Advertisement

ಆರೋಗ್ಯ ಸೇತು ಆ್ಯಪ್ ಕಡ್ಡಾಯವೇ ? ಲಾಕ್ ಡೌನ್ 4.0 ಮಾರ್ಗಸೂಚಿಯಲ್ಲಿ ಸರ್ಕಾರ ಹೇಳಿದ್ದೇನು ?

08:33 AM May 19, 2020 | Mithun PG |

ನವದೆಹಲಿ: ಕೋವಿಡ್ -19 ಸೋಂಕು ಪ್ರಕರಣಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ  ಕೆಲ ತಿಂಗಳ ಹಿಂದೆ ಆರೋಗ್ಯ ಸೇತು ಆ್ಯಪ್ ಅನ್ನು ಬಿಡುಗಡೆ ಮಾಡಿತ್ತು. ಮಾತ್ರವಲ್ಲದೆ ಇದನ್ನು ಸರ್ಕಾರಿ ನೌಕರರು ಕಡ್ಡಾಯವಾಗಿ ಡೌನ್ ಲೋಡ್ ಮಾಡುವಂತೆ ಆದೇಶ ಹೊರಡಿಸಿತ್ತು.

Advertisement

ಆದರೇ ಲಾಕ್  ಡೌನ್  4ನೇ ಹಂತದ ಮಾರ್ಗ ಸೂಚಿಯಲ್ಲಿ ಸರ್ಕಾರವು ಆರೋಗ್ಯ ಸೇತು ಆ್ಯಪ್ ಗೆ ಸಂಬಂಧಿಸಿದ ನಿಯಮವನ್ನು ಸರಳೀಕರಿಸಿದೆ. ಅಂದರೇ ಈ ಆ್ಯಪ್ ಅನ್ನು ಡೌನ್ ಲೋಡ್ ಮಾಡುವ ಆಯ್ಕೆಯನ್ನು ಐಚ್ಚಿಕಗೊಳಿಸಿದೆ(optional). ಗೃಹ ಸಚಿವಾಲಯ ಭಾನುವಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳಲ್ಲಿ ಆ್ಯಪ್‌ ನ ಪ್ರಯೋಜನಗಳಿಗೆ ವಿಶೇಷ ಒತ್ತು ನೀಡಿದೆ. ಇದು ವ್ಯಕ್ತಿಗಳು ಮತ್ತು ಸಮಾಜದ ರಕ್ಷಣೆಗೆ ಸಹಾಯಕವಾಗುತ್ತದೆ. ಮತ್ತು ಸಂಭವನೀಯ ಅಪಾಯವನ್ನು ಮೊದಲೇ ಕಂಡುಹಿಡಿಯಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿದೆ.

ಕಚೇರಿಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ,  ನೌಕರರು ಈ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವುದು ಅಗತ್ಯ. ಆದರೆ ಇದು ಕೇವಲ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಮೇ 1 ರಂದು ಜಾರಿಗೆ ತಂದ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರವೂ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ನೌಕರರರಿಗೆ ಆರೋಗ್ಯ ಸೇತು ಆ್ಯಪ್ ಅನ್ನು ಕಡ್ಡಾಯಗೊಳಿಸಿತ್ತು. ಆಯಾ ಸಂಸ್ಥೆಯು ತನ್ನ ಉದ್ಯೋಗಿಗಳು ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡುವ ಹೊಣೆಗಾರಿಕೆಯನ್ನು ಹೊರಬೇಕು ಎಂಬುದನ್ನು ತಿಳಿಸಿತ್ತು.

ಆದರೇ ಭಾನುವಾರ ಬಂದ 4ನೇ ಮಾರ್ಗಸೂಚಿಯಲ್ಲಿ ಸ್ಥಳೀಯ ಅಧಿಕಾರಿಗಳು ಸ್ಮಾರ್ಟ್ ಫೋನ್ ಹೊಂದಿರುವ ಜನರಿಗೆ ಆರೋಗ್ಯ ಸೇತು ಆ್ಯಪ್ ಬಳಸುವಂತೆ ಸಲಹೆ ನೀಡಬಹುದು. ಅದರ ಜೊತೆಗೆ  ಕಂಟೈನ್ ಮೆಂಟ್ ಝೋನ್ ನಲ್ಲಿರುವ ಪ್ರತಿಯೊಬ್ಬರೂ ಕೂಡ ಈ ಆ್ಯಪ್ ಬಳಸಿ ಕ್ಷಣ ಕ್ಷಣ ದ ಆರೋಗ್ಯ ಮಾಹಿತಿಯನ್ನು ಅಪ್ ಡೇಟ್ ಮಾಡುವಂತೆ ಸೂಚಿಸಬೇಕು  ಎಂಬುದನ್ನು ಮಾತ್ರ ಉಲ್ಲೇಖಿಸಲಾಗಿದೆ.

Advertisement

ಕೆಲ ದಿನಗಳ ಹಿಂದೆ ಏಲಿಯಟ್ ಆಲ್ಡರ್ಸನ್ ಎಂಬ ಹೆಸರಿನಲ್ಲಿ  ಪರಿಚಯಿಸಿಕೊಂಡಿರುವ ಫ್ರೆಂಚ್ ಹ್ಯಾಕರ್ ಒಬ್ಬಾತ  ಆರೋಗ್ಯ ಸೇತು ಆ್ಯಪ್ ನಲ್ಲಿ ಲೋಪ ಕಂಡುಬಂದಿದೆ. ಇದು 90 ಮಿಲಿಯನ್ ಭಾರತೀಯರ ಗೌಪ್ಯತಾ ಮಾಹಿತಿಗೆ ಧಕ್ಕೆ ತರುತ್ತಿದೆ ಎಂದು ಹೇಳಿಕೊಂಡಿದ್ದಾನೆ.   ಆದರೇ ಕೂಡಲೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ.  ಮಾತ್ರವಲ್ಲದೆ ಶೇ 100% ಈ ಆ್ಯಪ್ ಸುರಕ್ಷಿತ ಎಂದು ಹೇಳಿಕೊಂಡಿದೆ.

ಆರೋಗ್ಯ ಸೇತು ಆ್ಯಪ್ ಅನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಮತ್ತು ಅಪ್ ಡೇಟ್ ಮಾಡಲಾಗುತ್ತಿದೆ. ಪ್ರತಿಯೊಬ್ಬ ಭಾರತೀಯರ ಡೇಟಾ ಕೂಡ ಸುರಕ್ಷಿತವಾಗಿದ್ದು ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ಸರ್ಕಾರ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next