Advertisement

Udupi: ಸಿಗುತ್ತಿಲ್ಲ ಡಾಮರು ಮಿಶ್ರಣ!; ಹಾನಿಗೊಂಡ ರಸ್ತೆಗಳ ದುರಸ್ತಿಗೆ ಕೂಡಿಬರದ ಕಾಲ

01:31 PM Oct 30, 2024 | Team Udayavani |

ಉಡುಪಿ: ಮಳೆಯಿಂದಾಗಿ ಜಿಲ್ಲೆಯ ರಸ್ತೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಂಡಿವೆ. ಹೊಸ ರಸ್ತೆ ನಿರ್ಮಾಣ, ಕೆಟ್ಟು ಹೋದ ರಸ್ತೆಗಳ ದುರಸ್ತಿ ಕಾಮಗಾರಿಗಳು ಈಗಾಗಲೇ ಆರಂಭವಾಗಬೇಕಾಗಿತ್ತು. ಆದರೆ, ಚಳಿಗಾಲ ಸನಿಹವಾದರೂ ಇನ್ನೂ ಆಗಾಗ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೆ ಗುತ್ತಿಗೆದಾರರು ಮುಂದಾಗುತ್ತಿಲ್ಲ. ಅದರ ಜತೆಗೆ ಮಳೆ ದೂವಾಗಿಲ್ಲ ಎನ್ನುವ ಕಾರಣಕ್ಕೆ, ಮೇ ತಿಂಗಳಲ್ಲಿ ಮುಚ್ಚಿದ್ದ ಜಿಲ್ಲೆಯಲ್ಲಿನ ಡಾಮರು ಮಿಶ್ರಣ ಘಟಕಗಳೂ ಕಾರ್ಯಾಚರಣೆ ಶುರು ಮಾಡಿಲ್ಲ. ಹೀಗಾಗಿಯೂ ರಸ್ತೆ ದುರಸ್ತಿ ವಿಳಂಬವಾಗುತ್ತಿದೆ ಎನ್ನುತ್ತಾರೆ ಗುತ್ತಿಗೆದಾರರು.

Advertisement

45ಕ್ಕೂ ಅಧಿಕ ಘಟಕಗಳಿವೆ
ಉಡುಪಿ, ಕಾರ್ಕಳ, ಹೆಬ್ರಿ, ಉಡುಪಿ ಕಾಪು ತಾಲೂಕು ಒಳಗೊಂಡು ಜಿಲ್ಲೆಯಲ್ಲಿ ಸುಮಾರು 45 ಡಾಮರು ಮಿಶ್ರಣ ಘಟಕಗಳು ಕಾರ್ಯಾಚರಿಸುತ್ತಿವೆ. ಡಾಮರು ರಸ್ತೆ ನಿರ್ಮಾಣಕ್ಕೆ ಬೇಕಾದ ಜಲ್ಲಿ, ಡಸ್ಟ್‌ (ಧೂಳು) ಮಿಶ್ರಣಗಳಿರುವ ವೆಟ್‌ಮಿಕ್ಸ್‌, ಬಿಎಂ ಮಿಕ್ಸ್‌, ಎಸ್‌ಬಿಸಿ ಇಲ್ಲಿನ ಘಟಕಗಳಿಂದ ಸರಬರಾಜಗುತ್ತವೆ. ಮಳೆಗಾಲ ಆರಂಭಗೊಂಡ ಮೇ ತಿಂಗಳಲ್ಲಿ ಘಟಕಗಳು ಕೆಲಸ ಸ್ಥಗಿತಗೊಳಿಸಿದ್ದು, ಮರು ಆರಂಭವಾಗಿಲ್ಲ. ಹೀಗಾಗಿ ಮಿಶ್ರಣ ಸರಬರಾಜು ಆಗುತ್ತಿಲ್ಲ.

ಸಾರ್ವಜನಿಕರ ಹಿಡಿಶಾಪ, ಕಾರ್ಮಿಕರಿಗೂ ಸಮಸ್ಯೆ
ಜಿಲ್ಲೆಯ ಹಲವು ಭಾಗಗಳಲ್ಲಿ ರಸ್ತೆ ತೀರಾ ಹದಗೆಟ್ಟು ಸಂಚಾರ ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. ವಾಹನ, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿವೆ. ರಸ್ತೆ ಅವ್ಯವಸ್ಥೆಯ ಬಗ್ಗೆ ಇಲಾಖೆ, ಆಡಳಿತಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಆದರೆ, ಡಾಮರು ಮಿಶ್ರಣ ಘಟಕ ಕಾರ್ಯಾರಂಭಿಸಿಲ್ಲ. ಇದರಿಂದ ದುರಸ್ತಿ ತಡವಾಗಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಈ ನಡುವೆ, ಇನ್ನೂ ಡಾಮರು ಘಟಕಗಳ ಕಾರ್ಯಾಚರಣೆ ಆರಂಭವಾಗದೆ ಇರುವುದರಿಂದ ಅದರ ಕಾರ್ಮಿಕರಿಗೂ ತೊಂದರೆಯಾಗಿದೆ. ಈ ಘಟಕಗಳಲ್ಲಿ ಸ್ಥಳೀಯ ಹಾಗೂ ಅನ್ಯ ಜಿಲ್ಲೆ, ರಾಜ್ಯದ ನೂರಾರು ಕಾರ್ಮಿಕರಿದ್ದಾರೆ.

