Advertisement

ಜನಸಾಮಾನ್ಯರಲ್ಲಿ ಹೆಚ್ಚಿನ ಹಣ ಸಂಗ್ರಹಕ್ಕೆ ಅನುಕೂಲ

09:48 PM May 20, 2020 | Hari Prasad |

ಲಾಕ್‌ ಡೌನ್‌ನಿಂದ ದೇಶದ ಅರ್ಥವ್ಯವಸ್ಥೆಯ ಚೇತರಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿರುವ ಪ್ಯಾಕೇಜ್‌ ಅತ್ಯಂತ ಸ್ತುತ್ಯರ್ಹವಾಗಿದೆ.

Advertisement

ಇತರ ಕ್ಷೇತ್ರಗಳಂತೆಯೇ ತೆರಿಗೆ ಪಾವತಿ ಮಾಡುವವರ ಬಗ್ಗೆ ಅವರು ಒಂದಿಷ್ಟು ಕ್ರಮಗಳನ್ನು ಘೋಷಿಸಿದ್ದಾರೆ.ಈ ಪೈಕಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆ ಮಾಡಿರುವುದು ಸಹಕಾರಿಯಾಗಿದೆ.

ಆದಾಯದ ಮೂಲದಲ್ಲಿಯೇ ತೆರಿಗೆ (ಟಿಡಿಎಸ್‌) ಕಡಿತ ದರದಲ್ಲಿ ಶೇ.25 ಕಡಿಮೆಗೊಳಿಸಿರುವುದರಿಂದ ಜನ ಸಾಮಾನ್ಯರ ಬಳಿ ಹಣ ಹೆಚ್ಚಿನ ಪ್ರಮಾಣದಲ್ಲಿ ಉಳಿದಂತಾಗುತ್ತದೆ.

ಈ ಕ್ರಮದಿಂದ ಮಾರುಕಟ್ಟೆ ಪುನಶ್ಚೇತನವಾಗುತ್ತದೆ ಮತ್ತು ಇದರಿಂದಾಗಿ ತೆರಿಗೆದಾರರ ಬಳಿ 90 ಸಾವಿರ ಕೋಟಿ ರೂ.ಹಣ ಲಭ್ಯವಾದಂತೆ ಆಗುತ್ತದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಇರುವ ಕೊನೆಯ ದಿನಾಂಕವನ್ನು ಜು.31ರಿಂದ ನ.30ಕ್ಕೆ ವಿಸ್ತರಣೆ ಮಾಡಿರುವುದೂ ಧನಾತ್ಮಕ ಪರಿಣಾಮ ಬೀರಲಿದೆ. ತೆರಿಗೆ ಪಾವತಿಸಿಲ್ಲ ಎಂದು ನೋಟಿಸ್‌ ಬಂದಿದ್ದರೆ ಅದನ್ನು ಬಗೆಹರಿಸಿಕೊಳ್ಳಲು ವಿವಾದ್‌ ಸೆ ವಿಶ್ವಾಸ್‌ ಯೋಜನೆ ಡಿ.31ರ ವರೆಗೆ ವಿಸ್ತರಿಸಲಾಗಿದೆ.

Advertisement

ದೇಶದ ಭವಿಷ್ಯದ ಉತ್ತಮ ದಿನಗಳನ್ನು ಗುರಿಯಾಗಿರಿಸಿಕೊಂಡು “ಆತ್ಮನಿರ್ಭರ ಭಾರತ’ ಎಂಬ ಹೊಸ ಸೂತ್ರದ ಅನುಸಾರ ದೇಶವನ್ನು ಮತ್ತೆ ಕಟ್ಟುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.

ಸ್ಥಳೀಯ ಸಂಪನ್ಮೂಲ ಗಳನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್‌ ನಿರ್ಮಾಣ ಮಾಡಲು ಸಹಕಾರಿಯಾಗಿದೆ.

ಇದಲ್ಲದೆ ಬಡ ಮತ್ತು ಮಧ್ಯಮ ವರ್ಗದ ರೈತರು, ಕಾರ್ಮಿಕರು, ವ್ಯಾಪಾರಸ್ಥರು, ಸ್ವಯಂ ಉದ್ಯೋಗಿಗಳು, ಉದ್ದಿಮೆ ದಾರರು, ಕೈಗಾರಿಕೋದ್ಯಮಿಗಳು ಸೇರಿದಂತೆ ಎಲ್ಲಾ ವರ್ಗಗಳಿಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್‌ ಅನುಕೂಲ ಮಾಡಿಕೊಡಲಿದೆ.

ಅದರಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿರುವುದು ಆಶಾದಾಯಕವಾಗಿದೆ. ದೇಶದ ಜಿಡಿಪಿಯ ಶೇ.10ರಷ್ಟನ್ನು ಪ್ಯಾಕೇಜ್‌ ರೂಪದಲ್ಲಿ ನೀಡಿರುವುದು ಎಲ್ಲಾ ವರ್ಗಗಳನ್ನು ಕೇಂದ್ರ ಸರ್ಕಾರ ಸಮಾನವಾಗಿ ಪರಿಗಣಿಸಿ ಸಂಪನ್ಮೂಲಗಳನ್ನು ಹಂಚಿದೆ ಎನ್ನುವುದು ಸಮರ್ಥನೀಯವೇ ಸರಿ.

