Advertisement
ಆಧಾರ್ ಇಲ್ಲದೆ ರಿಟರ್ನ್ಸ್ ಗೆ ಒಪ್ಪಿಗೆ: ಆಧಾರ್ ಸಂಖ್ಯೆಯನ್ನು ನೀಡದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ವ್ಯಕ್ತಿಯೊಬ್ಬರಿಗೆ ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ಆಧಾರ್ ಇಲ್ಲದೆ ಇರುವಂಥ ಅರ್ಜಿದಾರರ ಪಾನ್ ಕಾರ್ಡ್ ಅಮಾನ್ಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ನನ್ನಲ್ಲಿ ಆಧಾರ್ ಇಲ್ಲ. ಆಧಾರ್‌ನ ಮಾನ್ಯತೆ ಕುರಿತು ಸುಪ್ರೀಂನ ತೀರ್ಪು ಬರುವವರೆಗೂ ನಾನು ಆಧಾರ್ ಮಾಡಿಸುವುದಿಲ್ಲ ಎಂದು ಹೇಳಿ ಪ್ರಶಾಂತ್ ಸುಗತನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಒಪ್ಪಿದ ಕೋರ್ಟ್, ಆಧಾರ್ ಸಂಖ್ಯೆ ಇಲ್ಲದೆಯೇ ಐಟಿ ರಿಟರ್ನ್ಸ್ ಸಲ್ಲಿಸಲು ಅವರಿಗೆ ಅವಕಾಶ ಕಲ್ಪಿಸುವಂತೆ ಐಟಿ ಇಲಾಖೆಗೆ ಸೂಚಿಸಿದೆ.
ರೈಲುಗಳಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸುವಾಗ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಲ್ಲ ಎಂದು ರೈಲ್ವೇ ಖಾತೆ ಸಹಾಯಕ ಸಚಿವ ರಾಜೆನ್ ಗೊಹಾನಿ ಹೇಳಿದ್ದಾರೆ. ‘ರೈಲು ಟಿಕೆಟ್ ಬುಕ್ ಮಾಡುವಾಗ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಕಡ್ಡಾಯವಾಗಿಸುವ ಪ್ರಸ್ತಾವ ಸದ್ಯಕ್ಕಂತೂ ಇಲಾಖೆ ಮುಂದಿಲ್ಲ’ ಎಂದು ರಾಜ್ಯಸಭೆಗೆ ಶುಕ್ರವಾರ ಮಾಹಿತಿ ನೀಡಿದ್ದಾರೆ.