Advertisement

ಮುಂಗಾರು ಮಳೆ ಕೊರತೆ: ರೈತರಿಗೆ ಆತಂಕ

10:45 AM Jul 18, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ಮುಂಗಾರು ಮಳೆ ಕೊರತೆಯಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅಲ್ಪ ಸ್ವಲ್ಪವೇ ಬಿದ್ದ ಮುಂಗಾರು ಮಳೆಯಿಂದ ತಾಲೂಕಿನ ರೈತರು ಬಿತ್ತನೆ ಮಾಡಿದ್ದರು. ಆದರೆ ಈಗ ಮಳೆ ಅಭಾವವಾಗಿದ್ದರಿಂದ ಬೆಳೆ ಬಾಡುವ ಹಂತಕ್ಕೆ ಬಂದು ನಿಂತಿದೆ.

Advertisement

ಕಳೆದ ಮೂರು ವರ್ಷದಿಂದ ಭೀಕರ ಬರಗಾಲದಲ್ಲಿ ಜೀವನ ಸಾಗಿಸಿದ ಅನ್ನದಾತರಿಗೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸಹ ಕೈಕೊಟ್ಟಿದೆ. ಸ್ವಲ್ಪವೇ ಮಳೆ ಸುರಿದ ಹಿನ್ನೆಲೆಯಲ್ಲಿ ಉದ್ದು, ಹೆಸರು, ಸೊಯಾಬಿನ್‌ ಮತ್ತು ತೊಗರಿ ಬೆಳೆಗಳು ಉತ್ತಮವಾಗಿ ಬೆಳೆದಿವೆ. ವಾಡಿಕೆಯಂತೆ ಜೂನ್‌ ತಿಂಗಳಲ್ಲಿ 138 ಮಿಮೀ ಮಳೆಯಾಗಬೇಕು. ಆದರೆ ತಾಲೂಕಿನಲ್ಲಿ ಕೇವಲ 86 ಮಿಮೀ. ಮಳೆಯಾಗಿದ್ದು, ಶೇ. 52ರಷ್ಟು ಕಡಿಮೆಯಾಗಿದೆ. ಅದರಂತೆ ಜುಲೈನಲ್ಲಿ 199 ಮಿಮೀ ಮಳೆಯಾಗಬೇಕು. ಆದರೆ ಕೇವಲ 37 ಮಳೆ ಬಂದಿದೆ.

ಹೋಬಳಿ ವಾರು ವಿವರ: ಎರಡು ತಿಂಗಳಲ್ಲಿ ತಾಲೂಕಿನಲ್ಲಿ ಶೇ. 46ರಷ್ಟು ಮಳೆ ಕಡಿಮೆಯಾಗಿದೆ. ಔರಾದ ಹೋಬಳಿಯಲ್ಲಿ 227 ಮಿಮೀ. ಆಗಬೇಕಾಗಿತ್ತು. ಆದರೆ ಇಲ್ಲಿಯವರೆಗೆ 133 ಮಿಮೀ ಮಳೆಯಾಗಿದೆ. ಶೇ. 41ರಷ್ಟು ಕಡಿಮೆಯಾಗಿದೆ.

ಚಿಂತಾಕಿ ಹೋಬಳಿಯಲ್ಲಿ 227 ಮಿಮೀ ಮಳೆ ಆಗಬೇಕು. ಆದರೆ 102 ಮಿಮೀ ಮಳೆ ಮಾತ್ರ ಬಂದಿದೆ. ಶೇ. 55ರಷ್ಟು ಕಡಿಮೆಯಾಗಿದೆ. ದಾಬಕಾ ಹೋಬಳಿಯಲ್ಲಿ 227 ಮಿಮೀ ವಾಡಿಕೆ ಮಳೆಯಾಗಬೇಕು. ಆದರೆ 139 ಮಿಮೀ ಮಳೆ ಬಂದಿದೆ. ಶೇ. 39ರಷ್ಟು ಕಡಿಮೆ ಮಳೆಯಾಗಿದೆ.

ಕಮಲನಗರ ಹೋಬಳಿಯಲ್ಲಿ 221 ಮಿಮೀ ವಾಡಿಕೆಯಂತೆ ಮಳೆಯಾಗಬೇಕು. ಆದರೆ 160 ಮಿಮೀ ಮಳೆ ಬಂದಿದೆ. ಶೇ. 50ರಷ್ಟು ಮಳೆ ಕಡಿಮೆಯಾಗಿದೆ. ಸಂತಪುರ ಹೋಬಳಿಯಲ್ಲಿ 231 ಮಿಮೀ ಮಳೆಯಾಗಬೇಕು. 144 ಮಿಮೀ ಮಳೆಯಾಗಿದೆ. ಶೇ. 38ರಷ್ಟು ಕಡಿಮೆಯಾಗಿದೆ.

