Advertisement

ಆಧಾರ್‌ ನೋಂದಣಿಗೆ ಸಾರ್ವಜನಿಕರ ಪರದಾಟ

09:27 PM Jun 02, 2019 | Lakshmi GovindaRaj |

ಜಾವಗಲ್‌: ಹೋಬಳಿಯಲ್ಲಿ ಆಧಾರ್‌ ನೋಂದಣಿ ಸೌಲಭ್ಯವಿಲ್ಲದೇ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ಪರದಾಡುತ್ತಿದ್ದಾರೆ.  ಜಾವಗಲ್‌ ಹೋಬಳಿ ಕೇಂದ್ರದ ನಾಡಕಚೇರಿಯಲ್ಲಿ ಈ ಹಿಂದೆ ಆಧಾರ್‌ ನೋಂದಣಿ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಹೋಬಳಿಯ 80 ಕ್ಕೂ ಹೆಚ್ಚು ಗ್ರಾಮಗಳ ಹಾಗೂ ಜಾವಗಲ್‌ಗೆ ಹೊಂದಿಕೊಂಡಿರುವ ಸುತ್ತಮುತ್ತಲ 3 – 4 ಹೋಬಳಿಗಳ ಗ್ರಾಮಗಳ ಗ್ರಾಮಸ್ಥರು ನಾಡಕಚೇರಿಯಲ್ಲಿ ಆಧಾರ್‌ ನೋಂದಣಿ ಮಾಡಿಸಿಕೊಳ್ಳುತ್ತಿದ್ದರು.

Advertisement

ಇದರಿಂದ ಸಾರ್ವಜನಿಕರಿಗೆ ಸಮಯ ಹಾಗೂ ಹಣದ ಉಳಿತಾಯವಾಗುತ್ತಿತ್ತು. ನಾಡಕಚೇರಿಯೊಂದಿಗೆ ಹೋಬಳಿ ಕೇಂದ್ರದಲ್ಲಿರುವ ಖಾಸಗಿ ಸೆ„ಬರ್‌ ಸೆಂಟರ್‌ಗಳಲ್ಲೂ ಆಧಾರ್‌ ನೋಂದಣಿ, ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಮತ್ತಿತರ ಅಂಶಗಳಿಗೆ ಸಂಬಂಧಿಸಿದಂತೆ ಲೋಪದೋಷ‌ಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತಿತ್ತು.

ನೋಂದಣಿ ಸೌಲಭ್ಯ ಸ್ಥಗಿತ: ನಾಡಕಚೇರಿ ಹಾಗೂ ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳನ್ನು ಹೊರತುಪಡಿಸಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿನ ತಾಲೂಕು ಕಚೇರಿ, ಅಂಚೆಕಚೇರಿ ಹಾಗೂ ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ನಲ್ಲಿ ಗ್ರಾಮೀಣ ಭಾಗದ ಜನತೆ ಸಣ್ಣ ಪುಟ್ಟ ತಿದ್ದುಪಡಿ ಮಾಡಿಸಲು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದ್ದು ಗ್ರಾಮೀಣ ಜನತೆ ತುಂಬಾ ತೊಂದರೆ ಅನುಭವಿಸುವಂತಾಗಿದೆ.

ಗ್ರಾಪಂ ಕಚೇರಿಯಲ್ಲಿ ಸರ್ವರ್‌ ಸಮಸ್ಯೆ: ಕಳೆದ 5-6 ತಿಂಗಳುಗಳ ಹಿಂದೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿಯೂ ಹೊಸದಾಗಿ ಆಧಾರ್‌ ನೋಂದಣಿ ಮಾಡಿಸುವುದು, ತಿದ್ದುಪಡಿ ಮಾಡಿಸುವುದಕ್ಕೆ ಅವಕಾಶ ಕಲ್ಪಿಸಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ಆಶಾಭಾವನೆ ವ್ಯಕ್ತವಾಗಿತ್ತು. ಪ್ರಾರಂಭವಾದ 3-4 ದಿನ ಮಾತ್ರ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಆಧಾರ್‌ ನೋಂದಣಿ ನಡೆಯಿತು. ನಂತರ ದಿನಗಳಲ್ಲಿ ಸರ್ವರ್‌ ತೊಂದರೆ ಯಿಂದ ಸಂಪೂರ್ಣವಾಗಿ ಆಧಾರ್‌ ನೋಂದಣಿ ಕೆಲಸ ಸ್ಥಗಿತಗೊಂಡಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.

ಅಂಚೆ ಕಚೇರಿಯಲ್ಲೂ ನೋಂದಣಿ ಸ್ಥಗಿತ: ಹೋಬಳಿ ಕೇಂದ್ರದ ಉಪ ಅಂಚೆ ಕಚೇರಿಗಳಲ್ಲೂ ಆಧಾರ್‌ ನೋಂದಣಿಗೆ ಸಂಬಂಧಿಸಿದ ಕೆಲಸ ಮಾಡಿಸಿಕೊಳ್ಳಲು ಅನುಮತಿ ನೀಡಿದ್ದರೂ, ಉಪ ಅಂಚೆ ಕಚೇರಿಗಳಿಗೆ ಆಧಾರ್‌ ನೋಂದಣಿ ಮಾಡಿಸಲು ಸಂಬಂಧಿಸಿದ ಒಬ್ಬ ಸಿಬ್ಬಂದಿ, ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲಾಗಿತ್ತು. 2-3 ತಿಂಗಳು ಜಾವಗಲ್‌ ಉಪ ಅಂಚೆ ಕಚೇರಿಯಲ್ಲಿ ಆಧಾರ್‌ ನೋಂದಣಿ ಮಾಡಿಸುವ ಕಾರ್ಯ ಸರಾಗವಾಗಿ ನಡೆಯಿತು. ನಂತರ ತರಬೇತಿ ಹೊಂದಿದ್ದ ಅಂಚೆ ಸಿಬ್ಬಂದಿಯನ್ನು ಬೇರೆ ಕಡೆಗಳಿಗೆ ವರ್ಗಾವಣೆ ಮಾಡಲಾಯಿತು. ನಂತರ ಹೊಸದಾಗಿ ಬಂದ ಸಿಬ್ಬಂದಿಗಳಿಗೆ ತರಬೇತಿ ಇಲ್ಲದ ಕಾರಣ ಆಧಾರ್‌ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.

