Advertisement

ಮೂಕ ವಿದ್ಯಾರ್ಥಿಗೆ ಚೇತನ ಗುರುಕುಲದಲ್ಲಿ ಪ್ರವೇಶ

12:22 PM Jun 19, 2019 | Naveen |

ಔರಾದ: ಶಿಕ್ಷಣ ಇಲಾಖೆ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಕೇಂದ್ರದವರು ಹಾಗೂ ಸ್ವಯಂ ಪ್ರಕಾಶಿತ ಫೌಂಡೇಶನ್‌ ಅಧ್ಯಕ್ಷರು, ಮೂಕ ವಿದ್ಯಾರ್ಥಿ ಪಾಂಡುರಂಗನಿಗೆ ಪಟ್ಟಣದ ನವ ಚೇತನ ಗುರುಕುಲದಲ್ಲಿ ಉಚಿತ ಶಿಕ್ಷಣ ಕಲ್ಪಿಸುವ ಮೂಲಕ ವಿದ್ಯಾರ್ಥಿಯ ಮೌನ ರೋದನಕ್ಕೆ ಸ್ಪಂದಿದ್ದಾರೆ.

Advertisement

ಮಂಗಳವಾರ ಉದಯವಾಣಿಯಲ್ಲಿ ಪ್ರಕಟವಾದ ‘ಮೂಕ ವಿದ್ಯಾರ್ಥಿ ಪಾಂಡುರಂಗನ ಮೌನ ರೋದನ’ ಶೀರ್ಷಿಕೆಯ ವಿಶೇಷ ವರದಿಯಿಂದ ಜಾಗೃತರಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯ ಮುಖಂಡರು, ಬಾಲಕನ ಪಾಲಕರ ಹಂಬಲದಂತೆ ನವ ಚೇತನ ಶಾಲೆಯಲ್ಲಿ ದಾಖಲಿಸಿದ್ದಾರೆ.

ಶಿಕ್ಷಣ ಇಲಾಖೆಯ ಸಿಆರ್‌ಪಿ ಉಮಾಕಾಂತ ಮಹಾಜನ ನೇತೃತ್ವದಲ್ಲಿ ಪಾಂಡುರಂಗನ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಬಾಲಕ ಪಟ್ಟಣದ ಯಾವ ಶಾಲೆಯಲ್ಲಿ ಆಸಕ್ತಿಯಿಂದ ಓದುತ್ತೇನೆ ಎನ್ನುತ್ತಾನೊ, ಅದಕ್ಕೆ ನಾವು ಹಾಗೂ ನಮ್ಮ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ವಿದ್ಯಾರ್ಥಿಯ ಚಲನವಲನ ಪರಿಶೀಲಿಸಿದ ಬಳಿಕ ಪಾಲಕರ ಆಶಯದಂತೆ ನವಚೇತನ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುವಂತೆ ಮಹಾಜನ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಒಪ್ಪಿ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ.

ಸಂಘ ಸಂಸ್ಥೆಯ ಮುಖಂಡರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಯ ಸ್ಥಿತಿಗತಿಯ ಬಗ್ಗೆ ತಿಳಿಸಿದ ತಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜುಕುಮಾರ ಶಟಕಾರ ಮುಖ್ಯಶಿಕ್ಷಕರಿಗೆ ತಿಳಿಸಿ ಶಾಲೆಯಲ್ಲಿ ದಾಖಲಿಸಿಕೊಳ್ಳುವಂತೆ ಆದೇಶ ನೀಡಿದ್ದರು.

ಸಿಆರ್‌ಪಿ ಉಮಾಕಾಂತ ಮಹಾಜನ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿಯೊಂದು ಶಾಲೆಯ ಶಿಕ್ಷಕರು, ಶಿಕ್ಷಣ ಕಲಿಯುತ್ತೇವೆ ಎಂದು ಬಂದ ವಿದ್ಯಾರ್ಥಿಗಳನ್ನು ತಮ್ಮ ಶಾಲೆಗೆ ದಾಖಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಂಥ ಸಂಸ್ಥೆಯ ಹಾಗೂ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದರು.

Advertisement

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಇಂಥ ಸಮಸ್ಯೆಗಳು ನಡೆದರೆ ಅಥವಾ ಕಂಡು ಬಂದರೂ ಕೂಡ ನಮ್ಮ ಗಮನಕ್ಕೆ ತನ್ನಿ. ತಕ್ಷಣ ಸಮಸ್ಯೆಗೆ ಪರಿಹಾರ ನೀಡಿ ಉತ್ಸಾಹಿ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಲು ಮುಂದಾಗೋಣ ಎಂದು ಸಲಹೆ ನೀಡಿದರು.

ಒಂದು ವಾರದಿಂದ ಬಾಲಕನನ್ನು ಶಾಲೆಗೆ ದಾಖಲಿಸಲು ಅಲೆದ ಪಾಲಕರು, ಉಚಿತ ಶಿಕ್ಷಣ ನೀಡಲು ಖಾಸಗಿ ಶಿಕ್ಷಣ ಸಂಸ್ಥೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದರು. ಉದಯವಾಣಿಯಲ್ಲಿ ವರದಿ ಬಂದ 10 ಗಂಟೆಯಲ್ಲಿ ಶಾಲೆಗೆ ದಾಖಲಿಸಿಕೊಂಡಿರುವುದು ಸಂತೋಷದ ವಿಷಯವಾಗಿದೆ ಎಂದು ಪಾಲಕರು ಉದಯವಾಣಿಗೆ ಅಂಭಿನಂದನೆ ಸಲ್ಲಿಸಿದ್ದಾರೆ. ಉದಯವಾಣಿ ವರದಿಗೆ ಸಾಮಾಜಿಕ ಜಾಲತಾಣದಲ್ಲೂ ಸ್ಪಂದನೆ ಮಾಡಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಯ ದಾಖಲಾತಿ ಸಂದರ್ಭದಲ್ಲಿ ಸ್ವಯಂ ಪ್ರಕಾಶಿತ ಫೌಂಡೇಶನ ಅಧ್ಯಕ್ಷ ಶಿವಕುಮಾರ ಕಾಂಬಳೆ, ಮಕ್ಕಳ ಸಹಾಯವಾಣಿ ಕೇಂದ್ರದ ಸುನೀಲಕುಮಾರ, ಅಮರೇಶ್ವರ ಗುರುಕುಲ ಅಧ್ಯಕ್ಷ ಬಸವರಾಜ ಶಟಕಾರ, ಶಿಕ್ಷಣ ಇಲಾಖೆಯ ಬಿಎಂ ಅಮರವಾಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next