Advertisement

ಹೊಟೇಲಿಗರ ಪ್ರತಿಷ್ಠಿತ ಸಂಸ್ಥೆ ಆಹಾರ್‌ನ 6ನೇ ಮಾಸಿಕ ಸಭೆ

02:49 PM Jul 05, 2018 | Team Udayavani |

ಮುಂಬಯಿ: ರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧ ಜಾರಿಯಿಂದಾಗಿ ಆಹಾರ್‌ ನಿಯೋಗವು ಪರಿಸನ ಸಚಿವರು, ಪರಿಸರ ವಿಭಾಗದ  ಮುಖ್ಯ ಕಾರ್ಯದರ್ಶಿಗಳು ಹಾಗೂ ಮಹಾನಗರ ಪಾಲಿಕೆಯ ಉಪಾಯುಕ್ತರನ್ನು ಭೇಟಿಯಾಗಿ ಮರು ಬಳಕೆಯ ಕಂಟೇನರ್‌ಗಳನ್ನು ಉಪಯೋಗಿಸಲು ಕಾನೂನಿನಲ್ಲಿ ಅನುಮಮತಿಯಿದ್ದು, ಅದಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. ಎಲ್ಲಾ ಸೂತ್ರಗಳು ಮರು ಬಳಕೆಯ ಕಂಟೇನರ್‌ಗಳನ್ನು ಪಾರ್ಸೆಲ್‌ಗಾಗಿ ಉಪಯೋಗಿಸಬಹುದು ಎಂದು ತಿಳಿಸಿದ್ದಾರೆ. ಆದ್ದರಿಂದ  ಆಹಾರ್‌ ವಿವಿಧ ಉತ್ಪಾದಕರನ್ನು ಸಂಪರ್ಕಿಸಿ ಬದಲಿ ಕಂಟೇನರ್‌ಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಆಹಾರ್‌ನ ಅಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ ಇವರು ನುಡಿದರು.

