ಕಟಪಾಡಿ: ಘನ ಕಾರ್ಯಗಳ ಮೂಲಕ ಪರಸ್ಪರ ಆತ್ಮೀಯತೆ ಮತ್ತು ಬಾಂಧವ್ಯವನ್ನು ಸೃಷ್ಟಿಸುವ ಮೂಲಕ ಶಂಕರಪುರ ರೋಟರಿ ಕ್ಲಬ್ ನಿಜವಾದ ಮಾನವೀಯ ಮೌಲ್ಯದೊಂದಿಗೆ ಸಮಾಜಮುಖೀಯಾಗಿ ಬೆಸೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಎನ್. ರಮೇಶ್ ಹೇಳಿದರು.
ಅವರು ನ.19ರಂದು ಶಂಕರಪುರ ರೋಟರಿ ಸಭಾಭವನದಲ್ಲಿ ಶಂಕರಪುರ ರೋಟರಿ ಕ್ಲಬ್‌ಗ ಅಧಿಕೃತ ಭೇಟಿ ಸಂದರ್ಭ ನಡೆದ ಸಮಾರಂಭದಲ್ಲಿ ಮಾತನಾಡಿದರು.
ತಿಂಗಳೊಂದರೆ ಸುಮಾರು 30 ಸಾವಿರ ರೂ.ಗೂ ಅಧಿಕ ಮಾನಸಿಕ ಆರೋಗ್ಯದ ಕೊರತೆ ಇರುವವರ ಉಚಿತ ಆರೋಗ್ಯ ತಪಾಸಣೆಯ ಶಿಬಿರದ ಮೂಲಕ ಮನುಕುಲದ ನೈಜ ಮಾನವೀಯತೆಯ ಸೇವೆ ಮೂಲಕ ಶಿಬಿರಾರ್ಥಿಗಳಲ್ಲಿ ಸಂತಸದ ಹೊನಲನ್ನು ಹರಿಸಿದಂತಾಗಿದೆ ಎಂದು ಶ್ಲಾಘಿಸಿದರು.
ಕ್ಲಬ್ ಬುಲೆಟಿನ್ ಬಿಡುಗಡೆಗೊಳಿಸಿದ ಸಹಾಯಕ ಗವರ್ನರ್ ವೈ.ಗಣೇಶ ಅಚಾರ್ಯ ಮಾತನಾಡಿ, ಮಾನಸಿಕ ರೋಗಿಗಳ ತಪಾಸಣೆಯ ಉಚಿತ ಶಿಬಿರವನ್ನು ನಡೆಸುವ ಮೂಲಕ ಮನೆ ಮಾತಾಗಿರುವ ಶಂಕರಪುರ ರೋಟರಿಕ್ಲಬ್ ಶಂಕರಪುರ ಮಲ್ಲಿಗೆಯಂತೆ ಕಂಪನ್ನು ಎಲ್ಲೆಡೆ ಪಸರಿಸಿದೆ ಎಂದರು.
ವಲಯ ಸೇನಾನಿ ಚಂದ್ರಶೇಖರ್ ಸಾಲ್ಯಾನ್ ಮಾತನಾಡಿ, ಮಾತು ಕೃತಿ ಪೂರಕವಾದಾಗ ಮೌಲ್ಯ ವರ್ಧನೆಯಾಗುತ್ತದೆ. ಸಮಾಜ ಮುಖೀ ಚಟುವಟಿಕೆಯ ಮೂಲಕ ಇಲ್ಲಿ ಅದು ಸಾಕಾರಗೊಂಡಿದೆ ಎಂದು ತಿಳಿಸಿದರು.
ಶಂಕರಪುರ ರೋಟರಿ ಕ್ಲಬ್ ಅಧ್ಯಕ್ಷ ಸಂದೀಪ್ ಬಂಗೇರ, ಉಷಾರಮೇಶ್ ವೇದಿಕೆಯಲ್ಲಿದ್ದರು.
ಪಾಂಬೂರು ಬುದ್ಧಿ ಮಾಂದ್ಯ ಮಕ್ಕಳ ಶಾಲೆ ಮತ್ತು ಅರಸಿಕಟ್ಟೆ ಸೇವಾ ಆಶ್ರಮಕ್ಕೆ ಭೇಟಿ ನೀಡಿದ್ದ ರೋಟರಿ ಜಿಲ್ಲಾ ಗವರ್ನರ್ ಬಿ.ಎನ್. ರಮೇಶ್ ಮತ್ತು ಶಂಕರಪುರ ರೋಟರಿ ಕ್ಲಬ್ ಸೇವೆಯನ್ನು ಶ್ಲಾಘಿಸಿದರು. ರೋಟರಿ ಪ್ರಮುಖರಾದ ವಿಕ್ಟರ್ ವಾಜ್, ಅನಿಲ್ ಡೇಸ, ಫ್ರಾನ್ಸಿಸ್ ಡೇಸ, ಕ್ಲಿಫರ್ಡ್ ಡಿಮೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷ ಸಂದೀಪ್ ಬಂಗೇರ ಸ್ವಾಗತಿಸಿದರು. ವಿಕ್ಟರ್ ಮಾರ್ಟಿಸ್ ಪರಿಚಯಿಸಿದರು. ಕಾರ್ಯದರ್ಶಿ ಜೋನ್ ರೊಡ್ರಿಗಸ್ ವಂದಿಸಿದರು. ಫ್ಲಾವಿಯಾ ಮೆನೇಜಸ್, ಮಾಲಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.