ಬದಿಯಡ್ಕ: ಜಾನುವಾರು ಸಹಿತ ಸಾಕುಪ್ರಾಣಿಗಳಿಗೆ ಆಧಾರ್ ಮಾದರಿಯಲ್ಲಿ 12 ಅಂಕೆಗಳ ಗುರುತಿನ ನಂಬ್ರ ನೀಡಲಾಗುವುದು.ಇ-ಆಫೀಸ್ ಸಾಧ್ಯತೆಗಳನ್ನು ಅಳವಡಿಸುವ ಮೂಲಕ ಪಶುಸಂಗೋಪನ ಇಲಾಖೆಯ ಮಹತ್ವದ ಹೆಜ್ಜೆಯಾಗಿದೆ ಇದು.ಕ್ಷೀರ ಕೃಷಿಕರ ಮಾಹಿತಿಗಳನ್ನು ಗೂಗಲ್ ಮ್ಯಾಪ್‌ನ ಸಹಾಯದೊಂದಿಗೆ ಜಿಯೋಮ್ಯಾಪಿಂಗ್ ಮೂಲಕ ಸಂಗ್ರಹಿಸುವುದು.
ಹಾಲುತ್ಪಾದಕರಿಗಿರುವ ಸರಕಾರಿ ಸೇವೆಗಳು ಸುಲಭವಾಗಿ ಲಭಿಸುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಮೊದಲ ಹಂತದಲ್ಲಿ ಸಂಪೂರ್ಣ ಮಾಹಿತಿಗಳನ್ನು ಹೊಂದಿರುವ 12 ಅಂಕೆಗಳ ಡಿಜಿಟಲ್ ಐಡಿ ನಂಬ್ರ ನೀಡುವುದು. ಮೃಗಗಳಿಗೆ ಮಾತ್ರವಲ್ಲ, ಕ್ಷೀರ ಕೃಷಿಕರಿಗೆ ಪ್ರತ್ಯೇಕ ನಂಬ್ರ ನೀಡಲಾಗುವುದು. ಇವುಗಳ ಏಕೀಕೃತ ಸ್ವಭಾವದಲ್ಲಿ ಡಿಜಿಟಲ್ ಡಾಟಾ ಬ್ಯಾಂಕ್ ತಯಾರಿಸುವುದು. ಈ ಮೂಲಕ ದನ ಕಾರು ಹಾಕಿದ ದಿನಾಂಕ, ಲಸಿಕೆ ನೀಡಿದ ಮಾಹಿತಿಗಳು, ಚಿಕಿತ್ಸೆ ಮಾಹಿತಿಗಳು, ರೋಗಗಳ ಕುರಿತು, ಹಾಲುತ್ಪಾದನೆ ಮುಂತಾದವುಗಳ ಮಾಹಿತಿಗಳು ಐಡಿ ನಂಬ್ರ ನೀಡಿದರೆ ಆನ್‌ಲೆ„ನ್ ಆಗಿ ಲಭಿಸುವುದು. ರಾಜ್ಯ ಸರಕಾರದ ಇನ್ಶೂರೆನ್ಸ್ ಯೋಜನೆಯಾದ ಗೋಸಮೃದ್ಧಿಯ ಮಾಹಿತಿಗಳನ್ನು ಸಂಗ್ರಹಿಸಿರು ವುದರಿಂದ ಈ ಕುರಿತಾದ ಮಾಹಿತಿಯೂ ಲಭಿಸುವುದು. ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ರೋಗ ಹರಡದಂತೆ ಪ್ರತಿರೋಧ ಕ್ರಮ ತ್ವರಿತಗತಿಯಲ್ಲಿ ನಡೆಸಲು ಜಿಯೋಮ್ಯಾಪಿಂಗ್ ಸಹಾಯವಾಗುವುದು. ಲಸಿಕೆ ನೀಡುವುದನ್ನು ಈ ಆ್ಯಪ್ ಮೂಲಕ ಸಂಗ್ರಹಿಸುವುದರೊಂದಿಗೆ ಪ್ರತೀ ವಲಯದಲ್ಲಿ ಲಸಿಕೆ ಸ್ಥಿತಿಗತಿಗಳ ಬಗ್ಗೆ ಆನ್‌ಲೆ„ನ್ ಮೂಲಕ ತಿಳಿಯಬಹುದು. ಅನಿಮಲ್ ಝೋನ್ ಆಧಾರವಾಗಿಸಿರುವ ಪಶುಸಂಗೋಪನ ಇಲಾಖೆಯ ವ್ಯವಹಾರಗಳಿಗೆ ಸಹಾಯಕವಾಗುವ ರೀತಿಯಲ್ಲಿ ಪ್ರಾರಂಭಿಸಲಾದ ಈ ಯೋಜನೆ ಪಶುಸಂಗೋಪನ ನಿರ್ದೇಶನಾಲಯ, ಜಿಲ್ಲಾ ಕಚೇರಿಗಳು, ತಾಲೂಕು ಕಚೇರಿಗಳು, ಪಂಚಾಯತ್‌ಗಳ ವೆಟರ್ನರಿ ಕೇಂದ್ರಗಳ ಸಹಿತ ರಾಜ್ಯದ 2,000ದಷ್ಟು ಕಚೇರಿಗಳನ್ನು ಸಂಪೂರ್ಣವಾಗಿ ಡಿಜಿಟಲ್ ಶೃಂಖಲೆಯೊಂದಿಗೆ ಜೋಡಿಸಲಾಗಿದೆ. ಈ ಮೂಲಕ ಪಶುಸಂಗೋಪನ ಇಲಾಖೆಯು ಇ-ಆಫೀಸ್ ವಲಯದಲ್ಲೂ ತನ್ನ ಛಾಪು ಮೂಡಿಸಿದೆ.