Advertisement

ಜೂ. 22 ರಂದು ನಾನಾಚೌಕ್‌ನಲ್ಲಿರುವ ಶ್ರೀ ಕೃಷ್ಣ ಪ್ಯಾಲೇಸ್‌ ರೆಸಿಡೆನ್ಸಿಯಲ್ಲಿ ಜರಗಿದ ಆಹಾರ್‌ನ 6 ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲದಲ್ಲಿ ಹೊಟೇಲಿಗರಿಗೆ ಪ್ರತಿ ವರ್ಷ ಮಾನ್ಸೂನ್‌ ಶೆಡ್‌ಗೆ ಮುಂಬಯಿ ಮಹಾನಗರ ಪಾಲಿಕೆ ಅನುಮತಿಯನ್ನು ನೀಡುತ್ತಿತ್ತು. ಪ್ರಸ್ತುತ ವರ್ಷ ಕೆಲವು ವಾರ್ಡ್‌ಗಳಲ್ಲಿ ಅದಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಹಾಕಿದ ಮಾನ್ಸೂನ್‌ ಶೇಡ್‌ಗಳನ್ನು 48 ತಾಸುಗಳಲ್ಲಿ ತೆರವುಗೊಳಿಸಬೇಕು ಎಂದು ಮಹಾನಗರ ಪಾಲಿಕೆಯು ಆದೇಶವನ್ನು ನೀಡಿದೆ. ಈ ಆದೇಶದ ವಿರುದ್ಧ ಆಹಾರ್‌ ಮುಂಬಯಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ಹೈಕೋರ್ಟ್‌ ಪರವಾನಿಗೆ ಇಲ್ಲದೆ ಮಾನ್ಸೂನ್‌ ಶೆಡ್‌ಗಳನ್ನು ಹಾಕುವುದು ತಪ್ಪು. ಹಾಗಾಗಿ ಅದನ್ನು ತೆರವುಗೊಳಿಸಿ ನೂತನ ಶೆಡ್‌ಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಮಹಾನಗರ ಪಾಲಿಕೆ ಒಂದು ವಾರದೊಳಗೆ ಅವರಿಗೆ ಅನುಮತಿಯನ್ನು ನೀಡಬೇಕು. ಅನುಮತಿಯನ್ನು ನಿರಾಕರಿಸಿದರೆ ಅದಕ್ಕೆ ಕಾರಣವನ್ನು ನೀಡಬೇಕು. ಅನುಮತಿ ನಿರಾಕರಿಸಿದ್ದಲ್ಲಿ ಹೊಟೇಲಿಗರು ನ್ಯಾಯಾಲಯದ ಮೊರೆ ಹೋಗಬಹುದೆಂಬ ಅದೇಶವನ್ನು ನೀಡಿದೆ. ಆಹಾರ್‌ ನಿಯೋಗ ಮಹಾನಗರ ಪಾಲಿಕೆಯ ಆಯುಕ್ತ ಹಾಗೂ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ವಿಷಯದಲ್ಲಿ ಚರ್ಚಿಸಿದೆ. ಬಿಎಂಸಿ ವಿನಂತಿಯಂತೆ ಸೈನ್‌ಬೋರ್ಡ್‌ನ್ನು ಜಾಹೀರಾತೆಂದು ಪರಿಗಣಿಸಿ ಅದಕ್ಕೆ ಪರವಾನಿಗೆ ಬೇಕು ಎಂಬ ನಿಯಮದ ವಿರುದ್ಧ ಆಹಾರ್‌ ತನ್ನ ಅನಿಸಿಕೆ, ಸಲಹೆಯನ್ನು ಸಲ್ಲಿಸಿದೆ. ಮಹಾನಗರ  ಪಾಲಿಕೆಯ ನಗರ ವ್ಯಾಪಾರಿಗಳ ಸಮಿತಿಯಲ್ಲಿ ಆಹಾರ್‌ಗೆ ಖಾಯಂ ಸದಸ್ಯತ್ವವನ್ನು ನೀಡಿದೆ. ಈ ಸಮಿತಿಯ ಮೊದಲ ಸಭೆಯಲ್ಲಿ ಆಹಾರ್‌ ಪಾಲ್ಗೊಂಡಿದೆ. ಮುಂಬಯಿ ಮಹಾನಗರ ಪಾಲಿಕೆಯ ಅಗ್ನಿ ಸುರಕ್ಷತೆ ನಿಯಮದಲ್ಲಿ ಬಹಳಷ್ಟು ನಿಯಮಗಳು ಹೊಟೇಲಿಗರಿಗೆ ಪಾಲಿಸಲು ಅಸಾಧ್ಯವಾಗಿದೆ. ಹೊಸ ನಿಯಮಗಳು ಹಳೆಯ ಹೊಟೇಲಿಗರಿಗೆ ಅನ್ವಯಿಸುವ ವಿರುದ್ಧ ನಮ್ಮ ಸಲಹೆಗಳನ್ನು ಶೀಘ್ರದಲ್ಲಿ ಅಗ್ನಿ ಸುರಕ್ಷಾ ದಳಕ್ಕೆ ಸಲ್ಲಿಸುವ ಬಗ್ಗೆ ಚರ್ಚಿಸಲಿದ್ದೇವೆ. ಆಹಾರ್‌ ಸುರಕ್ಷಾ ವಿಭಾಗದ ಆಯುಕ್ತರು ಕರೆದ ಸಭೆಯಲ್ಲಿ ಭಾಗವಹಿಸಿ, ಇದು ಮುಂಬಯಿಯಲ್ಲಿ ಅಸಾಧ್ಯವೆಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಜೊಮೆಟೋ, ಸ್ವಿಗ್ಗೀ, ಉಬರ್‌ನಂತಹ ವಿತರಣಾ ಸಂಸ್ಥೆಗಳು ಅತೀ ಹೆಚ್ಚು ಕಾರ್ಮಿಕರನ್ನು ತೆಗೆದುಕೊಳ್ಳುತ್ತಿವೆ. ಅಲ್ಲದೆ ಕಾನೂನು ಬಾಹಿರವಾಗಿ ವ್ಯಾಪಾರ ಮಾಡುತ್ತಿರುವ ಗ್ರೇ ಕಿಚನ್‌ಗಳಿಗೆ ಪ್ರೋತ್ಸಾಹಿಸುತ್ತಿವೆ. ಇದರಿಂದ ನಮ್ಮ ವ್ಯವಹಾರಕ್ಕೆ ನಷ್ಟ ಉಂಟಾಗುತ್ತಿದೆ. ಇದರ ವಿರುದ್ಧ ನಾವು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಉಪ ಸಮಿತಿಯ ನಿರಂಜನ್‌ ಶೆಟ್ಟಿ, ಅರವಿಂದ್‌ ಶೆಟ್ಟಿ ಹಾಗೂ ಮಹೇಶ್‌ ಶೆಟ್ಟಿ ಅವರು ತಮ್ಮ ತಮ್ಮ ಉಪಸಮಿತಿಗಳ ಕಾರ್ಯಸಾಧನೆಯ ಬಗ್ಗೆ ವಿವರಿಸಿದರು. ಸಲಹೆಗಾರರಾದ ನಾರಾಯಣ ಆಳ್ವ, ಅರವಿಂದ ಶೆಟ್ಟಿ, ಎ. ಬಿ. ಶೆಟ್ಟಿ ಅವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಪ್ರದರ್ಶನ ಮಳಿಗೆಯಲ್ಲಿ ಪಾಲ್ಗೊಂಡ 14 ವ್ಯಾಪಾರಿಗಳನ್ನು ಪರಿಚಯಿಸಿ, ಅವರ ಮಳಿಗೆಯ ಬಗ್ಗೆ ವಿವರಣೆ ನೀಡಿ, ಅಧ್ಯಕ್ಷರ ಹಸ್ತದಿಂದ ಅವರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು.

ಗೌರವ ಪ್ರಧಾನ ಕಾರ್ಯದರ್ಶಿ ಪ್ರಶಂಸಾ ಪತ್ರಗಳನ್ನು ವಾಚಿಸಿದರು. ಇತ್ತೀಚೆಗೆ ನಿಧನರಾದ ಹೊಟೇಲಿಗರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿಯು. ಸಭೆಯ ಪ್ರಾಯೋಜಕ ಹಾಗೂ ವಲಯ ಮೂರರ ಉಪಾಧ್ಯಕ್ಷ ವಿಜಯ ಶೆಟ್ಟಿ ಇವರನ್ನು ವಲಯದ ಸದಸ್ಯರು ಗೌರವಿಸಿದರು. ವಿಜಯ ಕೆ. ಶೆಟ್ಟಿ ಇವರು ಸ್ವಾಗತಿಸಿದರು. ಸಂಸ್ಥೆಯ ಪದಾಧಿಕಾರಿಗಳು, ವಿವಿಧ ವಲಯಗಳ ಉಪಾ ಧ್ಯಕ್ಷರು, ಇತರ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next