Advertisement

ಏಳು ವರ್ಷ ಹೋರಾಡಿದರೂ ಅಮ್ಮ , ಮಗನಿಗೆ ಸಿಗಲಿಲ್ಲ ಆಧಾರ್‌ ಕಾರ್ಡ್‌!

07:26 AM Nov 21, 2020 | mahesh |

ವಿಟ್ಲ: ವೀರಕಂಬ ಗ್ರಾಮ ಪಂಚಾಯತ್‌ನಲ್ಲಿ 2013ರಲ್ಲಿ ನಡೆದ ಆಧಾರ್‌ ನೋಂದಣಿ ಶಿಬಿರದಲ್ಲಿ ನೋಂದಾಯಿಸಿದ ಮಹಿಳೆ ಮತ್ತಾಕೆಯ ಮಗನಿಗೆ ಇಂದಿನ ತನಕ ಆಧಾರ್‌ ಕಾರ್ಡ್‌ ಲಭಿಸಿಲ್ಲ. ಅನಂತರ 6 ಶಿಬಿರಗಳಲ್ಲಿ ಮತ್ತೆಮತ್ತೆ ನೋಂದಾಯಿಸಿಯೂ ಪ್ರಯೋಜನವಾಗಿಲ್ಲ. ಪರಿಣಾಮವಾಗಿ ಆ ಕುಟುಂಬ ಪಡಿತರ ಚೀಟಿ ಸಹಿತ ಸರಕಾರದ ಸೌಲಭ್ಯಗಳಿಂದ ಸಂಪೂರ್ಣ ವಂಚಿತವಾಗಿದೆ.

Advertisement

ವೀರಕಂಬ ಸೀನಾಜೆಯ ನಾರಾಯಣ ಗೌಡ ಅವರ ಪತ್ನಿ ನೀತಾ ಗೌಡ ಮತ್ತು ಪುತ್ರ ದೀಕ್ಷಿತ್‌ ಸಂತ್ರಸ್ತರು. ದೀಕ್ಷಿತ್‌ ಅವರ ಕಾರ್ಡ್‌ ಏನೋ ಬಂದಿತು; ಆದರೆ ಉಪಯೋಗಿಸುವಂತಿಲ್ಲ. ಯಾಕೆಂದರೆ ಬೆರಳಚ್ಚು ಹೊಂದಾಣಿಕೆ ಆಗುತ್ತಿಲ್ಲ. ಯಾವ್ಯಾವುದೋ ಮೂಲಗಳಿಂದ ಮಾಹಿತಿ ಕಲೆಹಾಕಿದಾಗ ಸಿಬಂದಿಯ ನಿರ್ಲಕ್ಷ್ಯ
ದಿಂದಾಗಿ ಹೀಗಾಗಿದೆ ಎನ್ನುವುದು ತಿಳಿದುಬಂತು. ದೀಕ್ಷಿತನ ಕಾರ್ಡ್‌ಗೆ ತಾಯಿಯ ಬೆರಳಚ್ಚನ್ನು ಲಿಂಕ್‌ ಮಾಡಲಾಗಿದೆ.

ಒಂದರ ಮೇಲೊಂದು ತಪ್ಪು
ಮಹಿಳೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪತಿಗೂ ಕೈತುಂಬಾ ವೇತನದ ಉದ್ಯೋಗವಿಲ್ಲ. ಕುಟುಂಬದ ಕಷ್ಟವನ್ನು ಗಮನಿಸಿ ನೆರವಿಗೆ ಬಂದ ನೆರೆಮನೆಯವರು 2020ರ ಜನವರಿ 24ರಂದು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರು. ಇಲಾಖೆಯಿಂದ ಬಂದ ಉತ್ತರದಲ್ಲಿ ನೀತಾ ಮತ್ತು ದೀಕ್ಷಿತ್‌ ಹೆಸರಿನ ಬದಲಾಗಿ ಶೈಲಜಾ ಮತ್ತು ವಿಶ್ವನಾಥ ಎಂದು ದಾಖಲಾಗಿತ್ತು. ಮಾ. 9ರಂದು ಒಂದು ಸ್ಲಿಪ್‌ ಕಳುಹಿಸಿ “ನಿಧನ ಹೊಂದಿದಲ್ಲಿ ಮರಣಪತ್ರ ಕಳುಹಿಸಿ’ ಎಂದೂ ಇಲಾಖೆ ಕೇಳಿತು. ಕೆಲವು ದಿನಗಳ ಬಳಿಕ ದೀಕ್ಷಿತ್‌ನ ಇಐಡಿ ಸ್ಲಿಪ್‌ ಕಳುಹಿಸುವಂತೆ ಹೇಳಿತು. ಮತ್ತೆ ಕೆಲವು ದಿನಗಳ ಬಳಿಕ ಆಧಾರ್‌ ಕಾರ್ಡನ್ನು ಮರಳಿಸುವಂತೆ ತಿಳಿಸಿತು. ಅದರಂತೆ ದೀಕ್ಷಿತ್‌ ಕಾರ್ಡನ್ನು ಮರಳಿಸಿದರು. ಅದರೊಂದಿಗೆ ಅವರು ತಮ್ಮಲ್ಲಿದ್ದ ಎಲ್ಲ ದಾಖಲೆಗಳನ್ನೂ ಕಳೆದುಕೊಳ್ಳುವಂತಾಯಿತು.