ರಾಜ್ಯದ ಎಲ್ಲ ವೆಟರ್ನರಿ ವೈದ್ಯರಿಗೆ, ಲೆ„ವ್‌ಸ್ಟಾಕ್ ಇನ್ಸ್‌ಪೆಕ್ಟರ್‌ಗಳಿಗೆ ಟ್ಯಾಬ್‌ಗಳನ್ನು ನೀಡ ಲಾಗಿದೆ. ಮಾಹಿತಿ ದಾಖಲಿಸುವುದಕ್ಕಾಗಿ 4,000 ಲ್ಯಾಪ್‌ಟಾಪ್ ಗಳನ್ನು ಸಹ ನೀಡಲಾಗಿದೆ. ಐಐಐ ಟಿಎಂಕೆ ತಯಾರಿಸಿದ ಭೂಮಿಕಾ ಎಂಬ ಅಪ್ಲಿಕೇಶನ್ ಉಪಯೋಗಿಸಿ ಕೊಂಡು ಮಾಹಿತಿ ದಾಖಲಿಸುವುದು. ಪಶು ವೈದ್ಯರು ತಮ್ಮ ವ್ಯಾಪ್ತಿಯಲ್ಲಿರುವ ಮನೆಗಳಲ್ಲಿನ ಜಾನುವಾರುಗಳ ಮತ್ತು ಹೈನುಗಾರಿಕಾ ಕೃಷಿಕರ ಮಾಹಿತಿಗಳನ್ನು ಚಿತ್ರ ಸಹಿತ ದಾಖಲಿಸುವುದು. ಸಂಗ್ರಹಿಸಿದ ಮಾಹಿತಿಗಳನ್ನು ಜಿಯೋಗ್ರಾಫಿಕ್ ಇನ್‌ಫರ್ಮೇಶನ್ ಸಿಸ್ಟಂನಲ್ಲಿ ದಾಖಲಿಸುವುದು. ದನಗಳ ಬಣ್ಣ, ಗಾತ್ರ, ತಳಿ ಮುಂತಾದ ವಿಷಯಗಳಲ್ಲದೆ ಹಸುಸಾಕಣೆಗಾರರ ಸಂಪೂರ್ಣ ಮಾಹಿತಿಯನ್ನು ದಾಖಲಿಸಿದಲ್ಲಿ ಹಸು ಅಥವಾ ಇನ್ನಿತರ ಸಾಕುಪ್ರಾಣಿಗಳಿಗೆ ನೀಡಲಾಗುವ ಲಸಿಕೆಗಳು, ಪಶು ಆಹಾರಗಳು, ಇನ್ಶೂರೆನ್ಸ್ ಮಾಹಿತಿಗಳು ಮಾತ್ರವಲ್ಲದೆ ಜಾನುವಾರುಗಳಿಗೆ ಸರಕಾರದಿಂದ, ಮೃಗ ಸಂರಕ್ಷಣಾಲಯ, ಪಂಚಾಯತ್ ಮಟ್ಟದಲ್ಲಿ ದೊರೆಯುವ ಎಲ್ಲ ಸೌಲಭ್ಯಗಳ ಪ್ರಯೋಜನವನ್ನೂ ಸುಲಭದಲ್ಲಿ ಪಡೆಯಬಹುದಾಗಿದೆ. ರಾಜ್ಯದಲ್ಲಿ ಸುಮಾರು 10ಲಕ್ಷದಷ್ಟು ಜಾನುವಾರುಗಳಿರುವುದಾಗಿ ಪ್ರಾಥಮಿಕ ಲೆಕ್ಕಾಚಾರವಾಗಿದೆ.
