Advertisement

ಎಣ್ಣೆಕಾಳಲ್ಲೂ ಆತ್ಮನಿರ್ಭರತೆ; ಕನೇರಿಮಠದಿಂದ ದೇಸಿ ತಳಿ ಬೀಜಗಳ ಸಂರಕ್ಷಣೆ

02:46 PM Apr 13, 2022 | Team Udayavani |

ಹುಬ್ಬಳ್ಳಿ: ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಎಣ್ಣೆಕಾಳುಗಳ ಉತ್ಪಾದನೆ ಪ್ರದೇಶ ಹೆಚ್ಚಳ ಮಾಡುವ ಮೂಲಕ ಎಣ್ಣೆಕಾಳುಗಳ ವಿಚಾರದಲ್ಲಿ ದೇಶ ಆತ್ಮನಿರ್ಭರತೆ ಸಾಧಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಕೊಲ್ಲಾಪುರದ ಕನೇರಿಮಠ ಕಂಕಣ ತೊಟ್ಟಿದ್ದು, ಈಗಾಗಲೇ ಈ ನಿಟ್ಟಿನಲ್ಲಿ
ಹಲವು ಮಹತ್ವದ ಹೆಜ್ಜೆಗಳನ್ನಿರಿಸಿದೆ. ಭತ್ತ, ಕಡಲೆ, ಗೋಧಿ, ಜೋಳ ಸೇರಿದಂತೆ ವಿವಿಧ ದೇಸಿ ತಳಿ ಬೀಜಗಳ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದೆ.

Advertisement

ದೇಸಿ ಗೋಧಿ ಸಂವರ್ಧನೆ-ಸಂರಕ್ಷಣೆ, ಸಾವಯವ ಕೃಷಿ, ದೇಸಿ ಬೀಜಗಳ ಸಂರಕ್ಷಣೆ ಕುರಿತಾಗಿ ಈಗಾಗಲೇ ಮಹತ್ವದ ಸೇವೆಯಲ್ಲಿ ತೊಡಗಿರುವ ಕನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಎರಡು ರಾಜ್ಯಗಳಲ್ಲಿ ಎಣ್ಣೆಕಾಳು ಉತ್ಪಾದನೆಗೆ ಮುಂದಾಗಿದ್ದು, ವಿಶೇಷವಾಗಿ ಸೋಯಾಬಿನ್‌ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತಿದೆ. ಸೋಯಾಬಿನ್‌ ಉತ್ಪಾದನೆ ಹೆಚ್ಚಳ ನಿಟ್ಟಿನಲ್ಲಿ ರೈತರಿಗೆ ಜಾಗೃತಿ, ಮನವರಿಕೆ, ಬೀಜ ನೀಡಿಕೆ, ಬೆಳೆ ಮೇಲುಸ್ತುವಾರಿ, ಉತ್ಪನ್ನಗಳ ಖರೀದಿ ಭರವಸೆಯಂತಹ ಕ್ರಮಗಳಿಗೆ ಶ್ರೀಮಠ ಮುಂದಾಗಿದೆ.

ಎಣ್ಣೆಕಾಳು ಬೀಜ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ಅಮೆರಿಕ, ಚೀನಾ ಹಾಗೂ ಬ್ರೆಜಿಲ್‌ ನಂತರ ನಾಲ್ಕನೇ ಸ್ಥಾನದಲ್ಲಿದೆ. ವಿಶೇಷವಾಗಿ ಎಣ್ಣೆಕಾಳು ಉತ್ಪಾದನೆ ಹೆಚ್ಚಳ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ಹಾಗೂ ಉತ್ತೇಜನ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಎಣ್ಣೆಕಾಳು ಉತ್ಪಾದನೆಯಲ್ಲಿ ಶೇ.19 ಹೆಚ್ಚಳವಾಗಿದೆ. 1949-50ರಲ್ಲಿ ದೇಶದಲ್ಲಿ ಕೇವಲ 5.26 ಮಿಲಿಯನ್‌ ಮೆಟ್ರಿಕ್‌ ಟನ್‌ನಷ್ಟು ಎಣ್ಣೆಕಾಳು ಉತ್ಪಾದನೆ ಆಗುತ್ತಿತ್ತು. 2018-19ರಲ್ಲಿ 31.52 ಮಿಲಿಯನ್‌ ಟನ್‌ನಷ್ಟು ಎಣ್ಣೆಕಾಳು ಉತ್ಪಾದನೆಯಾದರೆ, 2021-22ನೇ ಸಾಲಿನಲ್ಲಿ 37.15 ಮಿಲಿಯನ್‌ ಟನ್‌ನಷ್ಟು ಎಣ್ಣೆಕಾಳು ಉತ್ಪಾದನೆಯಾಗಿದೆ.

