆ ಎನ್ನುತ್ತಾರೆ ಅಬ್ಬಕ್ಕ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು.
ಮೂವರು ಸಿಬಂದಿ, ಎಸ್‌ಐ ಮತ್ತು ಚಾಲಕ ಇದರಲ್ಲಿದ್ದಾರೆ. ಇದನ್ನು ಮತ್ತಷ್ಟು ಬಲಿಷ್ಠಗೊಳಿಸುವ ಚಿಂತನೆ ಇಲಾಖೆಯದ್ದು. ಆದರೆ ಒಟ್ಟಾರೆಯಾಗಿ ಇಲಾಖೆಯಲ್ಲಿಯೇ ಸಿಬಂದಿ ಕೊರತೆ ಇರುವುದರಿಂದ ಅಬ್ಬಕ್ಕ ಪಡೆಗೂ ಅದು ಕಾಡುತ್ತಿದೆ.
ಅಬ್ಬಕ್ಕ ಪಡೆಗೆ ಮೆಚ್ಚುಗೆ
ಅಬ್ಬಕ್ಕ ಪಡೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರಲ್ಲಿ, ವಿಶೇಷವಾಗಿ ಹೆಣ್ಮಕ್ಕಳಲ್ಲಿ ಹೆಚ್ಚು ಭದ್ರತೆಯ ಭಾವನೆ ಮೂಡಿಸುತ್ತಿದೆ. ಇದನ್ನು ಮತ್ತಷ್ಟು ಬಲಿಷ್ಠಗೊಳಿಸುವ ಚಿಂತನೆ ಇದೆ. ಆದರೆ ಸದ್ಯ ಜಿಲ್ಲೆಗೆ ವಿಸ್ತರಿಸುವ ಯೋಚನೆ ಇಲ್ಲ.
– ನಿಶಾ ಜೇಮ್ಸ್ಉಡುಪಿ ಎಸ್ಪಿ
ತುರ್ತು ಸಂಪರ್ಕಕ್ಕಾಗಿ
0820 2525599
0820 2526444