Advertisement

ಪಪಂ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಿಸಿ

04:18 PM May 26, 2019 | Naveen |

ಔರಾದ: ಬೀದರ ಜಿಲ್ಲೆಯ ಜನರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಿದಂತೆ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪಟ್ಟಣದ ಜನರು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಬೇಕು ಎಂದು ಸಂಸದ ಭಗವಂತ ಖೂಬಾ ಮನವಿ ಮಾಡಿದರು.

Advertisement

ಪಟ್ಟಣದಲ್ಲಿ ಶನಿವಾರ ತಾಲೂಕು ಬಿಜೆಪಿ ಘಟಕ ಆಯೋಜಿಸಿದ್ದ ಸಂಸದರಿಗೆ ಸನ್ಮಾನ ಹಾಗೂ ಪಟ್ಟಣ ಪಂಚಾಯತ ಚುನಾವಣೆ ಬಹಿರಂಗ ಪ್ರಚಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಬಿಜೆಪಿ ಸರ್ಕಾರದಿಂದ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ ಎಂದು ಮತದಾರರು ದೇಶದ 19 ರಾಜ್ಯಗಳಲ್ಲಿ ಕಾಂಗ್ರೆಸ್‌ ಮುಕ್ತ ಮಾಡಿದ್ದಾರೆ. ಅದರಂತೆ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪಟ್ಟಣದ ಜನರು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಅಧಿಕಾರ ನೀಡದೆ ಬಿಜೆಪಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್‌ ಮುಕ್ತ ಪಟ್ಟಣ ಪಂಚಾಯತ ಮಾಡಬೇಕು ಎಂದರು.

ಈ ಹಿಂದೆ ನಮ್ಮ ಆಡಳಿತಾವಧಿಯಲ್ಲಿ ನೀಡಿದ ಪ್ರತಿಯೊಂದು ಭರವಸೆಗಳನ್ನು ಎರಡನೇ ಅವಧಿಯಲ್ಲಿ ಈಡೇರಿಸುತ್ತೇನೆ ಎಂದರು. ಮದ್ಯ ಮಾರಾಟ ಮಾಡುವರ ಕೈಗೆ, ಬಿಳಿ ಕೋಳಿ ಮಾರಾಟ ಮಾಡುವ ಕೈಗೆ ಪಟ್ಟಣ ಪಂಚಾಯತ ಅಧಿಕಾರ ನೀಡಿದರೆ ಪಟ್ಟಣ ಅಭಿವೃದ್ಧಿಯಿಂದ ಶಾಶ್ವತವಾಗಿ ದೂರ ಉಳಿಯುತ್ತದೆ. ಹಣ ಹೆಂಡಕ್ಕೆ ಮತದಾರರು ಮಾರು ಹೋಗದೆ ಉತ್ತಮ ಆಡಳಿತ ನೀಡುವ ನಿಮ್ಮ ವಾರ್ಡ್‌ನ ಅಭ್ಯರ್ಥಿಗಳನ್ನು ಧೈರ್ಯದಿಂದ ಗೆಲ್ಲಿಸಿ ಎಂದು ಹೇಳಿದರು.

ಶಾಸಕ ಪ್ರಭು ಚವ್ಹಾಣ ಮಾತನಾಡಿ, ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ಶಾಶ್ವತ ಮುಕ್ತಿ ನೀಡಲು ಸಂಸದರು ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ತರಬೇಕು ಎಂದರು. ನೀರಿನ ಸಮಸ್ಯೆ ಬಗೆ ಹರಿಸಿದರೆ ಪಟ್ಟಣದ ಜನರು ನಮ್ಮನ್ನು ಕೊನೆ ತನಕ ಸ್ಮರಿಸುತ್ತಾರೆ ಎಂದು ಮನವಿ ಮಾಡಿದರು.

Advertisement

ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನೀಡಿದರೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವುದರ ಜೊತೆಗೆ ಪಟ್ಟಣದ ಚಿತ್ರಣವನ್ನೆ ಬದಲಾಯಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷದ ಆಡಳಿತಾವಧಿಯಲ್ಲಿ ಪಟ್ಟಣ ಪಂಚಾಯತನಲ್ಲಿ ಭಾರಿ ಅವ್ಯವಹಾರ ನಡೆದಿದೆ. ಅದರ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಸರ್ಕಾರಕ್ಕೆ ಹಾಗೂ ಸಿಬಿಐಗೆ ಪತ್ರ ಬರೆಯಲಾಗುತ್ತದೆ. ಸರ್ಕಾರ ಪಟ್ಟಣದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಅಧ್ಯಕ್ಷರು ಗುತ್ತಿಗೇದಾರರು ಸೇರಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ ಆರೋಪಿಸಿದಾಗ, ತನಿಖೆ ಮಾಡಿಸಿ ಭ್ರಷ್ಟರಿಗೆ ತಕ್ಕ ಪಾಠ ಕಲಿಸುವಂತೆ ಅಧಿಕಾರಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಸಂಸದ ಭಗವಂತ ಖೂಬಾ ಸಾಥ್‌ ನೀಡಿದರು.

ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಮತದಾರರಿಗೆ ತಿಳಿಸುವ ಮೂಲಕ ಪಕ್ಷದ ಕಡೆಗೆ ಸೆಳೆಯುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ತಾಲೂಕು ಅಧ್ಯಕ್ಷ ಸತೀಷ ಪಾಟೀಲ, ಜಿಪಂ ಮಾಜಿ ಸದಸ್ಯ ವಸಂತ ಬಿರಾದಾರ, ಮುಖಂಡ ಡಾ| ಕಲ್ಲಪ್ಪ ಉಪ್ಪೆ, ಪ್ರಕಾಶ ಟೊಣ್ಣೆ, ಅಶೋಕ ಅಲ್ಮಾಜೆ, ಶರಣಬಸವ ಸಾವಳೆ, ಅನೀಲ ಹೋಕ್ರಣೆ ಹಾಗೂ ಪಟ್ಟಣ ಪಂಚಾಯತ 19 ಬಿಜೆಪಿ ಅಭ್ಯರ್ಥಿಗಳು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next