Advertisement

ಪಿಂಚಣಿಗೆ ಆಧಾರ್‌ ಲಿಂಕ್‌: ಕರಾವಳಿಯಲ್ಲಿ 6,400 ಮಂದಿ ಬಾಕಿ!

11:31 PM Jul 12, 2023 | Team Udayavani |

ಮಂಗಳೂರು: ಸಾಮಾಜಿಕ ಭದ್ರತ ಯೋಜನೆ ಯಡಿ ವಿವಿಧ ಪಿಂಚಣಿಗಳನ್ನು ಪಡೆಯುತ್ತಿರುವವರು ಕೂಡಲೇ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಿಸಿ “ಎನ್‌ಪಿಸಿಐ ಮ್ಯಾಪಿಂಗ್‌’ ಮಾಡಬೇಕು; ಇಲ್ಲವಾದರೆ ಪಿಂಚಣಿ ಸ್ಥಗಿತವಾಗಬಹುದು!

Advertisement

ಎಲ್ಲ ಪಿಂಚಣಿ ಫಲಾನುಭವಿಗಳನ್ನು ನಿಖರವಾಗಿ ಗುರುತಿಸಲು ಹಾಗೂ ಸರಕಾರದ ಯಾವುದೇ ಸೌಲಭ್ಯ ಪಡೆ ಯಲು ಆಧಾರ್‌ನೊಂದಿಗೆ ಜೋಡಿಸಿ ನೇರ ಹಣ ಸಂದಾಯ ಯೋಜನೆ ಜಾರಿಗಾಗಿ “ಎನ್‌ಪಿಸಿಐ ಮ್ಯಾಪಿಂಗ್‌’ ಕಡ್ಡಾಯ. ಈಗಾಗಲೇ ಬಹು ತೇಕ ಮಂದಿ ಇದನ್ನು ಮಾಡಿದ್ದಾರೆ. ಆದರೆ ಇನ್ನೂ ಸಾವಿರಾರು ಮಂದಿಯ ಮ್ಯಾಪಿಂಗ್‌ ಬಾಕಿ ಇದೆ. ಈ ಪೈಕಿ ಬಹು ಮಂದಿಗೆ ಪಿಂಚಣಿ ಸ್ಥಗಿತವಾಗಿದೆ.

ದಕ್ಷಿಣ ಕನ್ನಡದಲ್ಲಿ 1,78,630 ಮಂದಿ ವಿವಿಧ ಪಿಂಚಣಿ ಪಡೆಯುತ್ತಿದ್ದಾರೆ. ಇದರಲ್ಲಿ ಸುಮಾರು 4,600 ಮಂದಿಯ ಎನ್‌ಪಿಸಿಐ ಮ್ಯಾಪಿಂಗ್‌ ಬಾಕಿ ಇದೆ. ಮ್ಯಾಪಿಂಗ್‌ಗೆ ಜೂನ್‌ ಅಂತ್ಯದ ಗಡುವು ನೀಡಲಾಗಿತ್ತು. ಆದರೆ ಇನ್ನೂ ಹಲವರು ದಾಖಲೆ ನೀಡದ ಕಾರಣ ಅಂತಿಮ ದಿನಾಂಕ ವಿಸ್ತರಣೆ ಆಗಿದೆ.

ಉಡುಪಿ ಜಿಲ್ಲೆಯಲ್ಲಿ 1,48,216 ಮಂದಿ ಪಿಂಚಣಿದಾರರಿದ್ದಾರೆ. ಇವರಲ್ಲಿ 14,155 ಮಂದಿಯ ಎನ್‌ಪಿಸಿಐ ಮ್ಯಾಪಿಂಗ್‌ ಬಾಕಿ ಇತ್ತು. ಈ ಪೈಕಿ ಇಲ್ಲಿಯ ವರೆಗೆ 12,350 ಮಂದಿ ಮಾಡಿದ್ದಾರೆ. ಇನ್ನು 1,805 ಮಂದಿ ಮ್ಯಾಪಿಂಗ್‌ ಬಾಕಿ ಇದೆ.

ಏನಿದು ಯೋಜನೆ?
ಕೇಂದ್ರ ಸರಕಾರದ ಸೂಚನೆಯ ಅನುಸಾರ ನೇರ ಹಣ ಸಂದಾಯ ಯೋಜನೆಯನ್ನು ಶತ ಪ್ರತಿಶತ ಜಾರಿ  ಗೊಳಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನೆಯಡಿ ಪಿಂಚಣಿ ಪಡೆ ಯುತ್ತಿರುವ ಎಲ್ಲ ಫಲಾನು ಭವಿಗಳು ಆಧಾರ್‌ ಜೋಡಣೆ ಮಾಡಲು ಕಳೆದ ವರ್ಷ ಸೆ.15ರ ಗಡುವು ನೀಡಲಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿತ್ತು.

Advertisement

ಪಿಂಚಣಿ ಮರು ಚಾಲನೆ ಅವಕಾಶ ಸೆ. 15ರ ಬಳಿಕ ಫಲಾನುಭವಿಗಳು ತಮ್ಮ ಆಧಾರ್‌ ಹಾಗೂ ಬ್ಯಾಂಕ್‌/ಅಂಚೆ ಖಾತೆ ವಿವರಗಳನ್ನು ಸಲ್ಲಿಸಿದ ಅನಂತರ ಸಂಬಂಧಪಟ್ಟ ತಹ ಶೀಲ್ದಾರರು ಪಿಂಚಣಿ ಮರುಚಾಲನೆಗೊಳಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ತಾತ್ಕಾಲಿಕವಾಗಿ ಸ್ಥಗಿತಗೊಂಡ ಪ್ರಕರಣಗಳನ್ನು ಮರುಚಾಲನೆ ಗೊಳಿಸಿದ ಅನಂತರ ಪಾವತಿ ಬಾಕಿ ಇರುವ ಪಿಂಚಣಿಯನ್ನು ಪಾವತಿಸಲಾಗುತ್ತದೆ.

ಪಿಂಚಣಿ ಲಭ್ಯವಾಗದ ಫಲಾನುಭವಿ ಅಥವಾ ಆಧಾರ್‌ ಸೀಡಿಂಗ್‌ ಆಗದಿದ್ದರೆ ಅಂಥವರು ಪಿಂಚಣಿ ಪಡೆಯುವ ಬ್ಯಾಂಕ್‌ ಅಥವಾ ಅಂಚೆ ಕಚೇರಿಗೆ ತೆರಳಿ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಪಾಸ್‌ ಪುಸ್ತಕವನ್ನು ನೀಡಿ ಎನ್‌ಪಿಸಿಐ ಮ್ಯಾಪಿಂಗ್‌ ಮಾಡಬೇಕು. ಪಿಂಚಣಿ ಸ್ಥಗಿತಗೊಂಡವರ ಮನೆಗೆ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರು ಈಗಾಗಲೇ ಭೇಟಿ ನೀಡುತ್ತಿದ್ದಾರೆ. ಅವರಲ್ಲಿಯೂ ಈ ಬಗ್ಗೆ ಮಾಹಿತಿ ಪಡೆಯಬಹುದು. ಅಂಚೆ ಕಚೇರಿ, ಬ್ಯಾಂಕ್‌ನಲ್ಲಿಯೂ ಇದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. – ಬೋಪಯ್ಯ, ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತ ಯೋಜನೆ, ದ.ಕ. ಜಿಲ್ಲೆ – ರವಿಶಂಕರ್‌, ಸಹಾಯಕ ನಿರ್ದೇಶಕರು (ಪ್ರಭಾರ), ಸಾಮಾಜಿಕ ಭದ್ರತ ಯೋಜನೆ, ಉಡುಪಿ ಜಿಲ್ಲೆ

ಗ್ರಾಮವಾರು ಪರಿಶೀಲನೆ
ಆಧಾರ್‌ ಲಿಂಕ್‌ ಮಾಡದವರ ಗ್ರಾಮವಾರು ಪಟ್ಟಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಅವರು ಪಟ್ಟಿಯ ಅನ್ವಯ ಆಧಾರ್‌ ನಂಬರ್‌, ಒಪ್ಪಿಗೆ ಪತ್ರ ಹಾಗೂ ಪಾಸ್‌ ಬುಕ್‌ ಪ್ರತಿಯನ್ನು ಪಡೆಯುತ್ತಿದ್ದಾರೆ. ಫಲಾನುಭವಿಗಳಿಂದ ಪಡೆದ ಒಂದು ಪ್ರತಿಯನ್ನು ಉಪತಹಶೀಲ್ದಾರರಿಗೆ ಆಧಾರ್‌ ಸೀಡಿಂಗ್‌ ಮಾಡಲು ನೀಡಲಾಗುತ್ತದೆ. ಇನ್ನೊಂದು ಪ್ರತಿಯನ್ನು ಬ್ಯಾಂಕ್‌ ಶಾಖೆವಾರು ವಿಭಜಿಸಿ ಸಂಬಂ«  ‌ಪಟ್ಟ ಬ್ಯಾಂಕ್‌ ಶಾಖೆಗೆ ಕಳುಹಿಸ ಲಾಗು ತ್ತಿದೆ. ಬ್ಯಾಂಕ್‌ ಶಾಖೆ ವ್ಯವಸ್ಥಾಪಕರಿಂದ ಪ್ರತೀ ದಿನ ಎನ್‌ಪಿಸಿಐ ಮ್ಯಾಪಿಂಗ್‌ ನಡೆಸಲಾಗುತ್ತಿದೆ. ಫಲಾನುಭವಿಯು ಹಾಸಿಗೆ ಹಿಡಿದಿದ್ದಲ್ಲಿ ಹಾಗೂ ಬಯೋಮೆಟ್ರಿಕ್‌ ಸಾಧ್ಯವಾಗದಿರುವ “ವಿರಳ ಪ್ರಕರಣ’ದಡಿಯಲ್ಲಿ ಆಧಾರ್‌ ಸೀಡಿಂಗ್‌ ಮಾಡಿ ಅಂಚೆ ಇಲಾಖೆಯ ಮೂಲಕ ಎನ್‌ಪಿಸಿಐ ಮ್ಯಾಪಿಂಗ್‌ ಮಾಡಿಸಲಾಗುತ್ತಿದೆ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next