Advertisement

ಆತ್ಮನಿರ್ಭರ ಭಾರತಕ್ಕೆ ಕಾರ್ಲ ಕಜೆ ಆಧಾರ

10:58 PM Jan 15, 2021 | Team Udayavani |

ಕಾರ್ಕಳ: ಸ್ಥಳೀಯ ಬೆಳೆಗೆ ಒತ್ತು, ಮಾರುಕಟ್ಟೆ, ಆರ್ಥಿಕತೆ, ಸ್ವಾವಲಂಬನೆ, ವಿಶ್ವಕ್ಕೆ ಪರಿಚಯ, ಗ್ರಾಹಕರ ಬೆಸೆಯುವ ಪ್ರಯತ್ನವಾಗಿ ಕರಾವಳಿಗರು ದೈನಂದಿನ ಆಹಾರದಲ್ಲಿ ಬಳಸುತ್ತಿರುವ  ಕಾರ್ಕಳದ ಕಜೆ ಅಕ್ಕಿಯನ್ನು ವ್ಯವಸ್ಥಿತ ಮಾರುಕಟ್ಟೆ  ಹಾಗೂ ಗುಣಮಟ್ಟ  ಖಾತ್ರಿಗಾಗಿ  ಬ್ರ್ಯಾಂಡಿಂಗ್‌ ಮಾಡುವ, ಆತ್ಮ ನಿರ್ಭರ ಭಾರತಕ್ಕೆ  ಪೂರಕವಾದ‌ ಕಾರ್ಯಕ್ರಮಕ್ಕೆ ಕಾರ್ಕಳದಲ್ಲಿ  ಜ. 18ರಂದು ಚಾಲನೆ ದೊರಕಲಿದೆ. ಕೃಷಿ ಸಚಿವ ಬಿ.ಸಿ ಪಾಟೀಲ್‌ ಬಿಡುಗಡೆಗೊಳಿಸುವರು.

Advertisement

ಕೊಡಗಿನಲ್ಲಿ ಕಿತ್ತಳೆ, ಮೈಸೂರು ಮಲ್ಲಿಗೆ, ಚಿಕ್ಕಮಗಳೂರು ಕಾಫಿ, ದೇವನಹಳ್ಳಿ ಚಕ್ಕೋತ, ಉಡುಪಿಯ ಮಟ್ಟುಗುಳ್ಳ, ಮಲ್ಲಿಗೆ, ಬ್ಯಾಡಗಿ ಮೆಣಸಿನಕಾಯಿ ಇದರ ಸಾಲಿಗೆ ಕರಾವಳಿಯ ಜನಪ್ರಿಯ ಕಾರ್ಕಳ (ಕಾರ್ಲ) ಕಜೆ ಅಕ್ಕಿ  ಬ್ರ್ಯಾಂಡಿಂಗ್‌ ಆಗುತ್ತಿದೆ.

ಕಜೆ ಅಕ್ಕಿ ವಿಶೇಷಗಳು :

ಕೆಂಪು ಬಣ್ಣ ಮಿಶ್ರಿತ ಅಕ್ಕಿ ತಳಿ, ಆರೋಗ್ಯವರ್ಧಕ, ಹೆಚ್ಚು ರುಚಿ, ಹೆಚ್ಚು ನಾರಿನಾಂಶ, ಸುಣ್ಣ, ಪೊಟಾಶಿಯಂ, ಕಬ್ಬಿಣಾಂಶಗಳಿಂದ ಸಮೃದ್ಧ, ವಿಟಮಿನ್‌ ಬಿ-1 ಮತ್ತು ಬಿ-6 ಸತ್ವವಿದೆ. ಟೈಪ್‌-2 ಡಯಾಬಿಟಿಸ್‌ ನಿಯಂತ್ರಣಕ್ಕೆ ಸಹಕಾರಿ, ಸಕ್ಕರೆ ಅಂಶ ನಿಯಂತ್ರಣ, ದೇಹದ ಕೊಲೆಸ್ಟ್ರಾಲ್‌ ನಿಯಂತ್ರಣ.

ಬಿಳಿ ಬೆಂಡೆಗೂ ಮಾನ್ಯತೆ :

Advertisement

ಕಾರ್ಕಳದ ಬಿಳಿ ಬೆಂಡೆಯನ್ನೂ ಬ್ರ್ಯಾಂಡ್‌ ಬೆಳೆಯಾಗಿ ಘೋಷಿಸಲಾಗುತ್ತಿದೆ. ಬಿಳಿ ಬೆಂಡೆ ಕರಾವಳಿಗರ ಮಳೆಗಾಲದ ನೆಚ್ಚಿನ ತರಕಾರಿ. ಅತ್ಯಂತ ರುಚಿಕರ ಮತ್ತು ಹೆಚ್ಚು

ನಾರಿನಾಂಶದಿಂದ ಕೂಡಿದೆ. ದೊಡ್ಡ ಗಾತ್ರದ ಕಾಯಿಗಳು ಹೆಚ್ಚು  ಮೃದುತ್ವ ಹೊಂದಿರುತ್ತದೆ. ವಿವಿಧ ಖಾದ್ಯಗಳ ತಯಾರಿಕೆಗೆ ಹೊಂದಿಕೊಳ್ಳುವ ಗುಣ ಬಿಳಿ ಬೆಂಡೆಗಿದೆ.