ಎಣ್ಣೆಕಾಳುಗಳಲ್ಲಿ ಸೋಯಾಬಿನ್‌, ಶೇಂಗಾ,ಸೂರ್ಯಕಾಂತಿ, ಕೊಬ್ಬರಿ, ಎಳ್ಳು, ಸಾಸಿವೆ ಪ್ರಮುಖವಾಗಿದ್ದು, ಇದರಲ್ಲಿ ಸೋಯಾಬಿನ್‌ ಮಹತ್ವದ ಸ್ಥಾನ ಪಡೆದಿದೆ. 2020-21ರಲ್ಲಿ 12.60 ಮಿಲಿಯನ್‌ ಟನ್‌ ಸೋಯಾಬಿನ್‌ ಉತ್ಪಾದನೆಯಾದರೆ, 2021-22ರಲ್ಲಿ 13.12 ಮಿಲಿಯನ್‌ ಟನ್‌ನಷ್ಟು ಉತ್ಪಾದನೆಯಾಗಿದೆ. ಈಗಲೂ ದೇಶದ ಒಟ್ಟು ಎಣ್ಣೆಕಾಳುಗಳ ಬೇಡಿಕೆಯಲ್ಲಿ ಶೇ.60 ಎಣ್ಣೆಕಾಳುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ದೇಶ ಎಣ್ಣೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಾಕಷ್ಟು ಉತ್ತೇಜನ ನೀಡಲಾಗುತ್ತಿದ್ದು, ಸಾಂಪ್ರದಾಯಿಕವಾಗಿ ಎಣ್ಣೆಕಾಳು ಬೆಳೆಯುವ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ, ರಾಜಸ್ಥಾನ, ಈಶಾನ್ಯ ರಾಜ್ಯಗಳಲ್ಲಿ ಮತ್ತೆ ಬೆಳೆ ಕ್ಷೇತ್ರ ಹೆಚ್ಚಳ ಹಾಗೂ ಇತರೆ ರಾಜ್ಯಗಳಲ್ಲಿಯೂ ಎಣ್ಣೆಕಾಳು ಬೆಳೆ ಬೆಳೆಯುವಂತಾಗಲು ಉತ್ತೇಜನ, ಪ್ರೋತ್ಸಾಹಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಕನೇರಿಮಠ ಎರಡು ರಾಜ್ಯಗಳಲ್ಲಿ ಎಣ್ಣೆಕಾಳು ಉತ್ಪಾದನೆ ಹೆಚ್ಚಳಕ್ಕೆ ಮುಂದಾಗಿದೆ.

Advertisement

ಸೋಯಾಬಿನ್‌ ಸಂಸ್ಕರಣಾ ಕೇಂದ್ರ: ಕನೇರಿಮಠದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಸೋಯಾಬಿನ್‌ ಸಂಸ್ಕರಣಾ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರದ ಮೂಲಕ ಸೋಯಾಬಿನ್‌ ಹೊಸ ತಳಿ ಅಭಿವೃದ್ಧಿ, ಸಂಶೋಧನೆ, ಬೆಳೆ ಕ್ಷೇತ್ರ ವಿಸ್ತರಣೆ, ಬೆಳೆ ವಿಧಾನ-ನಿರ್ವಹಣೆ ಕುರಿತು ರೈತರಿಗೆ ಮಾಹಿತಿ-ತರಬೇತಿ, ಮೇಲುಸ್ತುವಾರಿ, ಬೀಜ ಸಂಸ್ಕರಣೆ ಕಾರ್ಯ ಮಾಡಲಾಗುತ್ತಿದೆ. ಸಂಸ್ಕಾರಣಾ ಕೇಂದ್ರದಲ್ಲಿ ಸಂಸ್ಕರಣೆಗೊಂಡ ಬೀಜಗಳನ್ನು ಕೇಂದ್ರ ಸರ್ಕಾರದ ಬೀಜ ಏಜೆನ್ಸಿಗಳು ಪಡೆದು ಅವುಗಳನ್ನು ಪ್ರಮಾಣೀಕರಿಸಿ ರೈತರಿಗೆ ನೀಡುವ ಕಾರ್ಯ ಮಾಡುತ್ತವೆ.

