Advertisement

ಏಕದಿನ ರ್‍ಯಾಂಕಿಂಗ್‌: 14ನೇ ಸಲ ನಂ.1 ಸ್ಥಾನ ಏರಿದ ಎಬಿಡಿ

11:55 AM Oct 21, 2017 | Team Udayavani |

ದುಬಾೖ: ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಎಬಿ ಡಿ ವಿಲಿಯರ್ ಮರಳಿ ಏಕದಿನ ಕ್ರಿಕೆಟಿನ ನಂಬರ್‌ ವನ್‌ ಬ್ಯಾಟ್ಸ್‌ಮನ್‌ ಆಗಿ ಮೂಡಿಬಂದಿದ್ದಾರೆ. ಪಾಕಿ ಸ್ಥಾನದ ಹಸನ್‌ ಅಲಿ ಮೊದಲ ಸಲ ನಂಬರ್‌ ವನ್‌ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಸಿಸಿ ರ್‍ಯಾಂಕಿಂಗ್‌ ಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು. 

Advertisement

ಬಾಂಗ್ಲಾದೇಶ ವಿರುದ್ಧ ಪಾರ್ಲ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೇವಲ 104 ಎಸೆತಗಳಿಂದ 176 ರನ್‌ ಸಿಡಿಸುವ ಮೂಲಕ (15 ಬೌಂಡರಿ, 7 ಸಿಕ್ಸರ್‌) ಡಿ ವಿಲಿಯರ್ ನಂಬರ್‌ ವನ್‌ ಸ್ಥಾನಕ್ಕೆ ನೆಗೆದರು. ಎಬಿಡಿ ಅವರ ಈ ಜಿಗಿತದಿಂದಾಗಿ ವಿರಾಟ್‌ ಕೊಹ್ಲಿ ಮತ್ತು ಡೇವಿಡ್‌ ವಾರ್ನರ್‌ ಒಂದೊಂದು ಸ್ಥಾನ ಕೆಳಕ್ಕಿಳಿದರು. ಡಿ ವಿಲಿಯರ್ ಏಕದಿನದ ನಂಬರ್‌ ವನ್‌ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುತ್ತಿರುವುದು ಇದು 14ನೇ ಸಲ ಎಂಬುದು ವಿಶೇಷ. 2010ರ ಮೇ 30ರಂದು ಎಬಿಡಿ ಮೊದಲ ಸಲ ನಂ.1 ಸ್ಥಾನ ಅಲಂಕರಿಸಿದ್ದರು. 

ಡಿ ವಿಲಿಯರ್ ಈಗಾಗಲೇ 2,124 ದಿನಗಳ ಕಾಲ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ. ಈ ಲೆಕ್ಕಾಚಾರದಲ್ಲಿ ಅವರಿಗೆ 2ನೇ ಸ್ಥಾನ. ವೆಸ್ಟ್‌ ಇಂಡೀಸಿನ ಕ್ರಿಕೆಟ್‌ ದೈತ್ಯ ವಿವಿಯನ್‌ ರಿಚರ್ಡ್ಸ್‌ 2,306 ದಿನಗಳ ಕಾಲ ನಂ.1 ಎನಿಸಿದ್ದು ವಿಶ್ವದಾಖಲೆ.  ಈ ದಾಖಲೆ ಮುರಿಯುವ ಅವಕಾಶವೊಂದು ಡಿ ವಿಲಿಯರ್ ಮುಂದಿದೆ. 

ಏಕದಿನ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದವರಲ್ಲಿ ಬಾಬರ್‌ ಆಜಂ, ಕ್ವಿಂಟನ್‌ ಡಿ ಕಾಕ್‌, ಹಾಶಿಮ್‌ ಆಮ್ಲ, ಮುಶ್ಫಿಕರ್‌ ರಹೀಂ ಪ್ರಮುಖರು. ಆಜಂ 2 ಸ್ಥಾನ ಮೇಲೇರಿ ಜೀವನಶ್ರೇಷ್ಠ 4ನೇ ಸ್ಥಾನಕ್ಕೆ ಬಂದಿದ್ದಾರೆ. ಡಿ ಕಾಕ್‌ 5ಕ್ಕೆ (3 ಸ್ಥಾನ ಪ್ರಗತಿ), ಆಮ್ಲ 9ಕ್ಕೆ (2 ಸ್ಥಾನ ಪ್ರಗತಿ), ರಹೀಂ 18ಕ್ಕೆ (5 ಸ್ಥಾನ ಪ್ರಗತಿ) ಬಂದಿದ್ದಾರೆ.

ಹಸನ್‌ ಅಲಿಗೆ ಅಗ್ರಸ್ಥಾನ
ಪಾಕಿಸ್ಥಾನದ ಮಧ್ಯಮ ವೇಗಿ ಹಸನ್‌ ಅಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟಿನ ನಂಬರ್‌ ವನ್‌ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ (743). ಇದರಿಂದ ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ 2ನೇ ಸ್ಥಾನಕ್ಕೆ ಇಳಿದರು (726). ಹಸನ್‌ ಅಲಿ ಅವರದು 6 ಸ್ಥಾನಗಳ ನೆಗೆತ. ಅವರು ಈ ವರ್ಷ ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ 5ನೇ ಬೌಲರ್‌. ಉಳಿ ದವರೆಂದರೆ ಟ್ರೆಂಟ್‌ ಬೌಲ್ಟ್, ಇಮ್ರಾನ್‌ ತಾಹಿರ್‌, ಕಾಗಿಸೊ ರಬಾಡ ಮತ್ತು ಜೋಶ್‌ ಹ್ಯಾಝಲ್‌ವುಡ್‌. ಏಕದಿನ ಟಾಪ್‌-10 ಏಕದಿನ ಬೌಲಿಂಗ್‌ ಯಾದಿಯಲ್ಲಿ ಭಾರತದ ಇಬ್ಬರಿದ್ದಾರೆ. ಇವರೆಂದರೆ ಸೀಮರ್‌ ಜಸ್‌ಪ್ರೀತ್‌ ಬುಮ್ರಾ (6ನೇ ಸ್ಥಾನ) ಮತ್ತು ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ (8ನೇ ಸ್ಥಾನ).

Advertisement

ಟಾಪ್‌-10  ಏಕದಿನ  ಬ್ಯಾಟ್ಸ್‌ಮನ್‌ 
1 ಎಬಿ ಡಿ ವಿಲಿಯರ್ (879)
2 ವಿರಾಟ್‌ ಕೊಹ್ಲಿ (877)
3 ಡೇವಿಡ್‌ ವಾರ್ನರ್‌ (865)
4 ಬಾಬರ್‌ ಆಜಂ (833)
5 ಕ್ವಿಂಟನ್‌ ಡಿ ಕಾಕ್‌ (802)
6 ಜೋ ರೂಟ್‌ (802)
7 ರೋಹಿತ್‌ ಶರ್ಮ (790)
8 ಕೇನ್‌ ವಿಲಿಯಮ್ಸನ್‌ (779)
9 ಹಾಶಿಮ್‌ ಆಮ್ಲ (770)
10 ಫಾ ಡು ಪ್ಲೆಸಿಸ್‌ (754).

Advertisement

Udayavani is now on Telegram. Click here to join our channel and stay updated with the latest news.

Next