ಮುಂಬೈ: ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಮೊಮ್ಮಗ, ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ (29ವರ್ಷ) ಚುನಾವಣಾ ಅಖಾಡಕ್ಕಿಳಿಯಲಿರುವ ಠಾಕ್ರೆ ಕುಟುಂಬದ ಮೊದಲ ವ್ಯಕ್ತಿಯಾಗಿದ್ದಾರೆ. ಏತನ್ಮಧ್ಯೆ ಶಿವಸೇನಾ ಯುವ ಘಟಕದ ಅಧ್ಯಕ್ಷ ಆದಿತ್ಯ ಠಾಕ್ರೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ 16 ಕೋಟಿ ರೂಪಾಯಿ ಒಡೆಯ ಎಂಬುದಾಗಿ ನಮೂದಿಸಿರುವುದಾಗಿ ವರದಿ ತಿಳಿಸಿದೆ.
ಆದಿತ್ಯ ಠಾಕ್ರೆಯ ಸ್ಥಿರಾಸ್ತಿ ಒಟ್ಟು ಮೌಲ್ಯ 11.38 ಕೋಟಿ ರೂಪಾಯಿ ಹಾಗೂ ಚರಾಸ್ಥಿಯ ಒಟ್ಟು ಮೌಲ್ಯ 4.67 ಕೋಟಿ ರೂಪಾಯಿ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಆದಿತ್ಯ 6.5 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಹೊಂದಿದ್ದು, ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಆದಿತ್ಯ ಆಸ್ತಿ ವಿವರ ಬಹಿರಂಗಪಡಿಸಲಾಗಿದೆ.
ಶಿವಸೇನಾದ ಪ್ರಾಬಲ್ಯ ಹೊಂದಿರುವ ವರ್ಲಿಯಲ್ಲಿ ಆದಿತ್ಯ ಠಾಕ್ರೆ ಕಣಕ್ಕಿಳಿಯಲಿದ್ದು, ಒಂದು ವೇಳೆ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರೆ ಆದಿತ್ಯ ಠಾಕ್ರೆಗೆ ಉಪಮುಖ್ಯಮಂತ್ರಿ ಹುದ್ದೆ ಸಾಧ್ಯತೆ ಇದ್ದಿರುವುದಾಗಿ ಊಹಾಪೋಹ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.