Advertisement

ಹೊಸ ಹೋರಾಟಕ್ಕೆ ಸಿದ್ಧವೇ ಆಪ್‌?

12:28 PM Jan 22, 2018 | |

ಆಪ್‌ನಲ್ಲಿದ್ದ ಮೂರನೇ ವರ್ಗವಿದೆಯಲ್ಲ, ಅದು ನಿಜಕ್ಕೂ ಪಕ್ಷಕ್ಕೆ ಒಂದು ರಚನಾತ್ಮಕ ವ್ಯಕ್ತಿತ್ವವನ್ನು ಕೊಟ್ಟಿತ್ತು. ಇದೊಂದು ಅತೃಪ್ತ ಸಮಾಜವಾದಿಗಳ ಗುಂಪಾಗಿತ್ತು.  ದೇಶದಲ್ಲಿ ಪರ್ಯಾಯ ಸಮಾಜೋರಾಜಕೀಯ ಆಂದೋಲನದ ಅಭಾವವನ್ನು ನೋಡಿ ಈ ಗುಂಪು ಬೇಸರಗೊಂಡಿತ್ತು.

Advertisement

ಆಮ್‌ ಆದ್ಮಿ ಪಕ್ಷದ ಇಪ್ಪತ್ತು ಶಾಸಕರನ್ನು ಅನರ್ಹಗೊಳಿಸ ಬೇಕೆಂದು ರಾಷ್ಟ್ರಪತಿಗಳಿಗೆ ಚುನಾವಣಾ ಆಯೋಗ ಶಿಫಾರಸು ಮಾಡುತ್ತಿದ್ದಂತೆಯೇ ಹುಟ್ಟಿಕೊಂಡ ರಾಜಕೀಯ ಸಂಕಟವು ಮೂರೂ ಪಕ್ಷಗಳಿಗೆ, ಅಂದರೆ, ಆಪ್‌-ಬಿಜೆಪಿ-ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. ಒಂದು ವೇಳೆ ಮುಂದಿನ ಆರು ತಿಂಗಳಲ್ಲಿ ಈ 20 ಸ್ಥಾನಗಳಿಗೆ ಚುನಾವಣೆ ನಡೆದರೆ ಅದು ಒಂದು ಚಿಕ್ಕ ರಾಜ್ಯದ ಚುನಾವಣೆಗೆ ಸಮಾನವಾಗಿರುವುದಂತೂ ನಿಶ್ಚಿತ. 2019ರ ಲೋಕಸಭಾ ಚುನಾವಣೆಗೂ ಮುನ್ನ ಈ ಮೂರೂ ಪಕ್ಷಗಳಿಗೂ ತಮ್ಮ ನೀರಿನ ಆಳವೆಷ್ಟಿದೆ ಎನ್ನುವುದನ್ನು ಅರ್ಥಮಾಡಿ ಕೊಳ್ಳುವ ಅವಕಾಶವನ್ನು ಇದು ಒದಗಿಸಲಿದೆ. ಗುಜರಾತ್‌ನಲ್ಲಿ 100 ಸೀಟುಗಳ ಒಳಗೇ ನಿಂತ ಬಿಜೆಪಿಯು ಒಂದು ವೇಳೆ ಆ 20 ಸೀಟುಗಳಲ್ಲಿ 10ರಲ್ಲಾದರೂ ಗೆಲುವು ಸಾಧಿಸಲು ಯಶಸ್ವಿಯಾ ಯಿತೆಂದರೆ 2019ಕ್ಕೂ ಮುನ್ನ ಅದಕ್ಕೆ ಈ ಫ‌ಲಿತಾಂಶ ಟಾನಿಕ್‌ ಆಗಿ ಪರಿಣಮಿಸಲಿದೆ. ಏಕೆಂದರೆ ಹಿಂದಿನ ಬಾರಿ ಇಡೀ ವಿಧಾನಸಭೆ ಯಲ್ಲಿ ಅದು ಗಳಿಸಿದ್ದು ಕೇವಲ 3 ಸ್ಥಾನಗಳನ್ನು ಮಾತ್ರ. ಅಂದರೆ ಒಂದೇ ಕಾರಿನಲ್ಲಿ ಬಿಜೆಪಿಯ ಶಾಸಕರು ವಿಧಾನಸಭೆಗೆ ಹೋಗಿ ಬರಬಹುದಾಗಿತ್ತು. ಒಂದು ವೇಳೆ ಬಿಜೆಪಿ 10ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆದ್ದಿತೆಂದರೆ ಆ ಗೆಲುವು 2019ಕ್ಕೆ ಮುಖ್ಯ ಭೂಮಿಕೆಯಾಗಿ ಬದಲಾಗಲಿದೆ. ಆದರೆ ಇದೇ ಮಾತನ್ನು ಕಾಂಗ್ರೆಸ್‌ನ ವಿಷಯದಲ್ಲಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ದೆಹಲಿಯಲ್ಲಿ 15 ವರ್ಷಗಳಿಂದ ಆಡಳಿತ ನಡೆಸಿರುವ ಕಾಂಗ್ರೆಸ್‌ಗೆ ಕಳೆದ ಚುನಾವಣೆಯಲ್ಲಿ ಖಾತೆ ತೆರೆಯುವುದಕ್ಕೂ ಸಾಧ್ಯವಾಗಿರ ಲಿಲ್ಲ. ಗುಜರಾತ್‌ ಚುನಾವಣೆಯ ವೇಳೆಯಲ್ಲಿ ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷರಾದದ್ದೇ ಕಾಂಗ್ರೆಸ್‌ ಪುನರುಜ್ಜೀವವಾಯಿತು ಎನ್ನುವ ವಾದ ಎಷ್ಟು ಗಟ್ಟಿಯಾಗಿದೆ ಎನ್ನುವುದನ್ನು ದೆಹಲಿಯ ಚುನಾವಣೆ ತೋರಿಸಲಿದೆ. ಒಂದು ವೇಳೆ ಕಾಂಗ್ರೆಸ್‌ ಈ 20ರಲ್ಲಿ 5 ಸೀಟುಗಳನ್ನು ಗೆದ್ದುಬಿಟ್ಟರೂ ಅದರಪಾಲಿಗೆ ದೊಡ್ಡ ವಿಷಯವೇ. 