ಈಗಾಗಲೇ ಶ್ರೀಮಠದ ಜಮೀನು ಅಲ್ಲದೆ ಮಹಾರಾಷ್ಟ್ರದ ಕೆಲ ರೈತರ ಜಮೀನುಗಳಲ್ಲಿ ಸೋಯಾಬಿನ್‌ ಬೆಳೆಯಲಾಗಿದ್ದು, ಬೀಜ ತಯಾರು ಮಾಡಲಾಗಿದೆ. ಈ ವರ್ಷ ಮಹಾರಾಷ್ಟ್ರ-ಕರ್ನಾಟಕದಲ್ಲಿ ಇನ್ನಷ್ಟು ಕ್ಷೇತ್ರದಲ್ಲಿ ಸೋಯಾಬಿನ್‌ ಬೆಳೆ ವಿಸ್ತರಣೆಗೆ ಯೋಜಿಸಲಾಗಿದೆ.

ಎಣ್ಣೆಕಾಳುಗಳ ಅದಲ್ಲರೂ ಸೂರ್ಯಕಾಂತಿ ಎಣ್ಣೆಕಾಳು ಉತ್ಪಾದನೆಯಲ್ಲಿ ಕರ್ನಾಟಕ ತನ್ನದೇ ಖ್ಯಾತಿ ಹೊಂದಿದ್ದು, ದೇಶದಲ್ಲಿಯೇ ಎಣ್ಣೆಕಾಳು ಉತ್ಪಾದನೆಯಲ್ಲಿ 5-6ನೇ ಸ್ಥಾನದಲ್ಲಿತ್ತು. ಸೂರ್ಯಕಾಂತಿ, ಸೋಯಾಬಿನ್‌, ಶೇಂಗಾವನ್ನು ಪ್ರಮುಖವಾಗಿ ಬೆಳೆಯಲಾಗುತ್ತಿತ್ತು. ವಿಶೇಷವಾಗಿ ಒಂದು-ಒಂದೂವರೆ ದಶಕಗಳ ಹಿಂದೆ ಸೂರ್ಯಕಾಂತಿ ಬೆಳೆಯಲ್ಲಿ ದೇಶದಲ್ಲಿಯೇ ಹೆಚ್ಚಿನ ಪ್ರದೇಶ ಹೊಂದಿದ ಕೀರ್ತಿ ಹೊಂದಿತ್ತು. ದೇಶದ ಒಟ್ಟು ಸೂರ್ಯಕಾಂತಿ ಬೆಳೆಯಲ್ಲಿ ಶೇ.38 ಪಾಲು ರಾಜ್ಯದ್ದಾಗಿತ್ತು. ಸೂರ್ಯಕಾಂತಿ ಬೆಳೆ ನಷ್ಟ, ದರ ಕುಸಿತದಿಂದ ರಾಜ್ಯದ ರೈತರು ಸೂರ್ಯಕಾಂತಿಯಿಂದ ವಿಮುಖರಾಗಿ ಬಿಟಿ ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳದಂತಹ ಬೆಳೆಗಳ ಕಡೆ ವಾಲಿದ್ದರು. ಶೇಂಗಾ ಬೆಳೆಯಲ್ಲೂ ರಾಜ್ಯ ಪ್ರಮುಖ ಸ್ಥಾನದಲ್ಲಿತ್ತು.

100-200 ಎಕರೆಗೆ ಮುಂದಾದರೆ ನೆರವು:ಕರ್ನಾಟಕದಲ್ಲಿ ಯಾವುದಾದರೂ ಗ್ರಾಮದಲ್ಲಿ ಸುಮಾರು 100-200 ಎಕರೆಯಲ್ಲಿ ಸೋಯಾಬಿನ್‌ ಬೆಳೆಯಲು ರೈತರು ಮುಂದಾದರೆ ಅಂತಹ ರೈತರಿಗೆ ಶ್ರೀಮಠದಿಂದ ಸೋಯಾಬಿನ್‌ ಬಿತ್ತನೆ ಬೀಜ ನೀಡಲಾಗುತ್ತದೆ. ಬಿತ್ತನೆಯಿಂದ ಹಿಡಿದು ಬೆಳೆ ನಿರ್ವಹಣೆ, ಕೊಯ್ಲು, ರಾಶಿ ಮಾಡುವವರೆಗೂ ರೈತರಿಗೆ ಮಾಹಿತಿ ನೀಡಿ ಮೇಲುಸ್ತುವಾರಿ ನಡೆಸಲು ಶ್ರೀಮಠದಿಂದ ಒಬ್ಬರು ಸೂಪರ್‌ವೈಸರ್‌ ನೇಮಿಸಲಾಗುತ್ತದೆ.

