ಬೆಂಗಳೂರು: ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ವಿಚಾರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸಲು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಗುರುವಾರ ಬೆಂಗಳೂರಿಗೆ ಆಗಮಿಸಿದ್ದಾರೆ.
ಮಾಜಿ ಕ್ರಿಕೆಟಿಗ ಎಬಿಡಿ ಕಳೆದ ವರ್ಷ ನವೆಂಬರ್ ನಲ್ಲಿ ಎಲ್ಲಾ ರೀತಿಯ ಆಟಗಳಿಂದ ನಿವೃತ್ತಿ ಘೋಷಿಸಿದ್ದರು. ಇದರೊಂದಿಗೆ ಆಟಗಾರನಾಗಿ ಆರ್ ಸಿಬಿ ಫ್ರಾಂಚೈಸಿಯೊದಿಗಿನ ಅವರ ಸುದೀರ್ಘ ಒಡನಾಟವನ್ನು ಕೊನೆಗೊಂಡಿತ್ತು.
ಇದೀಗ ಮತ್ತೆ ಬೇರೆ ರೂಪದಲ್ಲಿ ಫ್ರಾಂಚೈಸಿಯೊಂದಿಗೆ ಎಬಿ ಡಿವಿಲಿಯರ್ಸ್ ಆರ್ ಸಿಬಿಯೊಂದಿಗೆ ತನ್ನ ಒಡನಾಟ ಮುಂದುವರಿಸಲಿದ್ದಾರೆ. ಇಂದು ಆರ್ ಸಿಬಿ ಅಧಿಕೃತ ಟ್ವಿಟರ್ ಹ್ಯಾಂಡಲ್ ಐಪಿಎಲ್ ಫ್ರಾಂಚೈಸಿಯೊಂದಿಗೆ ತನ್ನ ಭವಿಷ್ಯದ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಆಗಮಿಸಿದ ಎಬಿಡಿ ಅವರ ವೀಡಿಯೊವನ್ನು ಹಂಚಿಕೊಂಡಿದೆ.
‘’ಹಲವು ವರ್ಷಗಳ ಬಳಿಕ ಐಟಿಸಿ ರಾಯಲ್ ಗಾರ್ಡೆನಿಯಾಗೆ ಚೆಕ್ ಇನ್ ಮಾಡುತ್ತಿದ್ದೇನೆ. ಎಷ್ಟೋ ಅಮೋಘ ನೆನಪುಗಳಿವೆ. ಇದು ನನ್ನ 25 ನೇ ಬಾರಿಯ ಚೆಕ್ ಇನ್ ಆಗಿದೆ ಎಂದು ಹೇಳಿದರು. ಟಿವಿ ಆನ್ ಆಗಿದೆ ಮತ್ತು ಪಾಕ್/ ದ.ಆಫ್ರಿಕಾ ಆಟಕ್ಕೆ ಸಿದ್ಧವಾಗಿದೆ” ಎಂದು ಹೋಟೆಲ್ ತಲುಪಿದ ಎಬಿಡಿ ಟ್ವೀಟ್ ಮಾಡಿದ್ದಾರೆ.
ಮಾಜಿ ದಕ್ಷಿಣ ಆಫ್ರಿಕಾದ ನಾಯಕ ಮೊದಲ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು. ಬಳಿಕ 2011 ರಿಂದ 2021 ರಲ್ಲಿ ನಿವೃತ್ತಿಯಾಗುವವರೆಗೆ ಅವರು ಆರ್ ಸಿಬಿ ಪರವಾಗಿ ಆಡಿದರು.