ಶಿವಮೊಗ್ಗ: ಗ್ಯಾಸ್ ಸಿಲಿಂಡರ್, ಪಡಿತರ ಖರೀದಿ ಹೀಗೆ ಹಲವು ಸೌಲಭ್ಯ ಪಡೆಯಲು ಕಡ್ಡಾಯವಾಗಿದ್ದ ಆಧಾರ್ ಇನ್ಮುಂದೆ ರಸಗೊಬ್ಬರ ಖರೀದಿಗೂ ಕಡ್ಡಾಯವಾಗಿದೆ. ರಸಗೊಬ್ಬರಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ದುರ್ಬಳಕೆಯಾಗುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಾಸ್ (ಪಾಯಿಂಟ್ ಆಫ್ ಸೇಲ್) ವ್ಯವಸ್ಥೆ ಜೂನ್‌ನಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಹೀಗಾಗಿ ಇನ್ನು ಮುಂದೆ ರೈತರು ರಾಸಾಯನಿಕ ಗೊಬ್ಬರ ಖರೀದಿಸುವ ವೇಳೆ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ.
ಆಧಾರ್ ಸಂಖ್ಯೆ ನೀಡಿದಲ್ಲಿ ಮಾತ್ರ ಸಬ್ಸಿಡಿ ದರದಲ್ಲಿ ಗೊಬ್ಬರ ಸಿಗಲಿದ್ದು, ಈ ಖರೀದಿಯ ಬಳಿಕವಷ್ಟೇ ಖರೀದಿ ಮೊತ್ತದ ಮೇಲಿನ ಸಬ್ಸಿಡಿ ಉತ್ಪಾದಕ ಕಂಪನಿಗಳಿಗೆ ಸಿಗಲಿದೆ. ಇದುವರೆಗೆ ಕೇಂದ್ರ ಸರ್ಕಾರ ಗೊಬ್ಬರ ಕಂಪನಿಗಳಿಗೆ ಉತ್ಪಾದನೆ ವೇಳೆಯೇ ಸಬ್ಸಿಡಿ ಹಣವನ್ನು ನೇರವಾಗಿ ನೀಡುತ್ತಿತ್ತು. ಇದರಿಂದ ಗೊಬ್ಬರ ಕೃಷಿಗೆ ಮಾತ್ರ ಬಳಕೆಯಾಗುತ್ತಿದೆಯೇ, ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಎಂಬುದು ಗೊತ್ತಾಗುತ್ತಿರಲಿಲ್ಲ. ಯಾವುದೇ ಉದ್ದೇಶಕ್ಕೆ ಬಳಕೆಯಾದರೂ ಅದಕ್ಕೆ ಸಬ್ಸಿಡಿ ನೀಡಲಾಗುತ್ತಿದ್ದು, ಈ ದುರ್ಬಳಕೆಯನ್ನು ತಪ್ಪಿಸಿ ಕೃಷಿ ಉದ್ದೇಶಕ್ಕೆ ಬಳಕೆಯಾಗುವ ರಾಸಾಯನಿಕ ಗೊಬ್ಬರಕ್ಕೆ ಮಾತ್ರ ಸಬ್ಸಿಡಿ ನೀಡುವ ಉದ್ದೇಶದಿಂದ ಈ ಹೊಸ ಯೋಜನೆ ಜಾರಿಗೆ ತಂದಿದೆ. ಹಿಂದೆ ಕಂಪನಿಗಳು ಗೊಬ್ಬರ ಉತ್ಪಾದಿಸಿ ಮಾರಾಟಕ್ಕೆ ಬಿಡುಗಡೆ ಮಾಡಿದ ತಕ್ಷಣ ಆ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಹಣ ಬಿಡುಗಡೆ ಮಾಡುತ್ತಿತ್ತು. ಆದರೀಗ ಉತ್ಪಾದನೆಯಾದ ಗೊಬ್ಬರ ರೈತರಿಗೆ ಪೂರೈಕೆಯಾದ ಬಳಿಕವೇ ಆ ಗೊಬ್ಬರಕ್ಕೆ ಅನುಗುಣವಾಗಿ ಸಬ್ಸಿಡಿ ಹಣ ಕಂಪನಿಗೆ ಬಿಡುಗಡೆಯಾಗುತ್ತದೆ. ವಾರ್ಷಿಕವಾಗಿ ಕೇಂದ್ರ ಸರ್ಕಾರ ಈ ಸಬ್ಸಿಡಿ ಉದ್ದೇಶಕ್ಕೆ ಸುಮಾರು 70 ಸಾವಿರ ಕೋಟಿ ರೂ. ವ್ಯಯ ಮಾಡುತ್ತಿತ್ತು. ಇದರಲ್ಲಿ ಶೇ. 