ಆಪ್‌ಗೆ ಪಾಠ
ಆದರೆ ಈ ವಿದ್ಯಮಾನದಿಂದ ಪ್ರಮುಖವಾಗಿ ಪಾಠ ಕಲಿಯ ಬೇಕಿರುವುದು ಆಮ್‌ ಆದ್ಮಿ ಪಾರ್ಟಿ. ಅಣ್ಣಾ ಹಜಾರೆ ಆಂದೋ ಲನದಿಂದ ಹುಟ್ಟಿಕೊಂಡ ಆಮ್‌ ಆದ್ಮಿ ಪಾರ್ಟಿಯು ನಗರ ಪ್ರದೇಶಗಳ ಮತದಾರರ ನಡುವೆ ಅಚಾನಕ್ಕಾಗಿ ಲೋಕಪ್ರಿಯ ಗೊಂಡಿತು. ಏಕೆಂದರೆ ರಾಜಕೀಯ ಶುಚಿತ್ವವನ್ನು ಮರುಸ್ಥಾಪಿಸುವ ಶಕ್ತಿ ಆಪ್‌ಗೆ ಇದೆ ಎಂಬ ಭರವಸೆ ಜನರಲ್ಲಿ ಹುಟ್ಟಿಕೊಂಡಿತ್ತು. ಆ ಸಮಯ ಹೇಗಿತ್ತೆಂದರೆ, ಅರವಿಂದ್‌ ಕೇಜ್ರಿವಾಲ್‌ ಅಕ್ಷರಶಃ ವಿದ್ಯುತ್‌ ತಂತಿಯಂತೆ ಕಾಣಿಸುತ್ತಿದ್ದರು, ಅವರನ್ನು ಮುಟ್ಟಿದರೆ ಕರೆಂಟ್‌ ಹೊಡೆಯುತ್ತದೇನೋ ಎಂಬಂತಾಗಿತ್ತು. ಆದರೆ ಈ ವಿದ್ಯುತ್‌ ತಂತಿ ನಿಧನಿಧಾನಕ್ಕೆ ತಣ್ಣಗಾಗುತ್ತಾ ವ್ಯವಸ್ಥೆಯ ಅಂಗವಾಗಿಬಿಟ್ಟಿತು. 

