Advertisement

Udupi ಪಹಣಿಗೆ ಆಧಾರ್‌ ಜೋಡಣೆ ಕಡ್ಡಾಯ: ಡಿಸಿ ಡಾ| ಕೆ. ವಿದ್ಯಾಕುಮಾರಿ

09:28 PM Sep 01, 2024 | Team Udayavani |

ಉಡುಪಿ: ರೈತರು ತಮ್ಮ ಜಮೀನಿನ ಪಹಣಿಯನ್ನು ಆಧಾರ್‌ಗೆ ಲಿಂಕ್‌ ಮಾಡುವ ಕಾರ್ಯವು ಪ್ರಸ್ತುತ ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲಿ ಈ ವರೆಗೆ ಶೇ. 65 ಮಾತ್ರ ಪ್ರಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Advertisement

ಮುಂದಿನ ಒಂದು ವಾರದೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಭೂಮಾಲಕರ ಜಮೀನಿನ ಪಹಣಿಯನ್ನು ಆಧಾರ್‌ಗೆ ಲಿಂಕ್‌ ಮಾಡುವ ಬಗ್ಗೆ ಸರಕಾರದ ನಿರ್ದೇಶನವಿದೆ. ಜಿಲ್ಲೆಯ ಕೆಲವೊಂದು ನಾಗರಿಕರು ಆಧಾರ್‌ ಲಿಂಕ್‌ ಮಾಡಲು ಹಿಂಜರಿಯುತ್ತಿದ್ದು, ಇದರಿಂದ ನಿಗದಿತ ಪ್ರಗತಿ ಸಾಧಿಸಲು ಅಸಾಧ್ಯವಾಗಿದೆ.

ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಅಕ್ರಮ ಖಾತಾ ಬದಲಾವಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಆಧಾರ್‌ ಜೋಡಣೆ ಆವಶ್ಯಕವಾಗಿರುವುದರಿಂದ ಜಿಲ್ಲೆಯ ರೈತರು ಮೂರು ದಿನದೊಳಗೆ ಪಹಣಿ, ಆಧಾರ್‌ ದಾಖಲಾತಿಗಳೊಂದಿಗೆ ಹಾಗೂ ಆಧಾರ್‌ ಜೋಡಣೆಯಾಗಿರುವ ಮೊಬೈಲ್‌ನೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್‌ ಜೋಡಣೆ ಮಾಡಿಸಿಕೊಳ್ಳಬಹುದು.

ಜಿಲ್ಲೆಯಲ್ಲಿ ಜಮೀನು ಹೊಂದಿ ಬೇರೆ ರಾಜ್ಯ ಹಾಗೂ ವಿದೇಶದಲ್ಲಿ ವಾಸವಿದ್ದ ಭೂಮಾಲಕರು ಅವರ ಕುಟುಂಬಸ್ಥರು/ಸಂಬಂಧಿಕರು ಜಿಲ್ಲೆಯಲ್ಲಿದ್ದಲ್ಲಿ ಅವರಿಂದ ಮಾಹಿತಿ ಪಡೆದು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್‌ ಜೋಡಣೆ ಮಾಡಿಸಬೇಕು. ಈ ಕಾರ್ಯವು ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರವೇ ಆಗುತ್ತಿದ್ದು, ಸೈಬರ್‌, ಗ್ರಾಮ ಒನ್‌ ಸೆಂಟರ್‌ ಇತ್ಯಾದಿ ಕಡೆಗಳಲ್ಲಿ ಮಾಡಲು ಅವಕಾಶ ಇಲ್ಲ.

ಈವರೆಗೆ ಆಧಾರ್‌ ಜೋಡಣೆ ಮಾಡದಿರುವ ಭೂಮಾಲಕರು ಮುಂದಿನ ದಿನಗಳಲ್ಲಿ ಸರಕಾರದ ಸವಲತ್ತುಗಳಿಂದ ವಂಚಿತರಾಗುವ ಸಂಭವ ಇರುವುದರಿಂದ ಆಧಾರ್‌ ಜೋಡಣೆ ಮಾಡದಿರುವ ಭೂಮಾಲಕರು ತತ್‌ಕ್ಷಣವೇ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್‌ ಜೋಡಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next