Advertisement

ಸಿದ್ದುರದ್ದು ಹೊಲಸು ನಾಲಿಗೆ: ಆಯನೂರು

09:12 PM Oct 26, 2019 | Team Udayavani |

ಶಿವಮೊಗ್ಗ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿರುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಇಲ್ಲವೇ ಸಭಾಧ್ಯಕ್ಷರು ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್‌ ಶಾಸಕ ಆಯನೂರು ಮಂಜುನಾಥ್‌ ಆಗ್ರಹಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿರಿಯ ರಾಜಕಾರಣಿ. ಮುಖ್ಯಮಂತ್ರಿಯಾಗಿದ್ದವರು. ಅವರು ಕೂಡ ಸಾಂವಿಧಾನಿಕ ಹುದ್ದೆಯಲ್ಲೇ ಇದ್ದಾರೆ. ವಿಧಾನಸಭಾಧ್ಯಕ್ಷ ಸ್ಥಾನದ ಮಹತ್ವವೂ ಗೊತ್ತಿದೆ. ಹೀಗಿದ್ದರೂ ಅಧ್ಯಕ್ಷರ ಕುರಿತು ಏಕವಚನದಲ್ಲಿ “ಅವನ್ಯಾವನೋ’ ಎಂದು ಕೀಳುಮಟ್ಟದಲ್ಲಿ ಹೇಳಿದ್ದಾರೆ. ಇದು ವ್ಯಕ್ತಿಗಾದ ಅವಮಾನವಲ್ಲ. ಸಂವಿಧಾನ ಪೀಠಕ್ಕೆ ಆದ ಅವಮಾನ. ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಲೇಬೇಕು ಎಂದರು.

ಕತ್ತೆಗೆ ವಯಸ್ಸಾದರೆ ಏನು ಬಂತು ಎಂದು ಸಿದ್ದರಾಮಯ್ಯ ಅವರ ಹಿರಿತನದ ಬಗ್ಗೆ ವ್ಯಂಗ್ಯವಾಡಿದ ಆಯನೂರು, ಸಿದ್ದರಾಮಯ್ಯನವರದ್ದು ಹೊಲಸು ನಾಲಿಗೆ. ಅವರ ಮಾತುಗಳು ಅಯೋಗ್ಯತನದ ಮಾತುಗಳು. ಇದು ಪರಮಾವಧಿ ಎಂದು ಕಿಡಿಕಾರಿದರು.

ಸಂವಿಧಾನಿಕ ಹುದ್ದೆಯನ್ನು ಕಾಪಾಡಬೇಕಾದ ಹೊಣೆ ಎಲ್ಲ ಶಾಸಕರಿಗೂ ಇರುತ್ತದೆ. ಸದನದಲ್ಲಿ ವಿಧಾನಸಭಾಧ್ಯಕ್ಷರೇ ಸುಪ್ರೀಂ. ಸದನವನ್ನು ಹೇಗೆ ನಡೆಸಿಕೊಂಡು ಹೋಗಬೇಕೆಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ. ಇದೆಲ್ಲ ಗೊತ್ತಿದ್ದು, ಈ ಸಣ್ಣ ಮನುಷ್ಯನಿಂದ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ ಎಂದು ಟೀಕಿಸಿದರು.

ತಮಗೆ ವ್ಯಾಕರಣ ಗೊತ್ತಿದೆ ಎಂದು ಹೇಳುವ ಸಿದ್ದರಾಮಯ್ಯ. ಬಹುವಚನವನ್ನೇ ಕಲಿತಿಲ್ಲ. ಭಾಷೆಯೂ ಗೊತ್ತಿಲ್ಲ. ಕಾಗೇರಿಯವರು ಸಜ್ಜನರು. ಆರು ಬಾರಿ ಗೆದ್ದಿದ್ದಾರೆ. ಇಂತಹ ಹೊಲಸು ನಾಲಿಗೆಯ ಸಿದ್ದರಾಮಯ್ಯ ಅವರಿಗಿಂತ ಕಾಗೇರಿ ಎಷ್ಟೋ ಪಾಲು ಮೇಲು ಎಂದರು.

Advertisement

ಸಂಸತ್‌ ಹಾಗೂ ವಿಧಾನಮಂಡಲಗಳಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಎಲ್ಲರೂ ನಂತರ ಕ್ಷಮೆ ಕೇಳಿ ದೊಡ್ಡವರಾಗಿದ್ದಾರೆ. ಬಿ.ಎಸ್‌. ಯಡಿಯೂರಪ್ಪನವರೂ ಕೂಡ ಕ್ಷಮೆ ಕೇಳಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ಕೂಡ ಕ್ಷಮೆ ಕೇಳಬೇಕು. ಇಲ್ಲವೇ ಅವರ ವಿರುದ್ಧ ವಿಧಾನಸಭಾಧ್ಯಕ್ಷರು ಸುಮೊಟೋ ಕೇಸು ದಾಖಲಿಸಿಕೊಂಡು ಇಲ್ಲವೇ ಹಕ್ಕುಚ್ಯುತಿಗೆ ವರ್ಗಾಯಿಸಿ ಅವರಿಗೆ ನೋಟಿಸ್‌ ನೀಡಿ ಕಠಿಣ ಕ್ರಮ ತೆಗೆ ದುಕೊಳ್ಳಲೇಬೇಕು. ಇಂತಹ ಅಯೋಗ್ಯರಿಗೆ ಇದು ಪಾಠವಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್‌. ರುದ್ರೇಗೌಡ, ಕೆ.ಜಿ. ಕುಮಾರಸ್ವಾಮಿ,ಅನಿತಾ ರವಿಶಂಕರ್‌, ರತ್ನಾಕರ್‌ ಶೆಣೈ, ಕೆ.ವಿ. ಅಣ್ಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next