ಮೂರರ ಶಕ್ತಿ
ಆಮ್‌ ಆದ್ಮಿ ಪಾರ್ಟಿಯಲ್ಲಿ ಮೂರು ರೀತಿಯ ಜನರು ಸೇರಿಕೊಂಡಿದ್ದರು. ಒಂದು ವರ್ಗ ಲೋಕಪಾಲ್‌ ಆಂದೋಲನ ದಿಂದ ಹುಟ್ಟಿಕೊಂಡಿತ್ತು. ಸಮಾಜದಲ್ಲಿನ ಕೆಟ್ಟದ್ದನ್ನು ದೂರ ಮಾಡಲು ಬಯಸಿದ್ದ ಯುವಜನರು ಈ ವರ್ಗದಲ್ಲಿದ್ದರು. ಆದರೆ ಈ ಕೆಲಸ ಹೇಗೆ ಮಾಡಬೇಕೆಂದು ಅವರಿಗೆ ಗೊತ್ತಿರಲಿಲ್ಲ. ಇನ್ನು ಎರಡನೇ ವರ್ಗದಲ್ಲಿರುವವರು ಆಮ್‌ ಆದ್ಮಿ ಪಕ್ಷದ ಜನಪ್ರಿಯ ತೆಯನ್ನು ನೋಡಿ ಇತರೆ ದಳಗಳಿಂದ ಬಂದವರು.

ಆದರೆ ಆಪ್‌ನಲ್ಲಿದ್ದ ಮೂರನೇ ವರ್ಗವಿದೆಯಲ್ಲ, ಅದು ನಿಜಕ್ಕೂ ಪಕ್ಷಕ್ಕೆ ಒಂದು ರಚನಾತ್ಮಕ ವ್ಯಕ್ತಿತ್ವವನ್ನು ಕೊಟ್ಟಿತ್ತು. ಇದೊಂದು ಅತೃಪ್ತ ಸಮಾಜವಾದಿಗಳ ಗುಂಪಾಗಿತ್ತು.  ದೇಶದಲ್ಲಿ ಪರ್ಯಾಯ ಸಮಾಜೋರಾಜಕೀಯ ಆಂದೋಲನದ ಅಭಾವ ವನ್ನು ನೋಡಿ ಈ ಗುಂಪು ಬೇಸರಗೊಂಡಿತ್ತು. ಈ ಮೂರನೇ ವರ್ಗ ಆಪ್‌ ಪಕ್ಷದಲ್ಲಿ ಬಹಳ ಭರವಸೆಯಿಟ್ಟುಕೊಂಡಿತ್ತು. ಈ ವರ್ಗದಲ್ಲಿ ಯೋಗೇಂದ್ರ ಯಾದವ್‌, ಪ್ರಶಾಂತ್‌ ಭೂಷಣ್‌, ಆನಂದ ಕುಮಾರ್‌ ಸೇರಿದಂತೆ, ದೆಹಲಿ ಹಾಗೂ ದೇಶಾದ್ಯಂತ ಅನೇಕಾನೇಕ ಸಾಮಾಜಿಕ ಕಾರ್ಯಕರ್ತರು ಮತ್ತು ಬುದ್ಧಿಜೀವಿ ಗಳಿದ್ದರು. ಇವರೆಲ್ಲ ಕೇಜ್ರಿವಾಲರ ಜಾದೂ ಮತ್ತು ಆಮ್‌ ಆದ್ಮಿ ಪಾರ್ಟಿಯ ಶಕ್ತಿಯನ್ನು ಬದಲಾವಣೆಯ ವಾಹನವನ್ನಾಗಿ ಬಳಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಈ ಮೂರೂ ವರ್ಗಗಳ ಸಮನ್ವಯದಿಂದಾಗಿ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಎಂಥ ವಿರಾಟ ಶಕ್ತಿಯಾಗಿ ಬದಲಾಯಿತೆಂದರೆ, ದೇಶಾದ್ಯಂತ ಆ ಪಕ್ಷದ ಬಗ್ಗೆ ನಂಬಿಕೆ-ನಿರೀಕ್ಷೆಗಳು ಹುಟ್ಟಿಕೊಂಡುಬಿಟ್ಟವು. 2013 ರಲ್ಲಿ ಇದೇ ಶಕ್ತಿಯ ಆಧಾರದ ಮೇಲೆ ಅರವಿಂದ್‌ ಕೇಜ್ರಿವಾಲ್‌ ಅವರು ಶೀಲಾ ದೀಕ್ಷಿತ್‌ರಂಥ ದಿಗ್ಗಜ ಎದುರಾಳಿಗೆ ಮಣ್ಣು ಮುಕ್ಕಿಸಿದ್ದರು. 2015ರಲ್ಲಿ ಇಡೀ ದೆಹಲಿ ಆಮ್‌ ಆದ್ಮಿಯ ಹಿಡಿತಕ್ಕೆ ಸಿಲುಕಿಬಿಟ್ಟಿತು. ಆಗ ಪಕ್ಷಕ್ಕೆ ಕೇವಲ ತನ್ನ ಕಾರ್ಯಕರ್ತರಿಂದ ಮತ್ತು ಅದ್ಭುತ ಜನಬೆಂಬಲದಿಂದ ಗೆಲುವು ದಕ್ಕಿತ್ತು. 