ರೈತರು ಸೋಯಾಬಿನ್‌ ಬೆಳೆದ ನಂತರ ಅದನ್ನು ಶ್ರೀಮಠದಿಂದಲೇ ಖರೀದಿಸುವ ಭರವಸೆ ನೀಡಲಾಗುತ್ತದೆ. ಸೋಯಾಬಿನ್‌ ಮಾರುಕಟ್ಟೆಯಲ್ಲಿ ಇರುವ ದರಕ್ಕಿಂತ ಕ್ವಿಂಟಲ್‌ಗೆ 200-500 ರೂ. ವರೆಗೆ ಹೆಚ್ಚಿನ ದರಕ್ಕೆ ಖರೀದಿ ಮಾಡಲಾಗುತ್ತದೆ. ಕರ್ನಾಟಕ-ಮಹಾರಾಷ್ಟ್ರದಲ್ಲಿ ಸುಮಾರು 5-10 ಸಾವಿರ ಎಕರೆಯಲ್ಲಿ ಹೆಚ್ಚುವರಿ ಸೋಯಾಬಿನ್‌ ಬೆಳೆ ಬಿತ್ತನೆಗೆ ಯೋಜಿಸಲಾಗಿದೆ. ಶ್ರೀಮಠದಿಂದ ನೀಡುವ ಸೋಯಾಬಿನ್‌ ಬಿತ್ತನೆ ಬೀಜದ ಕಾಳು ಇತರೆ ಬೀಜಕ್ಕಿಂತ ದಪ್ಪವಾಗಿದ್ದು, ಫಸಲು ಸಹ ಉತ್ತಮ ರೀತಿಯಲ್ಲಿ ಬರುತ್ತದೆ ಎಂದು ಹೇಳಲಾಗುತ್ತಿದೆ.

ಎಣ್ಣೆಕಾಳು ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರದ ಉತ್ತೇಜನದ ಭಾಗವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಸುಮಾರು 150 ಎಕರೆ ಪ್ರದೇಶದಲ್ಲಿ ಶೇಂಗಾ ಬೆಳೆ ಬೆಳೆಯಲಾಗುತ್ತಿದೆ. ಎಣ್ಣೆಕಾಳು ಉತ್ಪಾದನೆಯಲ್ಲಿ ರಾಜ್ಯ ಮತ್ತೆ ವಾಲುತ್ತಿರುವುದಕ್ಕೆ ಇದೊಂದು ಉತ್ತಮ ನಡೆಯಾಗಿದೆ.ಈ ಹಿಂದೆ ಶೇಂಗಾ, ಸೂರ್ಯಕಾಂತಿ ಬೆಳೆಗೆ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ ಇನ್ನಿತರೆ ಜಿಲ್ಲೆಗಳು ಮಹತ್ವದ ಸ್ಥಾನ ಪಡೆದಿದ್ದವಾದರೂ, ಇದೀಗ ಶೇಂಗಾ-ಸೂರ್ಯಕಾಂತಿ ಈ ಜಿಲ್ಲೆಗಳಲ್ಲಿ ಕ್ಷೀಣಿಸಿದೆ.

ಕರ್ನಾಟಕದಲ್ಲಿ ಎಣ್ಣೆಕಾಳು ಉತ್ಪಾದನೆ ಪುನರುತ್ಥಾನಕ್ಕೆ ಕನೇರಿಮಠ ಮಹತ್ವದ ಹೆಜ್ಜೆ ಇರಿಸಿದ್ದು, ರೈತರು ಇದಕ್ಕೆ ಸಾಥ್‌ ನೀಡಿದರೆ ಬಿಟಿ ಹತ್ತಿ ಜಾಗದಲ್ಲಿ ಮತ್ತೆ ಸೋಯಾಬಿನ್‌, ಸೂರ್ಯಕಾಂತಿ, ಶೇಂಗಾ ವಿಜೃಂಭಿಸಬಹುದಾಗಿದೆ. ದೇಶದ ಎಣ್ಣೆಕಾಳುಗಳ ಬೇಡಿಕೆ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಿದ, ಎಣ್ಣೆಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಪಾಲು ಪಡೆದ ಹೆಮ್ಮೆ ದೊರೆಯಲಿದೆ.

