Advertisement

Maldives ಪ್ರವಾಸ ಕೈಬಿಟ್ಟು ಸ್ವದೇಶದ ತಾಣಗಳತ್ತ ಚಿತ್ತ

01:40 AM Jan 09, 2024 | Team Udayavani |

ಬೆಂಗಳೂರು: ಪ್ರವಾಸೋದ್ಯಮವನ್ನೇ ಆಶ್ರಯಿ ಸಿರುವ ಮತ್ತು ತನ್ನ ಮೂಲ ಅಗತ್ಯಗಳಿಗೂ ಭಾರತವನ್ನು ಅವಲಂಬಿಸಿರುವ ಮಾಲ್ದೀವ್ಸ್‌ನ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ಭಾರತದ ಪ್ರಧಾನಿ ಮೋದಿ ಅವರನ್ನು ಟೀಕಿಸಿರುವುದಕ್ಕೆ ಈಗ ಕನ್ನಡಿಗರೂ ಸೆಡ್ಡು ಹೊಡೆದಿದ್ದಾರೆ. ತಮ್ಮ ಮಾಲ್ದೀವ್ಸ್‌ ಪ್ರವಾಸದ ಇರಾದೆಯನ್ನು ಕೈ ಬಿಡುವ ಮೂಲಕ ಆ ದೇಶಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

Advertisement

ನವೆಂಬರ್‌ನಿಂದ ಎಪ್ರಿಲ್‌ ತನಕ ಮಾಲ್ದೀವ್ಸ್‌ ಪ್ರವಾಸ ಯೋಗ್ಯ ಋತುವನ್ನು ಹೊಂದಿದೆ. ಒಂದು ಅಂದಾಜಿನ ಪ್ರಕಾರ ವಾರ್ಷಿಕ ಸುಮಾರು 25 ಸಾವಿರ ಕನ್ನಡಿಗರು ಮಾಲ್ದೀವ್ಸ್‌ಗೆ ಭೇಟಿ ನೀಡಿ ಅಲ್ಲಿನ ಬೀಚ್‌ಗಳ ಸೌಂದರ್ಯವನ್ನು ಸವಿಯುತ್ತ ಅಲ್ಲಿನ ಆರ್ಥಿಕತೆಗೆ ಉತ್ತೇಜನ ನೀಡುತ್ತಾರೆ.

ಮಾಲ್ದೀವ್ಸ್‌ ಕೂಡ ಸಿಲಿಕಾನ್‌ ಸಿಟಿಯ, ಹೆಚ್ಚು ಹಣ ಖರ್ಚು ಮಾಡುವ ಸಾಮರ್ಥ್ಯ ಹೊಂದಿರುವ ಪ್ರವಾಸಿಗರನ್ನು ಸೆಳೆಯುವ ಇರಾದೆಯಿಂದ ಕಳೆದ ಒಂದೆರಡು ವರ್ಷಗಳಲ್ಲಿ ಕನ್ನಡದ ಹಲವು ಸೆಲೆಬ್ರಿಟಿಗಳನ್ನು ತನ್ನ ಸುಂದರ ಬೀಚ್‌ಗಳಿಗೆ ಆಹ್ವಾನಿಸಿತ್ತು. ಸೆಲೆಬ್ರಿಟಿಗಳು ಅಲ್ಲಿಗೆ ಭೇಟಿ ನೀಡಿ ಮಾಲ್ದೀವ್ಸ್‌ನ ಸೌಂದರ್ಯವನ್ನು ಸೆರೆಹಿಡಿದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಮಾಲ್ದೀವ್ಸ್‌ಗೆ ಪ್ರವಾಸಕ್ಕೆ ಪ್ರೋತ್ಸಾಹ ನೀಡಲು ಯತ್ನಿಸಿದ್ದರು.

2018ರ ಬಳಿಕ ಮಾಲ್ದೀವ್ಸ್‌ ಬಗ್ಗೆ ಹೆಚ್ಚಿನ ಆಸಕ್ತಿ ತೋರಲು ಆರಂಭಿಸಿದ್ದರು. ಇದಕ್ಕೆ ಅಲ್ಲಿದ್ದ ಭಾರತಸ್ನೇಹಿ ಸರಕಾರ ಮುಖ್ಯ ಕಾರಣವಾಗಿತ್ತು ಎಂದು ಟ್ರಾವೆಲ್‌ ಏಜೆಂಟ್‌ಗಳು ಹೇಳುತ್ತಾರೆ.

ಗಣನೀಯವಾಗಿ ಇಳಿದ ಬೇಡಿಕೆ
ಮಾಲ್ದೀವ್ಸ್‌ ಬಗ್ಗೆ ಪ್ರತಿದಿನ ಹತ್ತಕ್ಕಿಂತ ಹೆಚ್ಚು ವಿಚಾರಣೆಗಳು ಬರುತ್ತಿದ್ದವು. ಆದರೆ ಕಳೆದ ನಾಲ್ಕೈದು ದಿನಗಳಲ್ಲಿ ಮಾಲ್ದೀವ್ಸ್‌ ಬಗೆಗಿನ ಕರೆಗಳು ಕಡಿಮೆ ಆಗಿವೆ. ಬದಲಾಗಿ ರಾಜ್ಯದ ಮತ್ತು ದೇಶದ ವಿವಿಧ ಪ್ರದೇಶಗಳಿಗೆ ಪ್ರವಾಸ ನಡೆಸುವ ಬಗ್ಗೆ ಪ್ರಸ್ತಾವಗಳು ಬರುತ್ತಿವೆ ಎಂದು ಬಹುತೇಕ ಟ್ರಾವೆಲ್‌ ಏಜೆಂಟ್‌ಗಳು ಹೇಳಿದ್ದಾರೆ.