Advertisement

ಕ್ರಾಂತಿಯಲ್ಲ, ಅಶಾಂತಿ
ಕ್ರಾಂತಿಯೆನ್ನುವುದು ತನ್ನ ಕುಡಿಗಳನ್ನೇ ಮೊದಲು ನುಂಗಿಹಾಕು ತ್ತದೆ. ಅಧಿಕಾರ ಎಲ್ಲರನ್ನೂ ಬದಲಿಸುತ್ತದೆ. ಅದು ಆಮ್‌ ಆದ್ಮಿ ಪಕ್ಷವನ್ನೂ ಬದಲಿಸಿಬಿಟ್ಟಿತು. ಕೇಜ್ರಿವಾಲ್‌ರ ಪಕ್ಷದಲ್ಲಿ ಒಳಜಗಳ ಗಳು ಕಾಣಿಸಲಾರಂಭಿಸಿದವು, ಅದರಲ್ಲಿನ ಅತ್ಯಂತ ವಿಶ್ವಾಸಾರ್ಹ ನಾಯಕರಿಗೇ ಅವಮಾನ ಮಾಡಿ ಹೊರಗೆ ಕಳುಹಿಸಲಾಯಿತು. ಕೇಜ್ರಿವಾಲ್‌ ಪಕ್ಷದ ಒಳಗೇ ಸ್ಟಿಂಗ್‌ ಸಂಸ್ಕೃತಿಗೆ ಉತ್ತೇಜನ ನೀಡಿ ದರು, ಇಡೀ ದಿಲ್ಲಿಯಲ್ಲೇ ಸ್ಟಿಂಗ್‌ ಮಾಡುವ ಸಲಹೆ ನೀಡಿಬಿಟ್ಟರು. ಸರ್ಕಾರ ಜಾಹೀರಾತುಗಳು ಮೇಲೆ ಯಾವ ಪಾಟಿ ಖರ್ಚು ಮಾಡಿತೆಂದರೆ ಅದರ ಮೇಲೆ ತನಿಖೆ ಆರಂಭವಾಗಿಬಿಟ್ಟಿತು. ಅದು ಒಂದಾದನಂತರ ಒಂದರಂತೆ ಚುನಾವಣೆಯಲ್ಲಿ ಸೋಲು ಕಾಣಲಾರಂಭಿಸಿತು. ಕೆಲವು ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಮೂವರು ಸದ್ಯಸರನ್ನು ಕಳುಹಿಸುವ ವಿಷಯದಲ್ಲಿ ನಡೆದ ಅಹಿತಕರ ವಿವಾದ ಮತ್ತು ಅದರ ಕುತೂಹಲಕರ ಅಂತ್ಯವಿದೆಯಲ್ಲ, ಅವೂ ಕೂಡ ಆಮ್‌ ಆದ್ಮಿ ಪಾರ್ಟಿಯ ಬದಲಾಗುತ್ತಿರುವ ಪಾತ್ರಕ್ಕೆ ಸೂಚನೆಯಾಗಿ ಕಾಣುತ್ತಿವೆ. 

