ಹೊಸದಿಲ್ಲಿ : ದಿಲ್ಲಿಯ ರಾಜೋರಿ ಗಾರ್ಡನ್ ಕ್ಷೇತ್ರದ ಆಪ್ ಶಾಸಕತ್ವವನ್ನು ಬಿಟ್ಟುಕೊಟ್ಟು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಪ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಪ್ ಸದಸ್ಯ ಜರ್ನೇಲ್ ಸಿಂಗ್ ಅವರು “ಆಮ್ ಆದ್ಮಿ ಪಕ್ಷವು ರಾಜೋರಿ ಗಾರ್ಡನ್ ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಆಳವಾದ ಪ್ರಾಮಾಣಿಕ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.
“ಸೋಲು-ಗೆಲವು ಚುನಾವಣಾ ರಾಜಕೀಯದ ಭಾಗ. ಚುನಾವಣೆಗಳಲ್ಲಿ ಪಕ್ಷವು ಸಂಘಟಿತ ಹೋರಾಟ ನಡೆಸುತ್ತದೆ. ಆದುದರಿಂದ ಚುನಾವಣೆಯಲ್ಲಿನ ಸೋಲು ಗೆಲವಿಗೆ ಸಮಷ್ಟೀ ಹೊಣೆಗಾರಿಕೆ ಇರುತ್ತದೆ. ಅಂತಿರುವಾಗ ಈಗ ಸೋಲಿನ ಬಳಿಕ ಆಪ್ ಆಳವಾದ ಪ್ರಾಮಾಣಿಕ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು “ಶಿರೋಮಣಿ ಆಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಅವರ ವಿರುದ್ಧ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಹೋರಾಡಲು ಜರ್ನೇಲ್ ಸಿಂಗ್ ವರು ತಮ್ಮ ರಾಜೋರಿ ಕ್ಷೇತ್ರವನ್ನು ಬಿಟ್ಟು ತೆರಳಿದ್ದುದು ಇಲ್ಲಿನ ಜನರಿಗೆ ನಿರಾಶೆ ಉಂಟಾಗಿತ್ತು’ ಎಂಬ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಜರ್ನೇಲ್ ಸಿಂಗ್ ಅವರಿಂದ ಆತ್ಮವಿಮರ್ಶೆಯ ಹೇಳಿಕೆ ಬಂದಿದೆ.
ರಾಜೋರಿ ಉಪ ಚುನಾವಣೆಯಲ್ಲಿ ಬಿಜೆಪಿ-ಅಕಾಲಿ ದಳದ ಅಭ್ಯರ್ಥಿ ಮಂಜೀದರ್ ಸಿಂಗ್ ಶೀರ್ಷಾ ಅವರು ತಮ್ಮ ಸಮೀಪದ ಕಾಂಗ್ರೆಸ್ ಎದುರಾಳಿ ಮೀನಾಕ್ಷಿ ಚಂಡೇಲಾ ಅವರನ್ನು 14,500 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ. ದೂರದ ಮೂರನೇ ಸ್ಥಾನದಲ್ಲಿ ಆಪ್ ಅಭ್ಯರ್ಥಿ ಹರ್‌ಜೀತ್ ಸಿಂಗ್ ಸ್ಥಿತರಾಗಿ ನಿರಾಶೆ ಮೂಡಿಸಿದ್ದಾರೆ.