ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆ ಯಲ್ಲಿ ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷ (ಆಪ್)ವನ್ನೇ ಆರೋಪಿ ಎಂದು ಪರಿಗಣಿಸುವುದಾಗಿ ದಿಲ್ಲಿ ಹೈಕೋರ್ಟ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ಮಾಹಿತಿ ನೀಡಿದೆ.
ರಾಜಕೀಯ ಪಕ್ಷ ವೊಂದನ್ನು “ಆರೋಪಿ’ ಸ್ಥಾನದಲ್ಲಿ ನಿಲ್ಲಿಸ ಲಾಗು ತ್ತಿರುವ ದೇಶದ ಮೊದಲ ಪ್ರಕರಣ ಇದಾಗಿದೆ.
ಪ್ರಕರಣದ ಆರೋಪಿಯಾದ ದಿಲ್ಲಿಯ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ಗೆ ಇ.ಡಿ. ಈ ಮಾಹಿತಿ ನೀಡಿದೆ. ಸದ್ಯದಲ್ಲೇ ಪೂರಕ ಆರೋಪಪಟ್ಟಿ ಸಲ್ಲಿಸಲಾಗುವುದು ಮತ್ತು ಆಮ್ ಆದ್ಮಿ ಪಕ್ಷವನ್ನೇ ಸಹ-ಆರೋಪಿ ಎಂದು ಹೆಸರಿಸಲಾಗುವುದು ಎಂದು ಇ.ಡಿ. ಹೇಳಿದೆ.
ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಕಿಕ್‌ಬ್ಯಾಕ್‌ನಿಂದ ಆಪ್‌ಗೆ ಅನು ಕೂಲವಾಗಿದೆ ಎನ್ನುವುದು ಇ.ಡಿ.ಯ ವಾದ ಎಂದಾದ ಮೇಲೆ ಇಡೀ ಪಕ್ಷವನ್ನೇ ಆರೋಪಿ ಎಂದು ಏಕೆ ಹೆಸರಿಸಿಲ್ಲ ಎಂದು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಮಾರನೇ ದಿನ ಈ ಕುರಿತು ಸ್ಪಷ್ಟನೆ ನೀಡಿದ್ದ ನ್ಯಾ| ಸಂಜೀವ್ ಖನ್ನಾ ಮತ್ತು ನ್ಯಾ| ಎಸ್.ವಿ. ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠವು, “ನಾವು ಯಾವುದೇ ರಾಜಕೀಯ ಪಕ್ಷವನ್ನು ತಳಕುಹಾಕಲು ಈ ಪ್ರಶ್ನೆ ಕೇಳಿದ್ದಲ್ಲ’ ಎಂದು ಹೇಳಿತ್ತು.
ಅಚ್ಚರಿಯೇನಿಲ್ಲ ಎಂದ ಬಿಜೆಪಿ
ಇ.ಡಿ. ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯು, ಕಿಕ್‌ಬ್ಯಾಕ್‌ನಿಂದ ಬಂದ ಹಣವನ್ನು ಆಪ್ 2022ರ ಗೋವಾ ಚುನಾವಣೆಗೆ ಬಳಸಿತ್ತು. ಅಲ್ಲದೆ ಈ ಕೇಸಿನಲ್ಲಿ ಆಪ್‌ನ ಬಹುತೇಕ ನಾಯಕರು ಆರೋಪಿಗಳಾಗಿದ್ದಾರೆ. ಹೀಗಾಗಿ ಇಡೀ ಪಕ್ಷವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಇ.ಡಿ. ನಿರ್ಧಾರ ನಮಗೇನೂ ಅಚ್ಚರಿ ತಂದಿಲ್ಲ. ಆಮ್ ಆದ್ಮಿ ಪಕ್ಷವು ಆದಷ್ಟು ಬೇಗ ತಪ್ಪೊಪ್ಪಿಕೊಳ್ಳಬೇಕು ಎಂದು ಹೇಳಿದೆ.