Advertisement

ಅಂಚೆ ಕಚೇರಿಯಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ ಅಡೆತಡೆ

10:11 AM Sep 27, 2019 | sudhir |

ಉಡುಪಿ: ಜಿಲ್ಲೆಯ ಕೆಲವು ಅಂಚೆ ಕಚೇರಿಗಳಲ್ಲಿ ವಿವಿಧ ಕಾರಣಗಳನ್ನು ನೀಡಿ ಆಧಾರ್‌ ಕಾರ್ಡ್‌ ತಿದ್ದುಪಡಿ ಹಾಗೂ ನೋಂದಣಿ ಕಾರ್ಯ ಸ್ಥಗಿತಗೊಳಿಸಿದ್ದು, ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ.

Advertisement

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಈ ಹಿಂದೆ ಆಧಾರ್‌ ಕಾರ್ಡ್‌ ನೋಂದಣಿ ಮತ್ತು ತಿದ್ದುಪಡಿ ಅಧಿಕಾರವನ್ನು ಖಾಸಗಿ ಸಂಸ್ಥೆಗಳಿಗೆ ನೀಡಿತ್ತು. ಅನಂತರದ ದಿನದಲ್ಲಿ ಆದೇಶವನ್ನು ಹಿಂಪಡೆದು ಕೆಲ ಬ್ಯಾಂಕ್‌ ಮತ್ತು ಅಂಚೆ ಕಚೇರಿಗೆ ಈ ಸೇವೆಯ ಜವಾಬ್ದಾರಿಯನ್ನು ವರ್ಗಾಯಿಸಿತು.

ಪ್ರಾಧಿಕಾರದಿಂದಲೇ ಸೌಲಭ್ಯ ಪೂರೈಕೆ
ಪ್ರಾಧಿಕಾರದ ವತಿಯಿಂದ ಅಂಚೆ ಇಲಾಖೆಯ ಸಿಬಂದಿಗೆ ತರಬೇತಿ ನೀಡುವುದರ ಜತೆಗೆ ಆಧಾರ್‌ ಕಾರ್ಡ್‌ ನೋಂದಣಿ ಮತ್ತು ತಿದ್ದುಪಡಿಗೆ ಬೇಕಾಗುವ ಕಂಪ್ಯೂಟರ್‌ ಸೇರಿದಂತೆ ಯಂತ್ರೋಪ‌ಕರಣಗಳನ್ನು ಪೂರೈಸಿತು.

ಉಡುಪಿ ವಿಭಾಗದಲ್ಲಿ 62
ಉಡುಪಿ ವಿಭಾಗದ 62 ಅಂಚೆ ಕಚೇರಿಯಲ್ಲಿ ಆಯ್ದ 47 ಕಚೇರಿಗಳಲ್ಲಿ ಈ ಸೇವೆಯನ್ನು 2018ರಲ್ಲಿ ಪ್ರಾರಂಭಿಸಲಾಗಿತ್ತು. ಪ್ರಾರಂಭದಲ್ಲಿ ನಿತ್ಯ 15- 20 ಕಾರ್ಡ್‌ಗಳ ನೋಂದಣಿ ಹಾಗೂ ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ ಇದೀಗ ಕಚೇರಿ ಸಿಬಂದಿ ಬೇರೆ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡುವಂತೆ ಜನರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಆರೋಪಗಳಿವೆ.

ಸಿಬಂದಿ ಕೊರತೆಯಿಂದ ವಾಪಸು
ಅಂಚೆ ಕಚೇರಿಯಲ್ಲಿ ಸಿಬಂದಿ ಕೊರತೆ ಹಾಗೂ ಕಾರ್ಯ ಒತ್ತಡದಿಂದ ಸೇವೆ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯದ ಜನರು ದೂರದ ಪ್ರದೇಶದವರು ಆಧಾರ್‌ ನೋಂದಣಿಗೆ ಅಂಚೆ ಕಚೇರಿಗೆ ಬಂದು ಕೆಲಸವಾಗದೆ ಹಿಂದಿರುಗುತ್ತಿದ್ದಾರೆ.

Advertisement

ಬಂದದ್ದು ವ್ಯರ್ಥವಾಯ್ತು
ಬಾರಕೂರು ಅಂಚೆ ಕಚೇರಿಗೆ ಆಧಾರ್‌ ಕಾರ್ಡ್‌ ತಿದ್ದುಪಡಿಗೆ ಬಂದಿದ್ದೇನೆ. ಸಿಬಂದಿ ಆಧಾರ ನೋಂದಣಿ ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
-ವಿಜೇಂದ್ರ, ಬಾರಕೂರು

ಸ್ಟೇಟ್‌ ಬ್ಯಾಂಕ್‌ ಸಂಪರ್ಕಿಸಲು ಹೇಳುತ್ತಿದ್ದಾರೆ
ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಆಧಾರ್‌ ಕಾರ್ಡ್‌ ನೋಂದಣಿ ಕುರಿತು ಸಿಬಂದಿಯನ್ನು ಕೇಳಿದರೆ ಈಗಾಗಲೇ 25 ಟೋಕನ್‌ ವಿತರಣೆಯಾಗಿದೆ. ಸ್ಟೇಟ್‌ ಬ್ಯಾಂಕ್‌ ಸಂಪರ್ಕಿಸುವಂತೆ ಉತ್ತರ ನೀಡುತ್ತಿದ್ದಾರೆ.
– ಸಂತೋಷ್‌, ಮಂದಾರ್ತಿ

ಕಾರ್ಡ್‌ ತಿದ್ದುಪಡಿ, ನೋಂದಣಿ ರದ್ದು ಅಸಾಧ್ಯ
ಜಿಲ್ಲೆಯ ಅಂಚೆಕಚೇರಿಯಲ್ಲಿ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ಕಾರ್ಯ ಒತ್ತಡ ಹಾಗೂ ಸರ್ವರ್‌ನಲ್ಲಿ ಸಮಸ್ಯೆ ಎದುರಾದಾಗ ಸಿಬಂದಿ ಸ್ವಲ್ಪ ಸಮಯ ಸ್ಥಗಿತಗೊಳಿಸುತ್ತಾರೆ. ಸಂಪೂರ್ಣವಾಗಿ ಕಾರ್ಡ್‌ ತಿದ್ದುಪಡಿ ಹಾಗೂ ನೋಂದಣಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ.
-ಸುಧಾಕರ್‌ ದೇವಾಡಿಗ, ಅಂಚೆ ಅಧೀಕ್ಷಕ, ಉಡುಪಿ ವಿಭಾಗ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next