ಮಿಕ್ಸಿಂಗ್‌ ಪ್ಲ್ರಾಂಟ್‌ಗಳ ಅವಲಂಬನೆ
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ಜಿ.ಪಂ, ಲೊಕೋಪಯೋಗಿ ಇಲಾಖೆ, ಪಿಎಂಜಿವೈ, ನಗರಸಭೆ, ಪುರಸಭೆ, ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳಿಗೆ ಮಳೆ, ಪ್ರಾಕೃತಿಕ ವಿಕೋಪಗಳಿಂದ ಅತೀವ ಹಾನಿಯಾಗಿವೆ. ಹಿಂದೆ ಅನುದಾನ ಮಂಜೂರುಗೊಂಡ ರಸ್ತೆಗಳ ಪೈಕಿ ಕೆಲವೆಡೆ ಡಾಮರು ಕಾಮಗಾರಿ ಅರ್ಧಕ್ಕೆ ನಿಂತಿವೆ. ಅವುಗಳನ್ನು ಪೂರ್ಣಗೊಳಿಸಬೇಕು. ತಾತ್ಕಾಲಿಕ ರಸ್ತೆ ನಿರ್ಮಾಣವಾಗಬೇಕು. ರಸ್ತೆ ದುರಸ್ತಿ, ಪ್ಯಾಚ್‌ ಹಾಕುವುದು, ಮರು ಕಾರ್ಪೆಟ್‌ ಮಾಡುವುದು, ಹೊಸ ರಸ್ತೆಗಳನ್ನು ನಿರ್ಮಿಸುವುದು ಎಲ್ಲದಕ್ಕೂ ಮಿಕ್ಸಿಂಗ್‌ ಪ್ಲ್ರಾಂಟ್‌ಗಳನ್ನೇ ಅವಲಂಬಿಸಲಾಗಿದೆ.

Advertisement

ಮಿಕ್ಸಿಂಗ್‌ ಘಟಕದ ಮಾಲಕರಿಗೆ ನಿರುತ್ಸಾಹ
ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಅನುದಾನಗಳು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿಲ್ಲ. ಅರ್ಧಕ್ಕೆ ನಿಂತಿರುವ ಕಾಮಗಾರಿ, ತಾತ್ಕಾಲಿಕ ದುರಸ್ತಿ ಕಾಮಗಾರಿಗಳಿಗಷ್ಟೆ ಸೀಮಿತವಾಗಿದೆ. ಇವುಗಳಿಂದ ಘಟಕದ ಮಾಲಕರಿಗೆ ಹೆಚ್ಚಿನ ಅನುಕೂಲ ಆಗುವುದಿಲ್ಲ. ಇದರಿಂದಾಗಿ ಘಟಕ ಮಾಲಕರು ಘಟಕ ಪುನರಾರಂಭಿಸುವ ಬಗ್ಗೆ ಅಷ್ಟೇನು ಉತ್ಸಾಹ ತೋರುತ್ತಿಲ್ಲ. ಇನ್ನೊಂದು ತಿಂಗಳು ಕಾದು ನೋಡುವ ನಿರ್ಧಾರಕ್ಕೆ ಅವರು ಬಂದಿದ್ದಾರೆ. ಜತೆಗೆ ಮಳೆ ಆಗಾಗ ಬರುತ್ತಿರುವುದೂ ಸಮಸ್ಯೆಯಾಗಿದೆ. ಒಮ್ಮೆ ಘಟಕ ಆರಂಭಿಸಿದರೆ ನಿರಂತರವಾಗಿ ಚಾಲು ಸ್ಥಿತಿಯಲ್ಲಿ ಇಡಬೇಕು. ಕಾರ್ಮಿಕರಿಗೆ ವೇತನ ನೀಡಬೇಕಾದ ಪರಿಸ್ಥಿತಿ ಇದೆ.

ಕಾದು ನೋಡಿ ಆರಂಭ
ಮಳೆಗಾಲದಲ್ಲಿ ಘಟಕದ ಚಟುವಟಿಕೆ ಸ್ಥಗಿತಗೊಳಿಸಿದ್ದೇವೆ. ಮಳೆ ಇನ್ನು ದೂರವಾಗಿಲ್ಲದ ಕಾರಣ ಘಟಕ ಕಾರ್‍ಯಾಂಭಿಸುವುದಕ್ಕೆ ಸ್ವಲ್ಪ ಕಾಲಾವಕಾಶ ಬೇಕಿದೆ. ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಇಲಾಖೆಗಳ ಕಾಮಗಾರಿಗಳು ಸಾಮಾನ್ಯವಾಗಿ ಆರಂಭವಾಗುವುದು ರೂಢಿಯಾಗಿದೆ.
-ಸುರೇಶ್‌ ಶೆಟ್ಟಿ, ತಡಾಲ್‌ ಬ್ರಹ್ಮಾವರ, ಘಟಕ ಮಾಲಕರು, ಗುತ್ತಿಗೆದಾರರು

ಸಾರ್ವಜನಿಕರು ಸಹಕರಿಸಬೇಕು
ರಸ್ತೆ ದುರಸ್ತಿಗೊಳಿಸಿ ಎಂದು ಸಾರ್ವಜನಿಕರಿಂದ ದೂರು, ಒತ್ತಡಗಳಿವೆ. ಮಿಶ್ರಣ ಘಟಕ ಬಂದ್‌ ಆಗಿದ್ದರಿಂದ ತತ್‌ಕ್ಷಣಕ್ಕೆ ದುರಸ್ತಿ ಸಾಧ್ಯವಾಗುತ್ತಿಲ್ಲ. ಮಳೆ ಪೂರ್ಣ ದೂರವಾಗುವವರೆಗೆ ಇಲಾಖೆ ಜತೆ ಸಾರ್ವಜನಿಕರು ಸಹಕರಿಸಬೇಕು.
-ಮಂಜುನಾಥ ನಾಯ್ಕ, ರಾ.ಹೆ ಇಲಾಖೆ ಅಧಿಕಾರಿ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next