ಖನಿಜ ಭವನದ 1947 ಸಂಖ್ಯೆಗೆ ಕರೆ ಮಾಡಿದಾಗ “ದೀಕ್ಷಿತ್‌ ಅವರ ಕಾರ್ಡನ್ನು ಹಿಂಪಡೆದು ಹೊಸದನ್ನು ನೀಡುತ್ತೇವೆ; 3 ತಿಂಗಳ ಬಳಿಕ ಕರೆ ಮಾಡಿ’ ಎಂದು ಅಧಿಕಾರಿಗಳು ತಿಳಿಸಿದರು. ಅದರಂತೆ ನ. 6ರಂದು ಸತತ ಕರೆಮಾಡಿ ಸಂಪರ್ಕಿಸಿದಾಗ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರಿದ್ದಲ್ಲದೇ ದಾಷ್ಟéìದ ಉತ್ತರ ನೀಡಿದರು. ಆಧಾರ್‌ ಕಾರ್ಡ್‌ ಬೇಕು ಎಂದಾದಲ್ಲಿ ಬೆಂಗಳೂರಿಗೆ ಬನ್ನಿ ಎಂದರು. ವಿಟ್ಲ, ಮಂಗಳೂರು ಅಥವಾ ಸಮೀಪದ ಕೇಂದ್ರದಲ್ಲಿ ಅವಕಾಶ ಕೊಡಿ ಎಂದು ವಿನಂತಿಸಿದರೂ ಕಿವಿಗೊಡದ ಅಧಿಕಾರಿಗಳು ಫೋನ್‌ ಮಾಡಿ ಕಿರಿಕಿರಿ ಮಾಡಬೇಡಿ ಎಂದು ದರ್ಪದಿಂದ ಉತ್ತರಿಸಿದ್ದಾರೆ.

ನೀತಾ ಗೌಡ ಅವರ ಪುತ್ರ ದೀಕ್ಷಿತ್‌ ಅವರು ಈ ವರೆಗಿನ ದಾಖಲೆಗಳನ್ನು ನಮ್ಮ ಕಚೇರಿಗೆ ತಂದುಕೊಟ್ಟರೆ ಆಧಾರ್‌ ಕಾರ್ಡ್‌ ಪಡೆದುಕೊಳ್ಳಲು ಪೂರಕ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ ಮತ್ತು ಖನಿಜ ಭವನಕ್ಕೆ ಮಾಹಿತಿ ನೀಡುತ್ತೇನೆ.
-ರಾಮಕೃಷ್ಣ ವೈ. ನೋಡಲ್‌ ಅಧಿಕಾರಿ, ಜಿಲ್ಲಾಧಿಕಾರಿ ಕಚೇರಿ, ಮಂಗಳೂರು

Advertisement

ಈ ಕುಟುಂಬದ ಪರವಾಗಿ ಸಾಮಾಜಿಕ ಕಳಕಳಿಯಿಂದ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಅಧಿಕಾರಿಗಳ ನಿರ್ಲಕ್ಷé, ತಾತ್ಸಾರ ಮನೋಭಾವದಿಂದ ಬೇಸರ ವಾಗಿದೆ. ನಾವು ನೀತಾ ಅವರ ಪರವಾಗಿ ವಿಸ್ತಾರವಾಗಿ ಬರೆದ ಅರ್ಜಿ, ಮನವಿಗಳನ್ನು ಓದಿ ಮನನ ಮಾಡಿಕೊಳ್ಳಲಾಗದ ಅಧಿಕಾರಿಗಳು ತಮ್ಮ ಕರ್ತವ್ಯ ಹೇಗೆ ನಿಭಾಯಿಸುತ್ತಾರೆ ಎಂಬ ಸಂಶಯ ಮೂಡಿದೆ. ದೀಕ್ಷಿತ್‌ ವಿದ್ಯಾರ್ಥಿಯಾಗಿದ್ದು ಆಧಾರ್‌ ಇಲ್ಲದೆ ಶೈಕ್ಷಣಿಕ ಚಟುವಟಿಕೆಗಳಿಗೂ ತೊಂದರೆ ಯಾಗಿದೆ. ದಿಕ್ಕೆಟ್ಟು ಕುಳಿತಿರುವ ಬಡ ಕುಟುಂಬಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ನ್ಯಾಯ ಕೊಡಿಸಬೇಕು.
– ಶ್ರೀಧರ ಭಟ್‌ಕುಕ್ಕೆಮನೆ, ನ್ಯಾಯವಾದಿ (ನೆರವಿಗೆ ಬಂದ ನೆರೆಮನೆಯವರು)

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next