Advertisement

ಪ್ರವಾಸಿಗರು ನಮ್ಮಲ್ಲಿ ಪ್ರವಾಸ ಯೋಜನೆ ಬಗ್ಗೆ ಚರ್ಚಿಸುವಾಗ ಎರಡು-ಮೂರು ಗಮ್ಯಗಳ ಬಗ್ಗೆ ವಿಚಾರಿಸುತ್ತಾರೆ. ನಾವು ಅದರಂತೆ ನಮ್ಮ ಯೋಜನೆಗಳನ್ನು ಅವರ ಮುಂದಿಡುತ್ತೇವೆ. ಆದರೆ ಎರಡು-ಮೂರು ದಿನಗಳಲ್ಲಿ ಮಾಲ್ದೀವ್ಸ್‌ ಆಯ್ಕೆಯನ್ನು ಇಟ್ಟಾಗ ನಿರಾಕರಿಸುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ಗೇಟ್‌ ವೇ ವರ್ಲ್ಡ್ ಟೂರ್‌ನ ವ್ಯವಸ್ಥಾಪಕ ನಿರ್ದೇಶಕ ಜಗನ್ನಾಥ ಆರ್‌.ವಿ. ಹೇಳುತ್ತಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ನವೆಂಬರ್‌, ಡಿಸೆಂಬರ್‌ನಲ್ಲಿ ವಿದೇಶ ಪ್ರವಾಸ ರದ್ದುಪಡಿಸುವವರ ಸಂಖ್ಯೆ ಹೆಚ್ಚಿದೆ. ಮಾಲ್ದೀವ್ಸ್‌ನ ಹಲವು ಪ್ರವಾಸ ಪ್ರಸ್ತಾವನೆಗಳು ರದ್ದಾಗುತ್ತಿವೆ ಅಥವಾ ಮುಂದೂಡುವಂತೆ ಕೋರಿಕೆಗಳು ಬರುತ್ತಿವೆ ಎಂದು ಸ್ಟಾರ್‌ ಫಿಂಗ್‌ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಸಂತೋಷ್‌ ಮಾಹಿತಿ ನೀಡಿದ್ದಾರೆ.

ಮಾಲ್ದೀವ್ಸ್‌ನಲ್ಲಿ ಹೂಡಿಕೆಗೆ ಹಿಂದೇಟು
ಮಾಲ್ದೀವ್ಸ್‌ ಜತೆಗಿನ ಸಂಬಂಧ ಹಳಸಿರುವುದರಿಂದ ಅಲ್ಲಿ ಹೂಡಿಕೆಗೂ ಉದ್ಯಮಿಗಳು ಹಿಂಜರಿಯುತ್ತಿದ್ದಾರೆ. ನಮ್ಮ ಸಂಸ್ಥೆಯ ಮುಂದೆ ಮಾಲ್ದೀವ್ಸ್‌ನ ವಿಲ್ಲಾಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಯ ಪ್ರಸ್ತಾವನೆ ಯಿತ್ತು. ಉದ್ದಿಮೆಗಳಿಗೆ ಸರಕಾರ- ಸರಕಾರಗಳ ಮಧ್ಯೆ ಉತ್ತಮ ಸಂಬಂಧ ಇರುವುದು ಮುಖ್ಯ. ಈಗ ಮಾಲ್ದೀವ್ಸ್‌ ನಡೆಯಿಂದಾಗಿ ಈ ಪ್ರಸ್ತಾವನೆ ಬಗ್ಗೆ ಮರು ಪರಿಶೀಲಿಸ ಲಿದ್ದೇನೆ. ರಾಜ್ಯದಲ್ಲೇ ಈ ಯೋಜನೆ ಜಾರಿಗೊಳಿಸುವ ಬಗ್ಗೆ ಚಿಂತಿಸುತ್ತೇನೆ ಎಂದು 3ಸ್ಯಾಮ್‌ ಇಂಟರ್‌ನ್ಯಾಶನಲ್‌ ಎಂ.ಡಿ. ಸಾಮ್ರಾಟ್‌ ಎಸ್‌. ತೀರ್ಥ ಹೇಳುತ್ತಾರೆ.
ಬನ್ನಂಜೆ ಮೂಲದ, ಪ್ರಸ್ತುತ ದಿಲ್ಲಿ ನಿವಾಸಿಯಾಗಿರುವ ರಾಮಮೂರ್ತಿ ಅವರು, “ಮೂವತ್ತನೇ ವಿವಾಹ ವಾರ್ಷಿಕೋತ್ಸವವನ್ನು ಮಾರ್ಚ್‌ ಅಥವಾ ಎಪ್ರಿಲ್‌ನಲ್ಲಿ ಮಾಲ್ದೀವ್ಸ್‌ನಲ್ಲಿ ಆಚರಿಸಬೇಕು ಎಂದು ತೀರ್ಮಾನಿಸಿದ್ದೆವು. ಆದರೆ ಇತ್ತೀಚೆಗಿನ ವಿದ್ಯಮಾನದಿಂದಾಗಿ ನಾವು ಅಲ್ಲಿಗೆ ತೆರಳುವ ಯೋಚನೆಯನ್ನು ಕೈ ಬಿಟ್ಟಿದ್ದೇವೆ. ಕರ್ನಾಟಕದಲ್ಲಿ ಸುತ್ತಾಡುವ ಚಿಂತನೆ ನಡೆಸಿದ್ದೇವೆ’ ಎಂದಿದ್ದಾರೆ.

-ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next