Advertisement

ಆತ್ಮನಿರ್ಭರ ಭಾರತವೇ ದೇಶವಾಸಿಗಳ ಮಂತ್ರ; ನಾಯಕತ್ವ ಶೃಂಗದಲ್ಲಿ ಪ್ರಧಾನಿ ಮೋದಿ ನುಡಿ

09:53 AM Sep 04, 2020 | Nagendra Trasi |

ನವದೆಹಲಿ: ‘ಆತ್ಮನಿರ್ಭರ ಭಾರತದ ನಿರ್ಮಾಣವೇ 130 ಕೋಟಿ ಭಾರತೀಯರ ಸದ್ಯದ ಮಂತ್ರವಾಗಿದೆ.’ ಅಮೆರಿಕ-ಭಾರತ ವ್ಯೂಹಾತ್ಮಕ ಮತ್ತು ಪಾಲುದಾರಿಕಾ ವೇದಿಕೆ(ಯುಎಸ್‌ಐಎಸ್‌ ಪಿಎಫ್) ಯ 3ನೇ ನಾಯಕತ್ವ ಶೃಂಗವನ್ನು ಉದ್ದೇಶಿಸಿ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಈ ಮಾತುಗಳನ್ನಾಡಿದ್ದಾರೆ.

Advertisement

ನೇವಿಗೇಟಿಂಗ್‌ ನ್ಯೂ ಚಾಲೆಂಜಸ್‌ ಎಂಬ ಥೀಮ್‌ನಡಿ ನಡೆದ ಶೃಂಗವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ‘ಕೋವಿಡ್ ಸವಾಲಿನ ನಡುವೆಯೂ ಭಾರತೀಯರು ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ತೊಡಗಿದ್ದಾರೆ. ಆತ್ಮನಿರ್ಭರ ಭಾರತವು ಸ್ಥಳೀಯವಾದದ್ದನ್ನು ಜಾಗತಿಕ ದೊಂದಿಗೆ ಮಿಳಿತವಾಗುವಂತೆ ಮಾಡುತ್ತದೆ.

ಇದು ಭಾರತದ ಸಾಮರ್ಥ್ಯವು ಜಾಗತಿಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವಂತೆ ನೋಡಿಕೊಳ್ಳುತ್ತದೆ’ ಎಂದಿದ್ದಾರೆ. ಜಾಗತಿಕ ಸೋಂಕು ಎಲ್ಲರ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅದು ನಮ್ಮಲ್ಲಿನ ಪುಟಿದೇಳಬಲ್ಲ ಸಾಮರ್ಥ್ಯ, ಆರೋಗ್ಯ ವ್ಯವಸ್ಥೆ, ಆರ್ಥಿಕ ವ್ಯವಸ್ಥೆಯನ್ನು ಪರೀಕ್ಷೆಗೊಳಪಡಿಸಿದೆ.

ಇಂಥ ಸಂದರ್ಭದಲ್ಲಿ ನಾವು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ, ಬಡವರನ್ನು ರಕ್ಷಿಸುವ ಮತ್ತು ನಮ್ಮ ನಾಗರಿಕರ ಭವಿಷ್ಯವನ್ನು ಭದ್ರಪಡಿಸುವತ್ತ ಗಮನ ಕೇಂದ್ರೀಕರಿಸಿಯೇ ಹೆಜ್ಜೆಯಿಡಬೇಕಾಗುತ್ತದೆ. ಪ್ರಸ್ತುತ ಪರಿಸ್ಥಿತಿಯು ತಾಜಾ ಮನಸ್ಥಿತಿಯನ್ನು ಬಯಸುತ್ತದೆ. ಇದು ಅಭಿವೃದ್ಧಿಯ ಕಡೆಗಿನ ನಡಿಗೆಯೂ ಮಾನವ
ಕೇಂದ್ರಿತವಾಗಿರುವಂಥ ಮನಸ್ಥಿತಿ. ಹಾಗಾಗಿ, ಸ್ಥಳೀಯ ಅಗತ್ಯತೆಯ ನಡುವೆಯೂ ಭಾರತವು ಜಾಗತಿಕ ಹೊಣೆಗಾರಿಕೆಯಿಂದ ದೂರ ಸರಿಯಲಿಲ್ಲ. ಜಗತ್ತಿನ ಅನೇಕ ದೇಶಗಳಿಗೆ ಭಾರತವು ಅಗತ್ಯ ಔಷಧ ಮತ್ತಿತರ ವಸ್ತುಗಳನ್ನು ಪೂರೈಸಿದೆ ಎಂದು ಮೋದಿ ತಿಳಿಸಿದ್ದಾರೆ.