Advertisement

ಠಾಣಾಕುಶನೂರ ಹೋಬಳಿ ವಾಡಿಕೆಯಂತೆ 228 ಮಳೆಯಾಗಬೇಕು. ಆದರೆ ತಾಲೂಕಿನಲ್ಲಿ 109 ಮಿಮೀ ಮಾತ್ರ ಮಳೆ ಬಂದಿದೆ. ಶೇ. 52ರಷ್ಟು ಕಡಿಮೆಯಾಗಿದೆ. ತಾಲೂಕಿನಲ್ಲಿ ಒಟ್ಟಾರೆ ಎರಡು ತಿಂಗಳಲ್ಲಿ ಶೇ. 46 ಮಳೆ ಕಡಿಮೆಯಾಗಿದೆ.

ತುಂಬದ ಜಲಮೂಲಗಳು: ಎರಡು ತಿಂಗಳು ಮಳೆಗಾಲ ಮುಗಿಯುವ ಹಂತಕ್ಕೆ ಬಂದಿದೆ. ಆದರೂ ಜಲಮೂಲಗಳಿಗೆ ಹನಿ ನೀರು ಬಂದಿಲ್ಲ. ಪಟ್ಟಣ ಸೇರಿದಂತೆ ತಾಲೂಕಿನ ಅರವತ್ತು ಗ್ರಾಮಗಳಿಗೆ ಇಂದಿಗೂ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ.

ಮಳೆಗಾಗಿ ದೇವರ ಮೊರೆ: ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದರು ಕೂಡ ತಾಲೂಕಿನಲ್ಲಿ ಇನ್ನೂ ವಾಡಿಕೆಯಂತೆ ಮಳೆ ಬಂದಿಲ್ಲ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದಿನದಿಂದ ಹೆಚ್ಚಾಗಿ ಕಾಡುತ್ತಿದೆ. ಹಿಗಾಗಿ ತಾಲೂಕಿನ ಸಂತಪುರ, ಇಟಗ್ಯಾಳ, ಚಿಮ್ಮೇಗಾಂವ,ಬೋಂತಿ ಮತ್ತು ಮಣಿಗಂಪುರ ರೈತರು ಹಾಗೂ ಗ್ರಾಮಸ್ಥರು ಹನುಮಾನ ಮಂದಿರಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಮುಂಗಾರು ಮಳೆಯಿಲ್ಲದ ಪರಿಣಾಮ ಉದ್ದು ಹಾಗೂ ಹೆಸರಿನ ಬೆಳೆಗಳ ಇಳುವರಿ ಮೇಲೆ ಪೆಟ್ಟು ಬಿಳುತ್ತದೆ. ವಾರದಲ್ಲಿ ಮಳೆ ಬಂದರೂ ಸೊಯಾಬಿನ್‌ ಹಾಗೂ ತೊಗರಿ ಬೆಳೆಗಳು ಸುಧಾರಣೆಯಾಗುತ್ತವೆ.
•ಚಂದ್ರಕಾಂತ ಉದ್ದಬ್ಯಾಳೆ,
ರೈತ ಸಂಪರ್ಕ ಕೇಂದ್ರದ ಅಧಿಕಾರಿ 

ಮೂರು ವರ್ಷದಿಂದ ಮಳೆಯಿಲ್ಲದೆ ಉತ್ತಮ ಬೆಳೆ ಸಹ ಬೆಳೆಯಲು ಸಾಧ್ಯವಾಗದೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಜೀವನ ಸಾಗಿಸಿದ್ದೇವೆ. ಆದರೆ ಈ ವರ್ಷವಾದರೂ ಉತ್ತಮ ಫಸಲು ಬೆಳೆಸಬೇಕು ಎನ್ನುವ ತವಕದಲ್ಲಿ ಇದ್ದ ನಮಗೆ ಮಳೆ ಕೈ ಕೊಟ್ಟಿದ್ದರಿಂದ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ.
•ಮಹಾವೀರ ದೇಶಮುಖ,
ರೈತ

Advertisement

Udayavani is now on Telegram. Click here to join our channel and stay updated with the latest news.

Next