ಚಂಡೀಗಢ್: ಚಂಡೀಗಢ ನಗರ ಪಾಲಿಕೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಮತಗಳಿಸುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಗಿಂತ ಮುನ್ನಡೆ ಸಾಧಿಸಿದೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯ ಟ್ರೈಲರ್ ಇದಾಗಿದೆ ಎಂದು ಆಪ್ ಬಣ್ಣಿಸಿದೆ.
ಇದನ್ನೂ ಓದಿ:ಕೃಷ್ಣ ಮಠದಲ್ಲಿ ನೀಡಿದ ಹೇಳಿಕೆಗಳನ್ನು ಹಿಂಪಡೆಯುತ್ತೇನೆ : ತೇಜಸ್ವಿ ಸೂರ್ಯ
ಚಂಡೀಗಢದ 35 ನಗರಪಾಲಿಕೆ ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 14 ಸ್ಥಾನಗಳಲ್ಲಿ ಭರ್ಜರಿ ಜಯಗಳಿಸುವ ಮೂಲಕ ತನ್ನ ಛಾಪನ್ನು ಮೂಡಿಸಿದೆ.
“ಇದು ಅರವಿಂದ್ ಕೇಜ್ರಿವಾಲ್ ಆಡಳಿತದ ಮಾದರಿಗೆ ಸಿಕ್ಕ ಜಯವಾಗಿದೆ. ನಮಗೆ ಒಂದು ಬಾರಿ ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದೇವು. 1996ರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸುಮಾರು 12 ವರ್ಷಕ್ಕಿಂತಲೂ ಹೆಚ್ಚು ಕಾಲ ಚಂಡೀಗಢ ನಗರಪಾಲಿಕೆಯ ಆಡಳಿತ ನಡೆಸಿದ್ದವು. ಇದೀಗ ಆಮ್ ಆದ್ಮಿ ಪಕ್ಷಕ್ಕೆ ಜನರು ಅವಕಾಶ ನೀಡಿದ್ದಾರೆ ಎಂದು ಆಪ್ ಶಾಸಕ ರಾಘವ್ ಛಡ್ಡಾ ತಿಳಿಸಿದ್ದಾರೆ.
ಪಂಜಾಬ್ ನಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ್ ಕಾಂಗ್ರೆಸ್ ನಡುವಿನ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದಾಗಿ ಚಂಡೀಗಢದ ಜನರು ಬೇಸತ್ತಿದ್ದಾರೆ. ಅವರಿಗೆ ಭರವಸೆ ಈಡೇರಿಕೆಯ ಸರ್ಕಾರವನ್ನು ಎದುರು ನೋಡುತ್ತಿದ್ದಾರೆ. ಚಂಡೀಗಢದ ಫಲಿತಾಂಶ ಟ್ರೈಲರ್ ಮಾತ್ರ, ಪಂಜಾಬ್ ನ ಚಿತ್ರಣ ಇನ್ನೂ ಬಾಕಿ ಇದೆ ಕಾದು ನೋಡಿ ಎಂದು ರಾಘವ್ ತಿಳಿಸಿದ್ದಾರೆ.
ಸೋಮವಾರ (ಡಿಸೆಂಬರ್ 27) ಬೆಳಗ್ಗೆಯಿಂದ ಚಂಡೀಗಢ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯ ಮತಎಣಿಕೆ ಆರಂಭಗೊಂಡಿತ್ತು. ಮಧ್ಯಾಹ್ನದವರೆಗಿನ ಲೆಕ್ಕಾಚಾರದ ಪ್ರಕಾರ, ಆಮ್ ಆದ್ಮಿ ಪಕ್ಷ 14 ಸ್ಥಾನ, ಬಿಜೆಪಿ 10, ಕಾಂಗ್ರೆಸ್ 06 ಹಾಗೂ ಶಿರೋಮಣಿ ಅಕಾಲಿದಳ 01 ಸ್ಥಾನಗಳಲ್ಲಿ ಜಯಗಳಿಸಿದೆ.