Advertisement
ನಗರದ ವಿವಿಧ ಭಾಗಗಳಲ್ಲಿ ಮಹಿಳೆಯರು, ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದೂರು ದೊರೆತೊಡನೆ ಸ್ಥಳಕ್ಕಾಗಮಿಸುವ ಅಬ್ಬಕ್ಕ ಪಡೆ ಮಹಿಳೆಯರನ್ನು ರಕ್ಷಿಸಲಿದೆ. ಮಹಿಳಾ ಪೊಲೀಸರೇ ಇರುವ ಈ ತಂಡವನ್ನು ಓರ್ವ ಎಸ್‌ಐ ದರ್ಜೆ ಮಹಿಳಾ ಅಧಿಕಾರಿ ಮುನ್ನಡೆಸುತ್ತಿದ್ದಾರೆ. ಇನ್ನುಳಿದಂತೆ 9 ಹೆಡ್ ಕಾನ್ಸ್‌ಟೆಬಲ್, 40 ಪಿಸಿಗಳು ಇದ್ದಾರೆ. ಮಹಿಳೆಯರು ಇರುವ ಸ್ಥಳದಲ್ಲಿ ಯಾವುದೇ ಅವಘಡ ಅಥವಾ ಅನಪೇಕ್ಷಿತ ಘಟನೆ ಸಂಭವಿಸಿದಲ್ಲಿ 100 ನಂಬರ್‌ಗೆ ಕರೆ ಮಾಡ ಬಹುದು ಅಥವಾ ಸ್ಥಳೀಯ ಠಾಣೆಯ ಸಂಖ್ಯೆಗೆ ಕರೆ ಮಾಡಬೇಕು. ಆ ಸಂದರ್ಭ ದೂರನ್ನು ಅಬ್ಬಕ್ಕ ಪಡೆಗೆ ವರ್ಗಾಯಿಸಲಾಗುತ್ತದೆ. ಅವರು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಾರೆ.
Related Articles
Advertisement
ನಗರದ ಜನನಿಬಿಡ ಪ್ರದೇಶಗಳಾದ ಸಿಟಿಸೆಂಟರ್, ಫೋರಂ ಮಾಲ್, ಬಿಗ್‌ಬಜಾರ್, ಕದ್ರಿ ಪಾರ್ಕ್, ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ರೈಲು ನಿಲ್ದಾಣ, ಸೆಂಟ್ರಲ್ ಮಾರ್ಕೆಟ್ ಸಹಿತ ವಿವಿಧೆಡೆ ಈ ಪಡೆಯನ್ನು ನಿಯೋಜಿಸಲಾಗಿದೆ. ಒಂದೊಂದು ಪ್ರದೇಶದಲ್ಲಿ 4 ಮಂದಿಯ ತಂಡ ಕಾರ್ಯನಿರ್ವಹಿಸಲಿದೆ.
ಬ್ಲಾಕ್ ಟಿ ಶರ್ಟ್‌ನಲ್ಲಿ ಅಬ್ಬಕ್ಕ ಪಡೆ:
ಮಹಿಳಾ ಪೊಲೀಸರ ‘ಅಬ್ಬಕ್ಕ ಪಡೆ’ಗೆ ಎ. 30ರಂದು ಕಮಿಷನರ್ ಡಾ| ಸಂದೀಪ್ ಪಾಟೀಲ್ ಚಾಲನೆ ನೀಡಿದ್ದರು. ಅದಾದ ಬಳಿಕ ಅಬ್ಬಕ್ಕ ಪಡೆ ನಗರದ ಬಹುತೇಕ ಭಾಗಗಳಿಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದೆ. ಇವರಿಗಾಗಿ ಪ್ರತ್ಯೇಕ ಸಮವಸ್ತ್ರವನ್ನು ಮಾಡಲಾಗಿದೆ. ಮಿಲಿಟರಿ ಪ್ಯಾಂಟ್, ಕಪ್ಪು ಬಣ್ಣದ ಟೀ ಶರ್ಟ್ ಧರಿಸುತ್ತಿದ್ದಾರೆ. ಟೀ ಶರ್ಟ್‌ನಲ್ಲಿ ಮಂಗಳೂರು ಸಿಟಿ ಪೊಲೀಸ್ ಅಬ್ಬಕ್ಕ ಪಡೆ ಎಂಬುದಾಗಿ ಬರೆಯಲಾಗಿದೆ.