ಸಾವಯವ ಕೃಷಿ ಉತ್ತೇಜನಕ್ಕೆ ಕನೇರಿಮಠ ವಿಶೇಷ ಕೈಂಕರ್ಯ ಕನೇರಿಮಠ ದೇಸಿ ಬೀಜಗಳ ಸಂರಕ್ಷಣೆ-ಸಂವರ್ಧನೆ ಕಾರ್ಯದಲ್ಲಿ ತೊಡಗುತ್ತ ಬಂದಿದೆ. ಶ್ರೀಮಠಕ್ಕೆ ಬರುವ ಭಕ್ತರಿಗೆ ಆಶೀರ್ವಾದ ರೂಪದಲ್ಲಿ ಹಿಡಿ ದೇಸಿ ಬೀಜ ನೀಡುವ ಮೂಲಕ ಇದನ್ನು ಬೆಳೆಯುವಂತೆ ಪ್ರೇರೇಪಿಸುವ ಕಾರ್ಯವನ್ನು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕೈಗೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

ಶ್ರೀಮಠದಲ್ಲಿ ದೇಶದ ಮೊದಲ ಸಾವಯವ ಕೃಷಿವಿಜ್ಞಾನ ಕೇಂದ್ರ (ಕೆವಿಕೆ) ಆರಂಭಿಸುವ ಮೂಲಕ  ಹಲವು ಸಂಶೋಧನೆ, ತಳಿ ಸಂವರ್ಧನೆ, ಬೆಳೆ ಪ್ರಯೋಗ ಕಾರ್ಯ ಕೈಗೊಳ್ಳಲಾಗುತ್ತಿದೆ. ಶ್ರೀಮಠದಲ್ಲಿ ಎರಡು ತಳಿಯ ಸೋಯಾಬಿನ್‌ ಇದ್ದರೆ, ಸುಮಾರು 20 ಪ್ರಕಾರದ ಭತ್ತ, 15 ತರಹದ ಜೋಳ, ಜವೇಗೋಧಿ,5 ತರಹದ ಗೋಧಿ, 25-30 ತರಹದ ತರಕಾರಿ-ಪಲ್ಯ ಬೀಜಗಳನ್ನು ಸಂರಕ್ಷಿಸಲಾಗಿದೆ. ಈ ಬೀಜಗಳನ್ನು ರೈತರಿಗೆ ನೀಡುವ ಮೂಲಕ ದೇಸಿತಳಿ ಬೀಜ ಉಳಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಲಾಗುತ್ತಿದೆ.

ದೇಶದಲ್ಲಿ ಬಳಕೆಯಾಗುವ ಅಡುಗೆ ಎಣ್ಣೆಯಲ್ಲಿ ಶೇ.80 ನಕಲಿಯಾಗಿದೆ. ಅದನ್ನು ಯಾವುದರಿಂದ ತಯಾರಿಸಲಾಗುತ್ತದೆ. ಏನೆಲ್ಲಾ ರಾಸಾಯನಿಕ ಬಳಸಲಾಗುತ್ತದೆ ಎಂಬ ಸತ್ಯ ಗೊತ್ತಾದರೆ ಯಾರೊಬ್ಬರೂ ಆ ಎಣ್ಣೆ ತಿನ್ನುವ ಮನಸ್ಸು ಮಾಡಲ್ಲ. ದೇಶ ಎಣ್ಣೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆತ್ತ ಸಾಗಬೇಕಾಗಿದೆ. ಇದು ನಮ್ಮ ಕೃಷಿ ಸಂಸ್ಕೃತಿಗೆ ಹೊಸದೇನೂ ಅಲ್ಲ. ಹಲವು ಮಾಯೆಗೆ ಸಿಲುಕಿ, ಮರೆಯಾಗಿದ್ದನ್ನು ಮತ್ತೆ ನೆನಪಿಸುವ ಕಾರ್ಯ ಮಾಡಲಾಗುತ್ತಿದೆ. ಈ ವರ್ಷ ಸೋಯಾಬಿನ್‌ ಬೆಳೆಗೆ ಒತ್ತು ನೀಡಲಾಗುತ್ತಿದ್ದು, ಮಹಾರಾಷ್ಟ್ರ-ಕರ್ನಾಟಕದಲ್ಲಿ ಆದ್ಯತೆ ನೀಡಲಾಗಿದೆ. ಮುಂದಿನ ವರ್ಷ ಶೇಂಗಾ ಬೆಳೆ ಹೆಚ್ಚಳಕ್ಕೆ ಯೋಜಿಸಲಾಗಿದೆ. ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿಮಠ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next