Advertisement

ಎಲ್ಲದಕ್ಕೂ ಆಧಾರ್‌ ಅಗತ್ಯ: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌, ಶಾಲೆ, ಅಂಚೆ ಕಚೇರಿ, ಹಾಗೂ ಸರ್ಕಾರಿ ಕಚೇರಿಗಳಲ್ಲಿ ದೈನಂದಿನ ವ್ಯವಹಾರ ನಡೆಸಲು ಆಧಾರ್‌ ನೋಂದಣಿ ಅತ್ಯವಶ್ಯಕವಾಗಿರುವುದರಿಂದ ಗ್ರಾಮೀಣ ಜನರು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೆಯುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಹೋಬಳಿ ಕೇಂದ್ರಗಳಲ್ಲಿರುವ ಉಪ ಅಂಚೆ ಕಚೇರಿಗಳಿಗೆ ಕೂಡಲೇ ಆಧಾರ್‌ ನೋಂದಣಿ ಮಾಡಲು ಅಗತ್ಯವಾದ ಎಲ್ಲಾ ಉಪಕರಣಗಳನ್ನು ವ್ಯವಸ್ಥೆ ಮಾಡಿ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡುವಂತೆ ಜಾವಗಲ್‌ ಹೋಬಳಿಯ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯ ಪಡಿಸಿದ್ದಾರೆ.

ಈ ಬಗ್ಗೆ ಜಾವಗಲ್‌ ಪಟ್ಟಣದ ಗಂಗಾಧರ್‌, ಸುರೇಶ್‌, ಬಂದೂರು ಹೊನ್ನೇಗೌಡ ಮತ್ತಿತರರನ್ನು ಸಂಪರ್ಕಿಸಿದಾಗ ಹೋಬಳಿ ಕೇಂದ್ರದಲ್ಲಿ ಆಧಾರ್‌ ನೋಂದಣಿ ಮಾಡಿಸುವ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಗ್ರಾಮೀಣ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ದೂರಿದರು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಗಮನಹರಿಸಿ ಹೋಬಳಿ ಮಟ್ಟದ ಉಪಅಂಚೆಕಚೇರಿ ಹಾಗೂ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಆಧಾರ್‌ ಕಾರ್ಡ್‌ ಪ್ರಕ್ರಿಯೆಯನ್ನು ಪುನಃ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಜಾವಗಲ್‌ ಹೋಬಳಿಯ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯ ಪಡಿಸಿದ್ದಾರೆ.

ಹೋಬಳಿ ಕೇಂದ್ರದ ಉಪ ಅಂಚೆ ಕಚೇರಿಗಳಲ್ಲಿ ಆಧಾರ್‌ ನೋಂದಣಿಯ ಕಂಪ್ಯೂಟರ್‌ ಮತ್ತಿತರ ಉಪಕರಣಗಳು ಕೆಟ್ಟುಹೋಗಿವೆ. ಇರುವ ಇಬ್ಬರು ಸಿಬ್ಬಂದಿಗಳಲ್ಲಿ ಒಬ್ಬರನ್ನು ಪದೇ ಪದೆ ಬೇರೆಡೆಗೆ ನಿಯೋಜನೆ ಮಾಡುವುದರಿಂದ ಆಧಾರ್‌ ನೋಂದಣಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದ್ದು, ಇನ್ನೊಂದು ವಾರದೊಳಗೆ ಆಧಾರ್‌ ನೋಂದಣಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ.
-ಪ್ರದೀಪ್‌, ಪೋಸ್ಟ್‌ಮಾಸ್ಟರ್‌ ಜಾವಗಲ್‌ ಉಪ ಅಂಚೆ ಕಚೇರಿ

ಆಧಾರ್‌ ತಿದ್ದುಪಡಿ ಕಾರ್ಯಕ್ಕೆ ಸಂಭಂಧಿಸಿದ ಎಲ್ಲಾ ಉಪಕರಣಗಳನ್ನು ಅಳವಡಿಸಲಾಗಿದ್ದು, ತಾಂತ್ರಿಕ ಸಮಸ್ಯೆಯಿದೆ. ಈ ಬಗ್ಗೆ ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಸರಿಪಡಿಸಿದ ನಂತರ ಆಧಾರ್‌ ನೋಂದಣಿ ಆರಂಭಿಸಲಾಗುತ್ತದೆ.
-ಮಂಜುನಾಥ ಜಾವಗಲ್‌ ಗ್ರಾಪಂ ಪಿಡಿಒ

* ರವಿಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next