30ಕ್ಕಿಂತ ಅಧಿಕ ಮೊತ್ತ ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗುವ ರಾಸಾಯನಿಕ ಗೊಬ್ಬರಕ್ಕೆ ಸಬ್ಸಿಡಿ ನೀಡಿದಂತಾಗುತ್ತಿತ್ತು. ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಮಾರಾಟಗಾರರಿಗೆ ಪಾಸ್ ಯಂತ್ರ: ಪ್ರತಿ ಗೊಬ್ಬರ ಮಾರಾಟಗಾರರೂ ಪಾಸ್ ಯಂತ್ರವನ್ನು ಹೊಂದಬೇಕು. ಇದರ ಮೂಲಕವೇ ಬಿಲ್ ಸಿದ್ಧಗೊಳಿಸಬೇಕು. ಗೊಬ್ಬರ ಖರೀದಿ ವೇಳೆ ರೈತರು ತಮ್ಮ ಆಧಾರ್ ಸಂಖ್ಯೆ ಮತ್ತು ಪಹಣಿ ನೀಡಬೇಕು. ಈ ಪಾಸ್ ಯಂತ್ರದಲ್ಲಿ ಮೊದಲೇ ದರವನ್ನು ನಿಗದಿಗೊಳಿಸಿದ್ದು, ಅದರಂತೆ ಸಬ್ಸಿಡಿ ದರದಲ್ಲಿ ಬಿಲ್ ಸಿದಟಛಿಗೊಳ್ಳಲಿದೆ. ರೈತರು ಈ ಸಬ್ಸಿಡಿ ದರದ ಬಿಲ್ ಪಡೆದು ಅದರಲ್ಲಿ ನಮೂದಿಸಿಷ್ಟೇ ಹಣವನ್ನು ನೀಡಬೇಕು. ಇಲ್ಲಿ ಬಿಲ್ ಸಿದ್ಧಗೊಳ್ಳುತ್ತಿದ್ದಂತೆ ಈ ಮಾಹಿತಿ ಕೇಂದ್ರ ಕಚೇರಿಗೆ ರವಾನೆಯಾಗಿ, ಆ ಸಬ್ಸಿಡಿ ಮೊತ್ತ ಕಂಪನಿಗೆ ಬಿಡುಗಡೆಯಾಗುತ್ತದೆ. ಪ್ರತಿ ಜಿಲ್ಲೆಗೂ ಪ್ರತ್ಯೇಕ ಕಂಪನಿಗಳನ್ನು ನಿಗದಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ರೈತರು ಪಹಣಿಯಲ್ಲಿ ಇರುವಷ್ಟು ಜಮೀನಿಗೆ ಮಾತ್ರ ಗೊಬ್ಬರ ಸಿಗುತ್ತದೆ. ಬಗರ್‌ಹುಕುಂ ಜಮೀನಿಗೆ ಇನ್ನು ಮುಂದೆ ಸಬ್ಸಿಡಿ ದರದ ಗೊಬ್ಬರ ಸಿಗುವುದಿಲ್ಲ.
12 ಸಾವಿರ ಮಾರಾಟಗಾರರು ರಾಜ್ಯದಲ್ಲಿ ಸುಮಾರು 12 ಸಾವಿರ ರಸಗೊಬ್ಬರ ಮಾರಾಟಗಾರರಿದ್ದಾರೆ. ಸುಮಾರು 5 ಸಾವಿರ ಸಹಕಾರ ಸಂಸ್ಥೆಗಳು ರಸಗೊಬ್ಬರ ಮಾರಾಟದಲ್ಲಿ ತೊಡಗಿಸಿಕೊಂಡಿವೆ. ವಾರ್ಷಿಕ ಸುಮಾರು 40 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ರಾಸಾಯನಿಕ ಗೊಬ್ಬರ ಮಾರಾಟವಾಗುತ್ತದೆ.
ಜಿಲ್ಲೆಯಲ್ಲಿ ಜೂ.1 ರಿಂದ ಪ್ರಾಯೋಗಿಕವಾಗಿ ಪಾಸ್ ಯಂತ್ರದ ಮೂಲಕ ಆಧಾರ್ ಸಂಖ್ಯೆ ಆಧಾರಿತ ರಾಸಾಯನಿಕ ಗೊಬ್ಬರ ಮಾರಾಟ ಆರಂಭಗೊಳ್ಳಲಿದೆ. ಹಾಗಾಗಿ ರೈತರು ಖಾಸಗಿ ಹಾಗೂ ಸಹಕಾರ ಸಂಸ್ಥೆಗಳಲ್ಲಿ ಗೊಬ್ಬರ ಖರೀದಿಸುವ ವೇಳೆ ತಮ್ಮ ಆಧಾರ್ ಸಂಖ್ಯೆಯನ್ನು ನೀಡಿ ಮುದ್ರಿತ ಬಿಲ್‌ನಲ್ಲಿರುವಷ್ಟೇ ಹಣವನ್ನು ಪಾವತಿಸಿ ಬಿಲ್ ಪಡೆಯಬೇಕು.
– ಕೆ. ಮಧುಸೂದನ್, ಜಂಟಿ ಕೃಷಿ ನಿರ್ದೇಶಕರು, ಶಿವಮೊಗ್ಗ
– ಗೋಪಾಲ್ ಯಡಗೆರೆ