ಕಾಸರಗೋಡು: ರಾಜ್ಯದಲ್ಲಿ ಆಧಾರ್ ಸೇವೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಆಧಾರ್ ಸೇವಾ ಕೇಂದ್ರದ ಸಾಫ್ಟ್‌ವೇರ್ ಕೈಕೊಟ್ಟಿರುವುದೇ ಈ ಸಮಸ್ಯೆಗೆ ಪ್ರಧಾನ ಕಾರಣವಾಗಿದೆ.
ಆಧಾರ್ ಕಾರ್ಡ್ ಸೇವೆಗಾಗಿ ಮುಖ್ಯವಾಗಿ ಬಳಸಲಾಗುತ್ತಿರುವ ಎನ್‌ರೋಲ್‌ಮೆಂಟ್ ಕ್ಲೈಂಟ್ ಮಲ್ಟಿ ಪ್ಲಾಟ್ ಫಾರ್ಮ್ ಎಂಬ ಹೆಸರಿನ ಸಾಫ್ಟ್‌ವೇರ್ ಕೈಕೊಟ್ಟಿರುವುದೇ ಆಧಾರ್ ಸೇವೆ ಅಸ್ತವ್ಯಸ್ತಗೊಳ್ಳಲು ಕಾರಣವಾಗಿದೆ.
ಇದರಿಂದಾಗಿ ಹೊಸದಾಗಿ ಆಧಾರ್ ಕಾರ್ಡ್ ಪಡೆಯುವಿಕೆ, ಆಧಾರ್ ಕಾರ್ಡ್‌ಗಳಲ್ಲಿ ಉಂಟಾಗಿರುವ ತಪ್ಪುಗಳ ತಿದ್ದುಪಡಿ ಮತ್ತು ಬಯೋಮೆಟ್ರಿಕ್ ಅಪ್‌ಡೇಟ್ ಇತ್ಯಾದಿ ಸೇವೆಗಳನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿಯಿದೆ.
ಕೇರಳದ ಶೇಕಡಾ 80ರಷ್ಟು ಆಧಾರ್ ಸೇವಾ ಕೇಂದ್ರಗಳು ಕಾರ್ಯರಹಿತಗೊಂಡಿವೆ. ಎಪ್ರಿಲ್ ತಿಂಗಳ 24ರಂದು ಆಧಾರ್ ಸೇವಾ ಕೇಂದ್ರಗಳ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲಾಗಿತ್ತು. ಅಂದಿನಿಂದಲೇ ಸಾಫ್ಟ್‌ವೇರ್ ಲೋಪದೋಷಗಳು ಆರಂಭಗೊಂಡಿವೆ. ಈಗ ಅದು ರಾಜ್ಯದ ಶೇಕಡಾ 80ರಷ್ಟು ಆಧಾರ್ ಸೇವಾ ಕೇಂದ್ರಗಳ ಸೇವೆಗಳ ಮೇಲೂ ಪಸರಿಸಿ ಭಾರೀ ಸಂಕಷ್ಟ ಎದುರಿಸುವಂತಾಗಿದೆ.
ಹತ್ತನೇ ತರಗತಿ, ಹೈಯರ್ ಸೆಕೆಂಡರಿ ಇತ್ಯಾದಿ ಪರೀಕ್ಷೆಗಳ ಫಲಿತಾಂಶ ಈಗಾಗಲೇ ಹೊರಬಂದು ಮುಂದಿನ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಕಾದಿರುವ ವಿದ್ಯಾರ್ಥಿಗಳು ಇದೀಗ ಅಪಾರ ತೊಂದರೆ ಅನುಭವಿಸುವಂತಾಗಿದೆ. ಆಧಾರ್ ಕಾರ್ಡ್ ಸೇವಾ ಕೇಂದ್ರಗಳ ಸೇವೆ ಕೈಕೊಟ್ಟಿರುವುದು ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ ಸಾರ್ವಜನಿಕರನ್ನು ಕೂಡ ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಯಾವುದೇ ಸರಕಾರಿ ವ್ಯವಸ್ಥೆಗಳಿಗೆ ಆಧಾರ್ ಕಾರ್ಡ್ ಅಗತ್ಯವಾಗಿರುವುದರಿಂದ ಜನರು ಇದೀಗ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ವಾರದೊಳಗೆ ಪರಿಹಾರ
ಆಧಾರ್ ಕಾರ್ಡ್ ಸಮಸ್ಯೆಗೆ ಒಂದು ವಾರದೊಳಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಕಲ್ಲಿಕೋಟೆಯಲ್ಲಿರುವ ಆಧಾರ್ ಕಾರ್ಡ್ ಸೇವೆಯ ಪ್ರಧಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ 14 ಜಿಲ್ಲೆಗಳಲ್ಲೂ ಆಧಾರ್ ಸೇವೆ ಸ್ತಬ್ಧಗೊಂಡಿದೆ. ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸುತ್ತಿರುವುದು ನಿಜ. ಆದರೆ ಕನಿಷ್ಠ ಒಂದು ವಾರವಾದರೂ ಈ ಸೇವೆ ಸಮರ್ಪಕವಾಗಲು ಕಾಲಾವಕಾಶ ಬೇಕಿದೆ. ಸಾಫ್ಟ್‌ವೇರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆ ಈಗಾಗಲೇ ಆರಂಭಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.