ಮಧ್ಯಮ ಹಾಗೂ ಸಣ್ಣ ಗಾತ್ರದ ಕೈಗಾರಿಕಾ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಈ ಕ್ಷೇತ್ರದ ಉದ್ಯಮಿಗಳಿಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವ ಯೋಜನೆ ಒಳ್ಳೆಯ ಬೆಳವಣಿಗೆ. ಇದು ವಿತ್ತೀಯ ನೆರವಿನ ನಿರೀಕ್ಷೆಯಲ್ಲಿ ಇರುವ ಉದ್ದಿಮೆಗಳಿಗೆ ವರದಾನವಾಗಿರಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ವ್ಯಾಖ್ಯೆಯನ್ನು ಮತ್ತಷ್ಟು ವಿಸ್ತಾರಗೊಳಿಸಿರುವುದು ಈ ಕ್ಷೇತ್ರಕ್ಕೆ ಅನುಕೂಲವೇ ಆಗಲಿದೆ ಮತ್ತು ಈ ಕ್ಷೇತ್ರಕ್ಕೆ ಲಾಭವಾಗಲಿದೆ.

ಸಾಲ ಬಾಕಿ ಉಳಿಸಿಕೊಂಡ ಕಂಪನಿಗಳ ವಿರುದ್ಧ ಮುಂದಿನ ಒಂದು ವರ್ಷದವರೆಗೆ ದಿವಾಳಿ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳದೇ ಇರುವ ವಿಚಾರವೂ ಉದ್ದಿಮೆಗಳಿಗೆ ವರದಾನವಾಗಿ ಪರಿಣಮಿಸಲಿದೆ. ಹೀಗಾಗಿ ಬಹುತೇಕ ಅತಿ ಸಣ್ಣ, ಮಧ್ಯಮ ವಲಯದ ಕೈಗಾರಿಕೆಗಳು ದೊಡ್ಡ ಸಂಕಷ್ಟದಿಂದ ಪಾರಾಗಲಿವೆ.

ಆನ್‌ಲೈನ್‌ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬಹುವಿಧದ ಡಿಜಿಟಲ್‌ ಶಿಕ್ಷಣ ನೀಡುವುದಕ್ಕೆ ಪ್ರಧಾನಮಂತ್ರಿ ಇ ವಿದ್ಯಾ ಯೋಜನೆ ಶುರು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರ ವ್ಯಾಪ್ತಿಯಲ್ಲಿ 1 ರಿಂದ 12ನೇ ತರಗತಿಯ ಮಕ್ಕಳಿಗೆ ಆಯಾ ತರಗತಿಗೆ ಅನುಸಾರವಾಗಿ ಪ್ರತ್ಯೇಕ ಚಾನೆಲ್‌ ಶುರುವಾಗಲಿದೆ.

ಕೈಗೆಟಕುವ ದರದ ಮನೆಗಳನ್ನು ಖರೀದಿಸುವ ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಸಾಲ ಆಧಾರಿತ ಸಬ್ಸಿಡಿ ನೀಡುವ ಯೋಜನೆಯನ್ನು 2021ರ ಮಾರ್ಚ್‌ ವರೆಗೆ ಮುಂದುವರಿಸಲಾಗಿದೆ. ವಾರ್ಷಿಕವಾಗಿ 6 ಲಕ್ಷ ರೂ.ಗಳಿಂದ 12 ಲಕ್ಷ ರೂ. ಆದಾಯ ಹೊಂದಿರುವವರಿಗೆ ಇದರಿಂದ ಅನುಕೂಲ.

ಎಂಎಸ್‌ಎಂಎಇ ಉದ್ದಿಮೆಗಳಿಗೆ 4 ವರ್ಷಗಳ ಅವಧಿಗೆ ಷರತ್ತು ರಹಿತ ಸಾಲ ಹಾಗೂ 12 ತಿಂಗಳ ಕಾಲ ಬಡ್ಡಿ ವಿನಾಯಿತಿಯಿಂದ 45 ಲಕ್ಷ ಸಣ್ಣ ಉದ್ದಿಮೆದಾರರಿಗೆ ಪ್ರಯೋಜನವಾಗಲಿದೆ. ಎಂಎಸ್‌ಎಂಇ ಉದ್ದಿಮೆಗಳಿಗಾಗಿ ಮೀಸಲು ನಿಧಿ ಸ್ಥಾಪನೆಯಿಂದ ಕೈಗಾರಿಕೆಗಳ ಸಾಮರ್ಥ್ಯ ಹಾಗೂ ವ್ಯಾಪ್ತಿ ವಿಸ್ತಾರವಾಗಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಸಾಲ ವಸೂಲಿಗೆ ತೊಂದರೆ ಅನುಭವಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗೃಹ ಹಣಕಾಸು ಸಂಸ್ಥೆಗಳು, ಸೂಕ್ಷ್ಮ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್‌ ಪ್ರಕಟಿಸಲಾಗಿದೆ.

ಈ ಎಲ್ಲ ವರ್ಗಗಳ ಅಭಿವೃದ್ಧಿಗೆ ಪೂರಕವಾದಂತಹ ಸ್ವಾವಲಂಬಿ ಭಾರತ ಅಭಿಯಾನದಲ್ಲಿ 20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್‌ಗಳನ್ನು ಐದು ಹಂತಗಳಾಗಿ ವಿಂಗಡಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

ಸ್ಥಳೀಯ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಅವುಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರಧಾನಿಯವರ ನಿರೀಕ್ಷೆ ಮುಂದಿನ ದಿನಗಳಿಗೆ ಸೂಕ್ತವಾದದ್ದು.
– ರಮೇಶ್‌ ಕಟ್ಟ, ರಮೇಶ್‌ ಮತ್ತು ಕಂಪನಿ ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next