ತೆಕ್ಕಟ್ಟೆ : ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿ ಹಾಗೂ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗ ವಿಶೇಷ ಪೂಜೆಯೊಂದಿಗೆ ಆ.31ರಂದು ಸಂಭ್ರಮದಿಂದ ಜರುಗಿತು .
ಶ್ರೀ ದೇವಳ ಸಂಪೂರ್ಣ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು ಈ ಸಂದರ್ಭದಲ್ಲಿ ನಂಬಿದ ಸಹಸ್ರಾರು ಭಕ್ತರು ಶ್ರೀ ಸನ್ನಿಧಿಯಲ್ಲಿ ನೆರೆದಿದ್ದರು.
ಹರಿದು ಬಂದ ಭಕ್ತ ಸಮೂಹ: ಕೂಡಾ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿಯಂದು ಸಹಸ್ರಾರು ಭಕ್ತರು ಮುಂಜಾನೆಯಿಂದ ಶ್ರೀ ದೇವರ ದರ್ಶನ ಪಡೆದು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು
ಈ ಬಾರಿ ಸಂಭ್ರಮದ ಶ್ರೀ ವಿನಾಯಕ ಚತುರ್ಥಿಗೆ ರಾಜ್ಯ ಮೂಲೆ ಮೂಲೆಗಳಿಂದಲೂ ಸುಮಾರು 60 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಶ್ರೀಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆಯುವ ಸಾಧ್ಯತೆಗಳಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸುವ ಸಾಧ್ಯತೆಗಳಿರುವುದರಿಂದ ಸುವ್ಯವಸ್ಥಿತವಾಗಿ ನಿರ್ವಹಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಕೊಳ್ಳಲಾಗಿದೆ. 500 ತೆಂಗಿನಕಾಯಿ , 5ಕ್ವಿಂಟಾಲ್ ಸಕ್ಕರೆ, ಎಳ್ಳು ಸೇರಿದಂತೆ ಪಂಚ ದ್ರವ್ಯಗಳನ್ನು ಒಳಗೊಂಡಿರುವ ಸುಮಾರು 12ಸಾವಿರಕ್ಕೂ ಅಧಿಕ ಪಂಚಕಜ್ಜಾಯಗಳು ಸಿದ್ಧವಾಗಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಉದಯವಾಣಿಗೆ ತಿಳಿಸಿದ್ದಾರೆ.
ಪ್ರಾತಃ ಕಾಲದಿಂದ ಸಂಜೆಯವರೆಗೆ ಭಕ್ತರಿಗೆ ಪ್ರಸಾದ ವಿತರಣೆ : ಓರ್ವ ಭಕ್ತರಿಂದ ದೇವರ ಪ್ರಾತಃ ಕಾಲದ ಪೂಜೆಯಿಂದ ಸಾಯಂ ಪೂಜೆಯ ವರೆಗೆ ವಿವಿಧ ರೀತಿಯ ಇಷ್ಟ ಪ್ರಸಾದಗಳನ್ನು ಭಕ್ತರಿಗೆ ವಿತರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ , ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಅರ್ಚಕ ದೇವಿದಾಸ ಉಪಾಧ್ಯಾಯ ಹಾಗೂ ಸಹೋದರರು, ಅರ್ಚಕ ಮಂಡಳಿ ಸದಸ್ಯರು, ದೇಗುಲದ ಮ್ಯಾನೇಜರ್ ನಟೇಶ್ ಕಾರಂತ್ ತೆಕ್ಕಟ್ಟೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
-ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