ಕೆಲಸ ಹೇಗೆ?:
ಆಯಾ ಪೊಲೀಸ್ ಠಾಣೆಯ ಆಯ್ದ ಮಹಿಳೆಯರನ್ನು ಅಬ್ಬಕ್ಕ ಪಡೆಗೆ ಸೇರಿಸಿಕೊಳ್ಳಲಾಗಿದೆ. ಅವರು ನಿಗದಿತ ಸಮಯದಲ್ಲಿ ಅವರ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ನಗರದಲ್ಲಿರುವ ಶಾಲಾ ಕಾಲೇಜು ಬಳಿ ಅಸಭ್ಯ ವರ್ತನೆ, ಚುಡಾವಣೆ, ಮಹಿಳಾ ದೌರ್ಜನ್ಯ, ನೈತಿಕ ಪೊಲೀಸ್‌ಗಿರಿ, ಸರಗಳ್ಳತನ, ಚುಡಾವಣೆ ಮತ್ತಿತರ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ಈ ಪಡೆ ಸಹಕರಿಸಲಿದೆ. ಮಹಿಳೆಯರಿಗೆ, ಮಕ್ಕಳಿಗೆ ಯಾವುದೇ ತೊಂದರೆಯಾದರೆ ಕೂಡಲೇ ಸ್ಪಂದಿಸುತ್ತಿದ್ದಾರೆ. ದೊಡ್ಡ ಮಟ್ಟದ ಘಟನೆಗಳು ಆದಲ್ಲಿ ಪಿಎಸ್‌ಐ ಅಥವಾ ಆಯಾ ಠಾಣೆಯ ಮುಖ್ಯಸ್ಥರು, ಅದಕ್ಕಿಂತ ಮೇಲ್ಪಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಅಪರಾಧ ಸಂಬಂಧಿತ ಪ್ರಕರಣಗಳು ನಡೆದಾಗ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರಲಿವೆ.
ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಪಡೆ:
ರಾಜ್ಯದ ನಾನಾ ಕಡೆಗಳಲ್ಲಿ ಈ ರೀತಿಯ ಪಡೆ ರಚನೆಯಾಗಿದ್ದು, ಆಯಾ ವ್ಯಾಪ್ತಿಯಲ್ಲಿ ವೀರ ಮಹಿಳೆಯರು, ದೇವಿಯರ ಹೆಸರನ್ನು ಇಡಲಾಗಿದೆ. 2016ರಲ್ಲಿ ಅ. 20ರಂದು ಮೈಸೂರಿನಲ್ಲಿ ಚಾಮುಂಡಿ ಪಡೆ ಉದ್ಘಾಟನೆಯಾಗಿದ್ದರೆ, 2019ರ ಮಾ. 2ರಂದು ಹಾಸನದಲ್ಲಿ ಓಬವ್ವ ಪಡೆ ರಚನೆಯಾಗಿತ್ತು. 2019ರ ಎ. 2ರಂದು ಉಡುಪಿಯಲ್ಲಿ ರಾಣಿ ಅಬ್ಬಕ್ಕ ಪಡೆಯನ್ನು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೆಮ್ಸ್ ಉದ್ಘಾಟಿಸಿದ್ದರು. ಉಡುಪಿ ನಗರ, ಮಣಿಪಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಕ್ರಮ:
ಪ್ರಸ್ತುತ ಅಬ್ಬಕ್ಕ ಪಡೆಗೆ ಪ್ರತ್ಯೇಕವಾಗಿ ಯಾವುದೇ ದೂರು ಬಾರದಿದ್ದರೂ ತಂಡವೇ ಹಲವು ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಂಡಿದೆ. ಮಹಿಳಾ ಪ್ರಯಾಣಿಕರಿಗೆ ಬಸ್‌ನಲ್ಲಾಗುವ ಸಮಸ್ಯೆಯನ್ನು ಅರಿತು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
•ವಿಶೇಷ ವರದಿ