Advertisement

35 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು ಕಣಕ್ಕೆ

06:25 PM Dec 06, 2021 | Team Udayavani |

ಗದಗ: ರಾಜಕೀಯದಲ್ಲಿ ಬದಲಾವಣೆಗಾಗಿ “ಅವಕಾಶ ಕೊಟ್ಟು- ವ್ಯಾತ್ಯಾಸ ನೋಡಿ’ ಎಂಬ ಘೋಷವ್ಯಾಕ್ಯದೊಂದಿಗೆ ಆಮ್‌ ಆದ್ಮಿ ಪಕ್ಷ ಈ ಬಾರಿ ಗದಗ-ಬೆಟಗೇರಿ ನಗರಸಭೆಯ 35 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಸಂಸ್ಥಾಪಕ ಸದಸ್ಯ, ರಾಜ್ಯ ಸಹ ಸಂಚಾಲಕ ವಿಜಯ್‌ ಶರ್ಮಾ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ-ಬೆಟಗೇರಿ ಅವಳಿ ನಗರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಮೂಲ ಸೌಕರ್ಯಗಳ ಸಮಸ್ಯೆ ಹೆಚ್ಚಿದೆ. ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಸಾಂಪ್ರದಾಯಿಕ ಪಕ್ಷಗಳಲ್ಲಿ ಪ್ರಾಮಾಣಿಕರು, ಜನ ಸೇವಾಕಾಂಕ್ಷಿಗಳಿಗೆ ಅವಕಾಶ ದೊರೆಯುತ್ತಿಲ್ಲ. ಅಂತಹವರಿಗೆ ಎಎಪಿ ಪಕ್ಷ ವೇದಿಕೆ ಕಲ್ಪಿಸಲಿದೆ. ಈ ಬಾರಿ ಆಮ್‌ ಆದ್ಮಿ ಪಕ್ಷದಿಂದ ಉತ್ತಮರನ್ನು ಚುನಾವಣಾ ಕಣಕ್ಕಿಳಿಸಿ, ಗೆಲ್ಲಿಸುವ ಮೂಲಕ ಅವಳಿ ನಗರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಆಪ್‌ ಬಲಿಷ್ಠವಾಗದಿದ್ದರೂ, ಗುಜರಾತ್‌ನ ಬಿಜೆಪಿ ಹಾಗೂ ದೆಹಲಿ ಆಪ್‌ ಪಕ್ಷದ ಆಡಳಿತಗಳು ಜನರ ಮುಂದಿವೆ. ದೆಹಲಿಯಲ್ಲಿ ಆಡಳಿತ ಸಂಪೂರ್ಣ ಪಾರದರ್ಶಕವಾಗಿದೆ. ಜನರು ಭರಿಸಿದ ತೆರಿಗೆ ಹಣ ಪರೋಕ್ಷವಾಗಿ ಜನರಿಗೆ ತಲುಪುತ್ತಿವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಗಲಿರುಳು ಶ್ರಮಿಸುತ್ತಿದ್ದಾರೆ. ಚುನಾವಣೆಯಲ್ಲಿ ಯಾವ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಜನರ ಮುಂದಿದೆ ಎಂದರು.

ನಗರಸಭೆ ಚುನಾವಣೆಗೆ ಪಕ್ಷದ ಟಿಕೆಟ್‌ ಕೋರಿ ಈಗಾಗಲೇ 131 ಅರ್ಜಿಗಳು ಬಂದಿವೆ. ಭ್ರಷ್ಟ, ಕೋಮುವಾದಿ ಹಾಗೂ ಅಪರಾಧ ಹಿನ್ನೆಲೆ ಹೊಂದಿರದ ವ್ಯಕ್ತಿಗಳನ್ನು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಅನೇಕರು ವಿವಿಧ ವಾರ್ಡ್‌ಗಳಲ್ಲಿ ಪಕ್ಷದಿಂದ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ.

ಅವರ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಯುತ್ತಿದೆ. ಎಲ್ಲವನ್ನು ಪರಿಶೀಲಿಸಿ ಉತ್ತಮ ಅಭ್ಯರ್ಥಿಗಳನ್ನು ಪಕ್ಷ ಜನತೆಯ ಆಯ್ಕೆಗಾಗಿ ಅವರ ಮುಂದಿಡಲಿದೆ. ಪ್ರತಿಯೊಂದು ವಾರ್ಡ್‌ಗೆ ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿ, ಅವುಗಳನ್ನು ಸಾಕಾರಗಳಿಸಲು ಪ್ರಯತ್ನಿಸಲಾಗುವುದು. ಅವಳಿ ನಗರದ ಮತದಾರರು ಆಪ್‌ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ, ಪ್ರಜಾಪ್ರಭುತ್ವದ ಆಶಯಗಳನ್ನು ಗಟ್ಟಿಗೊಳಿಸಲು ಕೈಜೋಡಿಸಬೇಕೆಂದು ಮನವಿ ಮಾಡಿದರು.

Advertisement

ಅದರೊಂದಿಗೆ ಮುಂಬರುವ ತಾಪಂ, ಜಿಪಂ ಚುನಾವಣೆಗೂ ಸಿದ್ಧತೆಗಳನ್ನು ಆರಂಭಿಸಲಾಗುವುದು. ಜಿಲ್ಲಾ ಸಮಿತಿ ರಚಿಸಿ, ಸಕ್ರಿಯವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಬಿ.ಎಸ್‌.ದೇಸಾಯಿ ಅವರಿಗೆ ಜಿಲ್ಲಾ ಸಮಿತಿ ಹೊಣೆ ನೀಡಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಪ್‌ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್‌ ಜೈನ್‌, ಬಿ.ಎಸ್‌.ದೇಸಾಯಿ, ಎಲ್‌.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next