ನವದೆಹಲಿ : ದೆಹಲಿ ಸರಕಾರದಲ್ಲಿ ಸಚಿವರಾಗಿದ್ದ ರಾಜೇಂದ್ರ ಪಾಲ್ ಗೌತಮ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಇತ್ತೀಚೆಗೆ ಸಾಮೂಹಿಕ ಮತಾಂತರದ ವೇಳೆ ಹಿಂದೂ ದೇವತೆಗಳ ಕುರಿತಾಗಿನ ಹೇಳಿಕೆಯೊಂದಿಗೆ ಸುದ್ದಿಯಾಗಿದ್ದರು.
ಇದನ್ನೂ ಓದಿ : ಮುಲಾಯಂ ಸಿಂಗ್ ಯಾದವ್ ಸ್ಥಿತಿ ಗಂಭೀರ; ಮುಂದುವರಿದ ಚಿಕಿತ್ಸೆ
ಇಂದು ಮಹರ್ಷಿ ವಾಲ್ಮೀಕಿ ಅವರ ದ್ಯೋತಕ ದಿನವಾಗಿದ್ದು, ಮತ್ತೊಂದೆಡೆ ಮಾನ್ಯವರ್ ಕಾನ್ಶಿ ರಾಮ್ ಸಾಹೇಬ್ ಅವರ ಪುಣ್ಯತಿಥಿ. ಕಾಕತಾಳೀಯವಾಗಿ, ಇಂದು ನಾನು ಅನೇಕ ಸಂಕೋಲೆಗಳಿಂದ ಬಿಡುಗಡೆ ಹೊಂದಿದ್ದೇನೆ ಮತ್ತು ಇಂದು ನಾನು ಮತ್ತೆ ಹುಟ್ಟಿದ್ದೇನೆ. ಈಗ ನಾನು ಸಮಾಜದ ಮೇಲಿನ ಹಕ್ಕುಗಳು ಮತ್ತು ದೌರ್ಜನ್ಯಗಳ ಹೋರಾಟವನ್ನು ಯಾವುದೇ ನಿರ್ಬಂಧವಿಲ್ಲದೆ ಹೆಚ್ಚು ದೃಢವಾಗಿ ಮುಂದುವರಿಸುತ್ತೇನೆ ಎಂದು ರಾಜೇಂದ್ರ ಪಾಲ್ ಗೌತಮ್ ಟ್ವೀಟ್ ಮಾಡಿದ್ದಾರೆ.
ಸಾಮೂಹಿಕ ಬೌದ್ಧ ಧರ್ಮ ಮತಾಂತರ ಕಾರ್ಯಕ್ರಮದಲ್ಲಿ ರಾಜೇಂದ್ರ ಪಾಲ್ ಗೌತಮ್ ಭಾಗವಹಿಸಿ ಸಾವಿರಾರು ಮಂದಿಯೊಂದಿಗೆ ”ತಾವು ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜಿಸುವುದಿಲ್ಲ” ಎಂದು ಪ್ರತಿಜ್ಞೆ ಸ್ವೀಕರಿಸಿದ್ದು,ಈ ವಿಚಾರದ ಕುರಿತು ಬಿಜೆಪಿ ವ್ಯಾಪಕ ಆಕ್ರೋಶ ಹೊರ ಹಾಕಿ ರಾಜೀನಾಮೆ ಪಡೆಯುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಒತ್ತಡ ಹಾಕಿತ್ತು.
ದೇಶದ ಹಲವಾರು ಕೋಟಿ ಜನರಿಂದ ಪುನರಾವರ್ತನೆಯಾಗುವ ಪ್ರಮಾಣ ವಚನಗಳಿಂದ ಇಂತಹ ಸಮಸ್ಯೆಯನ್ನು ಸೃಷ್ಟಿಸಲಾಗಿದೆ. ಬಿಜೆಪಿಯವರು ಅದನ್ನೇ ವಿಷಯವನ್ನಾಗಿಸಿಕೊಂಡಿದ್ದಾರೆ, ನನ್ನನ್ನು ಮತ್ತು ನನ್ನ ಪಕ್ಷವನ್ನು ಅವಮಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜೇಂದ್ರ ಪಾಲ್ ಗೌತಮ್ ಆಕ್ರೋಶ ಹೊರ ಹಾಕಿದ್ದಾರೆ.