ರವೀಂದ್ರ ಮುಕ್ತೇದಾರ
ಔರಾದ: ತಾಲೂಕಿನಲ್ಲಿ ಇನ್ನೂ ಮುಂಗಾರು ಮಳೆ ಬಾರದೇ ಇದ್ದರೂ ಕೂಡ ರೈತರು ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅದರಂತೆಯೇ ಕೃಷಿ ಇಲಾಖೆ ಅಧಿಕಾರಿಗಳು ಕೂಡ ರೈತರಿಗೆ ಅಗತ್ಯ ಬೀಜ ವಿತರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಔರಾದ ಹಾಗೂ ಕಮಲನಗರ ತಾಲೂಕಿನ ವ್ಯಾಪ್ತಿಯ ರೈತರು ಮುಂಗಾರು ಬಿತ್ತನೆಗಾಗಿ ಭೂಮಿ ಹದ ಮಾಡಿ ಮಳೆ ಆಗಮನಕ್ಕೆ ಕಾಯುತ್ತಿದ್ದಾರೆ. ಬಿತ್ತನೆ ಮಾಡಲು ರೈತರು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕುಳಿತಿದ್ದಾರೆ. ಅದರಂತೆ ತಾಲೂಕು ಕೃಷಿ ಇಲಾಖೆ ಹಾಗೂ ಬೀಜ ವಿತರಣೆ ಕೇಂದ್ರದ ಅಧಿಕಾರಿಗಳು ರೈತರಿಗೆ ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಮೂರು ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೆ ರೈತರು ಕೂಡ ತಮ್ಮ ಹೊಲದಲ್ಲಿನ ಬೆಳೆಗಳಲ್ಲಿ ಉತ್ತಮ ಇಳುವರಿ ತೆಗೆದಿಲ್ಲ. ಪ್ರಸಕ್ತ ಸಾಲಿನಲ್ಲಾದರೂ ಸಕಾಲಕ್ಕೆ ಮಳೆ ಬಂದು ಉತ್ತಮ ಇಳುವರಿ ತೆಗೆಯಬೇಕು ಎನ್ನುವ ನಿರೀಕ್ಷೆಯಲ್ಲಿ ತಾಲೂಕಿನ ರೈತರಿದ್ದಾರೆ. ಬೀದರ ಜಿಲ್ಲೆಯ ಭಾಲ್ಕಿ, ಹುಮನಬಾದ ಮತ್ತು ಬಸವಕಲ್ಯಾಣ ತಾಲೂಕಿನಲ್ಲಿ ಈಗಾಗಲೆ ಮುಂಗಾರು ಮಳೆ ಪ್ರವೇಶ ಮಾಡಿದೆ. ಆದರೆ ತಾಲೂಕಿನಲ್ಲಿ ಮಾತ್ರ ಇನ್ನೂ ಒಂದು ಹನಿಯೂ ಮಳೆ ಬಂದಿಲ್ಲ.
ಬೀಜ ವಿತರಣೆ ಕೇಂದ್ರಗಳು: ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 17 ಬೀಜ ವಿತರಣೆ ಕೇಂದ್ರಗಳಲ್ಲಿ ರೈತರಿಗೆ ಬೀಜ ವಿತರಣೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ರೈತ ಸಂಪರ್ಕ ಕೇಂದ್ರ ಔರಾದ, ಎಕಂಬಾ , ಚಿಂತಾಕಿ, ಸುಂಧಾಳ, ವಡಗಾಂವ(ದೇ), ಕೌಠಾ(ಬಿ), ಸಂತಪೂರ, ಠಾಣಾಕುಶನೂರ, ಮುಧೋಳ(ಬಿ),ಧೂಪತಮಗಾಂವ, ಕಮಲನಗರ, ಬೆಳಕೂಣಿ, ತೋರರ್ಣಾ,ದಾಬಕಾ, ಸಾವರಗಾಂವ, ಮುರ್ಕಿ, ಹೋಕ್ರಣಾ ಬೀಜ ವಿತರಣೆ ಕೇಂದ್ರಗಳಲ್ಲಿ 14 ಜನ ಅಧಿಕಾರಿಗಳಿಂದ ಬೀಜ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನಲ್ಲಿ 88,760 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿದೆ. ಅನ್ನದಾತರು ಸೋಯಾಬಿನ್ ಬೆಳೆ ಮೇಲೆ ಹೆಚ್ಚು ಅವಲಂಬನೆಯಾಗಿದ್ದಾರೆ. 42 ಸಾವಿರ ಕ್ವಿಂಟಲ್ ಸೋಯಾಬಿನ್ ಬೀಜದ ಬೇಡಿಕೆಯಿದ್ದು 25 ಸಾವಿರ ಕ್ವಿಂಟಲ್ ಸಂಗ್ರಹ ಮಾಡಲಾಗಿದೆ. ಇನ್ನೂ 16,500 ಕ್ವಿಂಟಲ್ ಬೀಜ ಬರಬೇಕಾಗಿದೆ. ತೊಗರಿ 20 ಸಾವಿರ ಕ್ವಿಂಟಲ್ ಬೇಡಿಯಿದ್ದು, 10ಸಾವಿರ ಕ್ವಿಂಟಲ್ ಸಂಗ್ರಹ ಮಾಡಲಾಗಿದೆ. ಇನ್ನೂ 10 ಸಾವಿರ ಕ್ವಿಂಟಲ್ ಬೀಜ ಬರಬೇಕಾಗಿದೆ. ಉದ್ದು 8 ಸಾವಿರ ಕ್ವಿಂಟಲ್ ಬೇಡಿಕೆಯಿದ್ದು ಈಗಾಗಲೆ 5 ಕ್ವಿಂಟಲ್ ಬೀಜ ಸಂಗ್ರಹ ಮಾಡಲಾಗಿದೆ. ಇನ್ನೂ ಮೂರು ಕ್ವಿಂಟಲ್ ಬರಬೇಕಾಗಿದೆ. ಹೆಸರು 7500 ಕ್ವಿಂಟಲ್ ಬೇಡಿಕೆಯಿದ್ದು 7ಸಾವಿರ ಕ್ವಿಂಟಲ್ ಸಂಗ್ರಹ ಮಾಡಲಾಗಿದೆ. 500 ಕ್ವಿಂಟಲ್ ಬರಬೇಕಾಗಿದೆ. ಜೋಳ 9 ಸಾವಿರ ಕ್ವಿಂಟಲ್ ಬೇಡಿಕೆಯಿದೆ. 9 ಕ್ವಿಂಟಲ್ ಸಂಗ್ರಹ ಮಾಡಲಾಗಿದೆ. ಹತ್ತಿ 500 ಕ್ವಿಂಟಲ್ ಬೇಡಿಕೆಯಿದೆ. ಸೂರ್ಯಕಾಂತಿ 700 ಕ್ವಿಂಟಲ್ ಬೇಡಿಕೆಯಿದೆ. ಸಂಪೂರ್ಣವಾಗಿ ಶೇಖರಣೆ ಮಾಡಲಾಗಿದೆ. ಎಳ್ಳು 200 ಕ್ವಿಂಟಲ್ ಬೇಡಿಕೆಯಾಗಿದ್ದು, ಸಂಗ್ರಹ ಮಾಡಲಾಗಿದೆ.
ಶಾಂತಿ ಕಾಪಾಡಿ: ತಾಲೂಕಿ ಸಾಮಾನ್ಯ ರೈತರಿಗೆ ಶೇ.75 ರಿಯಾಯಿತಿ ಹಾಗೂ ಎಸ್‌ಸಿ-ಎಸ್‌ಟಿ ಸಮುದಾಯದ ರೈತರಿಗೆ ಶೇ.90 ರಿಯಾಯಿತಿ ದರಲ್ಲಿ ಸರ್ಕಾರದಿಂದ ಬೀಜ ವಿತರಣೆ ಮಾಡಲಾಗುತ್ತಿದ್ದು, ರೈತರು ಶಾಂತಿ ಕಾಪಾಡುವ ಮೂಲಕ ಅಧಿಕಾರಿಗಳಿಗೆ ಸಹಕಾರ ನೀಡಲು ಮುಂದಾಗಬೇಕು. ರೈತರಿಗೆ ಸಕಾಲಕ್ಕೆ ಬೀಜ ವಿತರಣೆ ಮಾಡುವುದೇ ನಮ್ಮ ಇಲಾಖೆಯ ಮೂಲ ಗುರಿಯಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ತಿಳಿಸಿದ್ದಾರೆ.