2022ರೊಳಗೆ ಹಾಲುತ್ಪಾದನಾ ಕ್ಷೇತ್ರದ ಆದಾಯ ದುಪ್ಪಟ್ಟುಗೊಳಿಸುವ ಉದ್ಧೇಶವನ್ನೂ ಇದು ಒಳಗೊಂಡಿದೆ. ಈ ಪದ್ಧತಿಯ ಅನುಷ್ಠಾನಕ್ಕಾಗಿ ಮೊದಲ ಹಂತದಲ್ಲಿ ಸುಮಾರು 500 ಮಿಲಿಯನ್ ರೂ.ಗಳನ್ನು 40 ಮಿಲಿಯನ್ ಗೋವುಗಳ ಸಂರಕ್ಷಣೆಗೆ ಮೀಸಲಿಡುವ ಕುರಿತು ಯೋಜನೆ ಸಿದ್ಧಪಡಿಸಲಾಗಿದೆ. ಯೋಜನೆಯ ಅನುಷ್ಠಾನ ಸರಿಯಾದ ಉಪಯುಕ್ತವಾದ ರೀತಿಯಲ್ಲಿ ನಡೆದಲ್ಲಿ ಮುಂದೆ ಹೆಚ್ಚಿನ ಮೊತ್ತವನ್ನು ಬಿಡುಗಡೆ ಗೊಳಿಸುವ ಸಾಧ್ಯತೆಯಿದೆ. ಹೆ„ನುಗಾರಿಕೆಯನ್ನು ಜೀವನೋಪಾಯವಾಗಿ ಕಂಡುಕೊಂಡ ಮಿಲಿಯ ಗಟ್ಟಲೆ ಜನರಿಗೆ ಇದು ಸಹಾಯಕವಾಗಲಿದೆ. ಹಸುಗಳ ಕಳ್ಳತನದ ಸಮಸ್ಯೆಯೂ ಗಮನೀಯವಾಗಿ ಕಡಿಮೆಯಾಗಲು ಇದು ಪೂರಕವಾಗಿದೆ.
ಜಿಯೋಮ್ಯಾಪಿಂಗ್ ಆರಂಭ ಕಾಸರಗೋಡು ಜಿಲ್ಲೆಯಲ್ಲಿ ಜ. 14ರಿಂದ ಜಿಯೋಮ್ಯಾಪಿಂಗ್ ಪ್ರಾರಂಭ ಮಾಡಿದ್ದು ಈಗಾಗಲೇ ಸುಮಾರು ಶೇ.27ರಷ್ಟು ಜಾನುವಾರುಗಳಿಗೆ 12 ಅಂಕೆಗಳ ಡಿಜಿಟಲ್ ಟ್ಯಾಗ್ ಅಳವಡಿಸಲಾಗಿದೆ. ಅತ್ಯಂತ ವೇಗವಾಗಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಜ್ಯಾರಿಗೊಳಿಸುವ ಕಾರ್ಯವು ನಡೆಯುತ್ತಿದೆ. ಪ್ರಸ್ತುತ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕುವ ಕಾರ್ಯವೂ ಪ್ರಾರಂಭವಾಗಿದೆ. ಇದೊಂದು ಅತ್ಯಂತ ಉಪಯುಕ್ತ ಹಾಗೂ ಪರಿಣಾಮಕಾರಿ ಯೋಜನೆಯಾಗಿದ್ದು ಕೃಷಿಕರ ಪಾಲಿಗೆ ವರದಾನವಾಗಿ ಪರಿಣಮಿಸಲಿದೆ.
– ಡಾ| ನಾಗರಾಜ್
ಜಿಲ್ಲಾ ಕೋ-ಆರ್ಡಿನೇಟರ್.
ಮೌಲ್ಯ ನಿರ್ಣಯಕ್ಕೆ ಉಪಯುಕ್ತ
ಬದಿಯಡ್ಕ ಪಂಚಾಯತ್‌ನಲ್ಲಿ ಸುಮಾರು 1,200 ಜಾನುವಾರುಗಳಿಗೆ ಟ್ಯಾಗ್ ಹಾಕಲಾಗಿದ್ದು ಫೆಬ್ರವರಿಯೊಳಗಾಗಿ 3,000ರಷ್ಟು ಜಾನುವಾರುಗಳನ್ನು ಈ ಯೋಜನೆಯಡಿ ಯಲ್ಲಿ ದಾಖಲಿಸಿ ಸೌಲಭ್ಯಗಳು ಸುಲಭವಾಗಿ ಲಭಿಸುವಂತೆ ಮಾಡಲಾಗುತ್ತದೆ. ಹಸುಗಳ ಪ್ರಾಯ, ಹಾಕಿದ ಕರುಗಳ ಸಂಖ್ಯೆ, ಮಾರಾಟ ಮಾಡುವುದಾದರೆ ಮೌಲ್ಯ ನಿರ್ಣಯ ಮುಂತಾದ ವಿಚಾರಗಳ ಬಗ್ಗೆ ಸ್ಪಷ್ಟ ಹಾಗೂ ನಿಖರ ಮಾಹಿತಿ ಪಡೆಯುವಲ್ಲಿ ಈ ಯೋಜನೆಯು ಬಹಳ ಉಪಯುಕ್ತವಾಗಿದೆ.
– ಡಾ| ಚಂದ್ರ ಬಾಬು
ಬದಿಯಡ್ಕ ಮೃಗಾಸ್ಪತ್ರೆಯ ವೈದ್ಯರು