ಈಗ ಪಕ್ಷಕ್ಕೆ ಮತ್ತೂಂದು ಪೆಟ್ಟು ಬಿದ್ದಿದೆ. ನಿಸ್ಸಂಶಯವಾಗಿಯೂ ಇದು ಶವಪೆಟ್ಟಿಗೆಯನ್ನು ಹೊಕ್ಕ ಕೊನೆಯ ಮೊಳೆಯಂತೂ  ಅಲ್ಲ. ಏಕೆಂದರೆ ಈಗಲೂ ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿ ದೊಡ್ಡ ಶಕ್ತಿಯೇ. ಅದರ ಬಳಿ “ಸ್ಪಷ್ಟ’ಕ್ಕಿಂತಲೂ ಹೆಚ್ಚಿನ ಬಹುಮತವಿದೆ. ಕಾರ್ಯಕರ್ತರ ಒಂದು ಬೃಹತ್‌ ಸಮೂಹವಿದೆ. ಅದರಲ್ಲಿನ ಅನೇಕ ನಾಯಕರು ಉಳಿದ ಪಕ್ಷದ ನಾಯಕರಿಗೆ ಹೋಲಿಸಿದರೆ ಹೆಚ್ಚು ಸಚ್ಚಾರಿತ್ರರು-ಪ್ರಾಮಾಣಿಕರಾಗಿದ್ದಾರೆ. ಆದರೂ ಆಪ್‌ ಆಡಳಿತವನ್ನು ನೋಡಿದಾಗ ಆ ಪಕ್ಷ ಆಗಾಗ ನಿಯಮ ಮತ್ತು ಕಾಯಿದೆಗಳ ಔಪಚಾರಿಕತೆಯನ್ನು ಅವಹೇಳನ ಮಾಡುತ್ತಾ ಬಂದಿದೆ ಎಂದೆನಿಸದೇ ಇರದು. ಈ ವಿಷಯದಲ್ಲಿ ಉಪರಾಜ್ಯಪಾಲರೊಂದಿಗೆ ಅದರ ವಾದ-ವಿವಾದವೂ ನಡೆಯುತ್ತಲೇ ಬಂದಿದೆ. 

ಏನೇ ಇದ್ದರೂ ಮುಂದಿನ ಆರು ತಿಂಗಳಿವೆಯಲ್ಲ, ಅವು ಆಮ್‌ ಆದ್ಮಿ ಪಕ್ಷದ ಪಾಲಿಗೆ ತನ್ನ ಅಪೂರ್ಣ ಹೋರಾಟವನ್ನು ಮತ್ತೂಮ್ಮೆ ನಡೆಸುವ ಸಮಯವಾಗಲಿದೆ. ಪಕ್ಷದಲ್ಲಿ ಜಾಹೀರಾತುದಾರರ ಸಂಸ್ಕೃತಿಯನ್ನು ಬೆಳೆಸುವ ಬದಲು, ಅದು ಕಾರ್ಯಕರ್ತರು ಮತ್ತು ಜನರ ವಿಶ್ವಾಸಕ್ಕೆ ಮಹತ್ವಕೊಡಬೇಕು. ಯಾವ ಪರ್ಯಾಯ ರಾಜಕೀಯ ಮಾರ್ಗದಿಂದ ಆಪ್‌ ವಿಮುಖವಾಗಿದೆಯೋ (ಮರೆ ತಿದೆಯೋ) ಮತ್ತೂಮ್ಮೆ ಅದು ಆ ಮಾರ್ಗದಲ್ಲಿ ನಡೆಯ ಲಾ ರಂಭಿಸಬೇಕು. ಈ ಕ್ರಮದಲ್ಲಿ ಅದು ತನ್ನ ಹಳೆಯ ದೋಸ್ತರನ್ನು (ದೂರವಾದ) ಒಂದೆಡೆ ಸೇರಿಸುವ ಕೆಲಸವನ್ನೂ ಮಾಡಬಹುದು. ಈಗ ಹೊಸ ಹೊರಾಟಕ್ಕೆ ಆಪ್‌ನ ಸಮಯ ಶುರುವಾಗಿದೆ. 

(ಮೂಲ: ಎನ್‌ಡಿಟಿವಿ ಹಿಂದಿ)
ಪ್ರಿಯದರ್ಶನ್‌

Advertisement

Udayavani is now on Telegram. Click here to join our channel and stay updated with the latest news.

Next