ಕಲಬೆರಕೆ ತಡೆ :

ಕೆ.ಜಿ.ಗೆ 20 ರೂ.ನಂತೆ ಕಜೆ ಅಕ್ಕಿಯನ್ನು ಮಿಲ್‌ನವರು ಖರೀದಿಸುತ್ತಾರೆ. ಬೇರೆ ತಳಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ  ಎಲ್ಲವನ್ನೂ ಮಿಶ್ರಣ ಮಾಡಿ ಮಾರಾಟ ಮಾಡುವುದರಿಂದ ಅಸಲಿ ಕಜೆ ಅಕ್ಕಿ ಸಿಗುತ್ತಿಲ್ಲ ಎನ್ನುವ ಅಪವಾದವಿದೆ.

ಸ್ವಾತಂತ್ರ್ಯ ದಿನದಂದು  ಘೋಷಣೆ :

ಬ್ರ್ಯಾಂಡ್‌ ಆಗಿ ರೂಪಿಸುವ ಬಗ್ಗೆ ಸ್ವಾತಂತ್ರ್ಯೋತ್ಸವ ದಿನ  ಶಾಸಕರು ಘೊಷಣೆ ಮಾಡಿದ್ದರು. ಪ್ರಗತಿಪರ ಕೃಷಿಕರು, ಕೃಷಿ ತೋಟಗಾರಿಕೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳ ಜತೆ ಸಮಾಲೋಚನೆ ನಡೆಸಿದ್ದರು. ಇದೀಗ ಯೋಜನೆ ಪರಂಪರಾ ವಿವಿಧೋದ್ದೇಶ ಸಹಕಾರ ಸಂಘ, ತೆಂಗು ಬೆಳೆಗಾರರ ಸಂಘ ಸಹಕಾರದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಕಾರ್ಯಗತಗೊಳ್ಳುತ್ತಿದೆ.

ಕಜೆ ಮೇಳದ  ವೈಶಿಷ್ಟ್ಯ :

ಪ್ರಥಮ ಬಾರಿಗೆ ಕಾರ್ಕಳ ಬ್ರ್ಯಾಂಡ್‌ ಅಕ್ಕಿ ಬಿಡುಗಡೆ, ತುಳುನಾಡಿನ ಮಣ್ಣಿನ ಸೊಗಡಿನ ರುಚಿಯಿರುವ  ಅಕ್ಕಿ ಪ್ರದರ್ಶನ ಮತ್ತು ಮಾರಾಟ, ಕೃಷಿಗೆ ಸಂಬಂಧ ಪಟ್ಟ ತರಕಾರಿ, ಜೇನು, ವಿವಿಧ ಮಳಿಗೆಗಳ ಪ್ರದರ್ಶನ, ಕಜೆ ಅಕ್ಕಿ ಬೆಳೆಯುವ  ರೈತರಿಗೆ ಪ್ರೋತ್ಸಾಹ, ರೈತರಿಂದ ನೇರ ಗ್ರಾಹಕರಿಗೆ ತಲುಪಿಸುವ ಪ್ರಯತ್ನ, ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ. ಕೃಷಿ ಯಂತ್ರೋಪಕರಣಗಳ ಮಳಿಗೆಗಳು, ನೀರಾವರಿ ವ್ಯವಸ್ಥೆಯ ಮಳಿಗೆಗಳು, ಕಾರ್ಕಳದ ವಿಶೇಷ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿವೆ.

ಏನು ಲಾಭ? :

ಬ್ರ್ಯಾಂಡ್‌ ಘೋಷಣೆಯಿಂದ ಉದ್ಯೋಗ ಅವಕಾಶ ತೆರೆದುಕೊಳ್ಳಲಿದೆ. ಭತ್ತದಿಂದ ದೊರೆಯುವ ಉಪ ಉತ್ಪನ್ನಗಳಾದ ತೌಡು, ಭತ್ತದ ಹೊಟ್ಟು, ಪೋಷಕಾಂಶಯುಕ್ತ ಬೈಹುಲ್ಲು ಹೈನುಗಾರಿಕೆಗೂ ಪೂರಕವಾಗಲಿದೆ.  ಸ್ವಾವಲಂಬನೆ, ಆರ್ಥಿಕ

ಚೇತರಿಕೆಯೂ ಆಗಲಿದೆ.

ತಾ|ನ ಎರಡು  ಕೃಷಿ ಉತ್ಪನ್ನ  ಬೆಳೆಗಳಿಗೆ ಬ್ರ್ಯಾಂಡಿಂಗ್‌ ಚಿಂತನೆ ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ. ಸ್ವಾವಲಂಬಿ, ಆದಾಯ, ಆರ್ಥಿಕ ಸದೃಢತೆ, ಆರೋಗ್ಯ ದೃಷ್ಟಿಯಿಂದ ಅನುಕೂಲವಾಗಲಿದೆ.-ವಿ. ಸುನಿಲ್‌ ಕುಮಾರ್‌, ಶಾಸಕರು, ಕಾರ್ಕಳ

ಬೆಳೆ ಬೆಳೆಯಲು ಉತ್ತೇಜಿಸುವ  ನಿಟ್ಟಿನಲ್ಲಿ ಭತ್ತ ಬೆಳೆಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಲಾಭದ ಉದ್ದೇಶವಿಲ್ಲ.  ಭತ್ತ ಖರೀದಿಗೆಂದು 1.5 ಕೋ.ರೂ. ಅಂದಾಜು ಹಣ ಮೀಸಲಿಟ್ಟಿದ್ದೇವೆ-ನವೀನ್‌ ಚಂದ್ರ ಜೈನ್‌, ಅಧ್ಯಕ್ಷರು, ಪರಂಪರಾ ವಿವಿಧೋದ್ದೇಶ ಸಹಕಾರ ಸಂಘ

 

-ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next