Advertisement

ಹಾಸ್ಟೆಲ್‌ ಹುಡುಗರ ಸುತ್ತ ‘ಅಬ್ಬಬ್ಬ’

11:19 AM Jun 21, 2022 | Team Udayavani |

“ಆ ದಿನಗಳು’ ಖ್ಯಾತಿಯ ಕೆ. ಎಂ ಚೈತನ್ಯ ನಿರ್ದೇಶನದಲ್ಲಿ ಮೂಡಿಬಂದಿರುವ “ಅಬ್ಬಬ್ಬ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ಅಬ್ಬಬ್ಬ’ ಸಿನಿಮಾದ ಆಡಿಯೋವನ್ನು ಬಿಡುಗಡೆ ಮಾಡಿದೆ.

Advertisement

ಇನ್ನು “ಅಬ್ಬಬ್ಬ’ ಸಿನಿಮಾದಲ್ಲಿ ಲಿಖೀತ್‌ ಶೆಟ್ಟಿ, ಅಮೃತಾ ಅಯ್ಯಂಗಾರ್‌, ಶರತ್‌ ಲೋಹಿತಾಶ್ವ, ಅಜಯ್‌ ರಾಜ್‌, ತಾಂಡವ ರಾಮ್‌, ಧನರಾಜ್‌ ಆಚಾರ್‌, ವಿಜಯ್‌ ಚೆಂಡೂರ್‌ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳ ಮುಂದೆ ಬಂದಿದ್ದ ಕಲಾವಿದರು ಮತ್ತು ತಂತ್ರಜ್ಞರು “ಅಬ್ಬಬ್ಬ’ ಸಿನಿಮಾದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾತನಾಡಿದರು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕೆ. ಎಂ ಚೈತನ್ಯ, “”ಅಬ್ಬಬ್ಬ’ ಎಂಬ ಪದ ಆಶ್ಚರ್ಯ, ಭಯ, ಹಾಸ್ಯ ಎಲ್ಲವನ್ನು ಸೂಚಿಸುತ್ತದೆ. ನಮ್ಮ ಸಿನಿಮಾದಲ್ಲಿ ಅದನ್ನು ಹಾಸ್ಯಕ್ಕೆ ಬಳಸಿಕೊಂಡಿದ್ದೇವೆ. ಸ್ಟೂಡೆಂಟ್‌ ಲೈಫ್ ಮತ್ತು ಹಾಸ್ಟೆಲ್‌ ಲೈಪ್‌ ಬಗ್ಗೆ ಈ ಸಿನಿಮಾ ಹೇಳುತ್ತದೆ. ಹಾಸ್ಟೆಲ್‌ನಲ್ಲಿ ಹುಡುಗರು ಏನ್‌ ಮಾಡ್ತಾರೆ ಎನ್ನುವ ಬಗ್ಗೆ ಈ ಸಿನಿಮಾವಿದೆ. ನಾಲ್ಕು ಹುಡುಗರು ಮತ್ತು ಒಂದು ಹುಡುಗಿಯ ನಡುವೆ ನಡೆಯುವ ಹಾಸ್ಯ ಸನ್ನಿವೇಶಗಳೇ ಈ ಚಿತ್ರಕ್ಕೆ ಮೂಲ ಕಥೆಯಾಗಿದೆ’ ಎಂದು ಕಥಾಹಂದರ ಬಿಚ್ಚಿಟ್ಟರು.

ಇದನ್ನೂಓದಿ:ಮೂರು ಗಿರಿಗಳ ಕಥೆ ಹೇಳಲು ಹೊರಟ “ಹರಿಕಥೆಯಲ್ಲ ಗಿರಿಕಥೆ ಸಿನಿಮಾ”..!

ನಾಯಕಿ ಅಮೃತಾ ಅಯ್ಯಂಗಾರ್‌ ಸಿನಿಮಾದಲ್ಲಿ  ಹುಡುಗರ ಹಾಸ್ಟೆಲ್‌ನಲ್ಲಿ ಸಿಲುಕಿಕೊಂಡಿರುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳಿಗಿಂತ ಹೊಸಥರದ ಪಾತ್ರ ಈ ಸಿನಿಮಾದಲ್ಲಿದೆ. ಇಡೀ ಸಿನಿಮಾ ಕಂಪ್ಲೀಟ್‌ ಕಾಮಿಡಿಯಲ್ಲಿ ನಡೆಯುತ್ತದೆ. ಯೂಥ್ಸ್ ಆಡಿಯನ್ಸ್‌ಗೆ ಸಿನಿಮಾ ಇಷ್ಟವಾಗಲಿದೆ’ ಎಂಬುದು ಅಮೃತಾ ಮಾತು.

Advertisement

“ಈ ಸಿನಿಮಾದಲ್ಲಿ ನನಗೊಂದು ವಿಭಿನ್ನವಾದ ಪಾತ್ರವಿದೆ. ತುಂಬಾ ಸ್ಟ್ರಿಕ್ಟ್ ಆಗಿರುವ ವ್ಯಕ್ತಿ ಸನ್ನಿವೇಶಗಳಿಗೆ ಸಿಲುಕಿಕೊಂಡು ಒದ್ದಾಡುವ ಪಾತ್ರ ಇದಾಗಿದೆ. ನಿರ್ದೇಶಕರು ನನ್ನ ಪಾತ್ರವನ್ನು ಹಾಸ್ಯಮಯವಾಗಿ ತೋರಿಸಿದ್ದಾರೆ’ ಎನ್ನುವುದು ತಮ್ಮ ಪಾತ್ರದ ಬಗ್ಗೆ ನಟ ಶರತ್‌ ಲೋಹಿತಾಶ್ವ ಮಾತು.

ನಟರಾದ ಲಿಖೀತ್‌ ಶೆಟ್ಟಿ, ಅಜಯ್‌ ರಾಜ್‌, ತಾಂಡವ ರಾಮ್‌, ಛಾಯಾಗ್ರಹಕ ಮನೋಹರ ಜೋಶಿ ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಿತ್ರಕ್ಕೆ ದೀಪಕ್‌ ಅಲೆಕ್ಸಾಂಡರ್‌ ಸಂಗೀತ, ಹರಿದಾಸ್‌ ಸಂಕಲನವಿದೆ.

ಆನ್‌ ಆಗಸ್ಟೇನ್‌ ಹಾಗೂ ವಿವೇಕ್‌ ಥಾಮಸ್‌ ನಿರ್ಮಿಸಿರುವ “ಅಬ್ಬಬ್ಬ’ ಚಿತ್ರದ ಬಹುತೇಕ ಚಿತ್ರೀಕರಣವನ್ನು ಬೆಂಗಳೂರು ಹಾಗೂ ತುಮಕೂರು ಸುತ್ತಮುತ್ತ ನಡೆಸಲಾಗಿದೆ. ಸದ್ಯ ಹಾಡುಗಳು ಮತ್ತು ಟ್ರೇಲರ್‌ ಮೂಲಕ ಪ್ರಚಾರ ನಡೆಸುತ್ತಿರುವ ಚಿತ್ರತಂಡ ಇದೇ ಜುಲೈ 1ರಂದು ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next