ಮರಣ ಪ್ರಮಾಣ ಕಡಿಮೆ: 
ಸಮಯದಲ್ಲಿ ಲಾಕ್‌ಡೌನ್‌ನಂತಹ ಜವಾಬ್ದಾರಿಯುತ ವ್ಯವಸ್ಥೆಯನ್ನು ಜಾರಿ ಮಾಡಿದ ಮೊದಲ ದೇಶಗಳಲ್ಲಿ ಭಾರತವೂ ಒಂದು. ಭಾರತದಲ್ಲಿ 1.3 ಶತಕೋಟಿ ಜನರಿದ್ದರೂ, ಕಡಿಮೆ ಸಂಪನ್ಮೂಲ ಹೊಂದಿದ್ದರೂ, ಪ್ರತಿ 10 ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಜಗತ್ತಿನಲ್ಲೇ ಅತಿ ಕಡಿಮೆ ಕೋವಿಡ್ ಮರಣ ಪ್ರಮಾಣವನ್ನು ಹೊಂದಿದ ದೇಶಗಳಲ್ಲಿ ಒಂದಾಗಿದೆ. ಗುಣ ಮುಖ ಪ್ರಮಾಣವೂ ಉತ್ತಮವಾಗಿದೆ ಎಂದಿದ್ದಾರೆ.

Advertisement

ಭಾರತೀಯರ ಆಕಾಂಕ್ಷೆ ಕುಂದಿಲ್ಲ: ಕೋವಿಡ್ ಸೋಂಕು ಹಲವಾರು ವಿಚಾರಗಳ ಮೇಲೆ ದುಷ್ಪರಿಣಾಮ ಬೀರಿದೆ. ಆದರೆ, 1.3 ಶತಕೋಟಿ ಭಾರತೀಯರ ಆಕಾಂಕ್ಷೆ ಹಾಗೂ ಗುರಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ. ಇತ್ತೀಚಿನ ತಿಂಗಳಲ್ಲೇ ಜಾರಿಯಾದ ಬಹಳಷ್ಟು ಸುಧಾರಣೆಗಳೇ ಇದಕ್ಕೆ ಸಾಕ್ಷಿ. ಜಗತ್ತಿನ ಅತಿದೊಡ್ಡ ಗೃಹನಿರ್ಮಾಣ ಯೋಜನೆಯ ಕಾಮಗಾರಿಯು ಪ್ರಗತಿಯಲ್ಲಿದೆ. ರೈಲು, ರಸ್ತೆ, ವಿಮಾನ ಸಂಪರ್ಕದ ಕೆಲಸವೂ ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಸವಾಲುಗಳನ್ನು ಮೆಟ್ಟಿ ನಿಂತಿದ್ದೇವೆ ಜಗತ್ತಿನಲ್ಲೇ ಭಾರತವು ಎರಡನೇ ಅತಿದೊಡ್ಡ ಪಿಪಿಇ ಕಿಟ್‌ ಉತ್ಪಾದಕ ದೇಶವಾಗಿ ಹೊರಹೊಮ್ಮಿದೆ. ನಾವು ಕೋವಿಡ್ ಜೊತೆಗೇ ಪ್ರವಾಹಗಳು, ಎರಡು ಚಂಡಮಾರುತಗಳು, ಮಿಡತೆ ದಾಳಿಗಳನ್ನೂ ಎದುರಿಸಿದ್ದೇವೆ. ಇದು ನಮ್ಮ ಜನರನ್ನು ಇನ್ನಷ್ಟು ಬಲಿಷ್ಠರನ್ನಾಗಿಸಿದೆ.

ಈ ಕೋವಿಡ್ ಮತ್ತು ಲಾಕ್‌ಡೌನ್‌ ನಿಂದಾಗಿ ಕೇಂದ್ರ ಸರ್ಕಾರವು ಒಂದು ವಿಚಾರವನ್ನಂತೂ ಅರಿತುಕೊಂಡಿದೆ. ಅದೇನೆಂದರೆ, ಬಡವರನ್ನು ರಕ್ಷಿಸುವುದು. ಅದಕ್ಕಾಗಿಯೇ ಸರ್ಕಾರ 8 ತಿಂಗಳ ಕಾಲ 80 ಕೋಟಿ ಜನರಿಗೆ ಉಚಿತ ಆಹಾರಧಾನ್ಯ ಒದಗಿಸಿದೆ. ಭಾರತದಲ್ಲೀಗ ಫ‌ಲಿತಾಂಶ ನೀಡುವಂತಹ, ಆಶ್ವಾಸನೆ ಪೂರೈಸುವಂತಹ ಸರ್ಕಾರವಿದೆ. ಈ ಸರ್ಕಾರಕ್ಕೆ ಉದ್ದಿಮೆ ಸ್ನೇಹಿಯಾಗುವುದು ಎಷ್ಟು ಮುಖ್ಯವೋ, ಜೀವನಸ್ನೇಹಿ ಆಗುವುದೂ ಅಷ್ಟೇ ಮುಖ್ಯವಾಗಿದೆ ಎಂದಿದ್ದಾರೆ ಮೋದಿ.

Advertisement

Udayavani is now on Telegram. Click here to join our channel and stay updated with the latest news.

Next